ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ವೆಂಕಟೇಶ್

Srinivasa Murthy VN
Updated On : 29 Mar 2013, 12:24 pm

ಪಾವಗಡ:  ಜೆಡಿಎಸ್ ಮುಖಂಡ ಕೋಳಿ ಬಾಲಾಜಿ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ಗೆ ಹೆಚ್ಚು ಬಲ ಬಂದಂತಾಗಿರುವುದಾಗಿ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್ ತಿಳಿಸಿದರು. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕ್ರರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಪಕ್ಷದ ರಾಜ್ಯಾಧ್ಯಕ್ಷ ಡಾ.ಪರಮೇಶ್ವರ್, ಸಿದ್ದರಾಮಯ್ಯ ಮುಂತಾದ ರಾಜ್ಯ ಮುಖಂಡರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ವ್ಯಾಪಕವಾಗಿದ್ದು ಚುನಾವಣೆ ನಂತರ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ತುರುವೇಕೆರೆಯಲ್ಲಿ ಚೆಕ್‌ಪೋಸ್ಟ್
ತುರುವೇಕೆರೆ:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ಸದ್ಯ ಮಾಯಸಂದ್ರ ಟಿಬಿ, ಬಾಣಸಂದ್ರ, ತಂಡಗ ಗೇಟ್ ಹಾಗೂ ದಿಡಗ ಬಳಿಯ ಭೀಮ್ ನಹರೆ ಗ್ರಾಮದ ಬಳಿ ಚೆಕ್ ಪೋಸ್ಟ್ ಅನ್ನು ಪ್ರಾರಂಭ ಮಾಡಲಾಗಿದೆ ಎಂದು ಜೆ.ಪಿ.ಮಂಜೇಗೌಡ ತಿಳಿಸಿದ್ದಾರೆ. ಪ್ರತಿ ಚೆಕ್ ಪೋಸ್ಟ್‌ಗಳಲ್ಲಿ ಅಬಕಾರಿ, ಕಂದಾಯ, ಪೋಲಿಸ್ ಹಾಗೂ ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದ ಬಳಿ ಪ್ರತಿಷ್ಠಾಪಿಸಲಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಮೆಗೆ ಮುಸುಕು ಹಾಕಲಾಗಿದೆ.

ಏ. 10ರಿಂದ ಮಕ್ಕಳ ಬೇಸಿಗೆ ಶಿಬಿರ
ರಾಮನಗರ:
ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರವು ಏ.10 ರಿಂದ 30ರವರೆಗೆ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದಲ್ಲಿ ಜಾನಪದ ಹಾಡು, ಜಾನಪದ ನೃತ್ಯ, ಚಿತ್ರಕಲೆ, ತಮಟೆ ವಾದನ, ಕಂಸಾಳೆ, ಪಟ್ಟದ ಕುಣಿತ, ಕೋಲಾಟ ಹಾಗೂ ನಾಟಕ ತರಬೇತಿ ಜತೆಗೆ ಪರಿಸರ ಜ್ಞಾನ, ಪರ್ವತಾರೋಹಣ, ಸಾಹಸ ಕ್ರೀಡೆ, ದೊಣ್ಣೆ ವರಸೆ, ಕತ್ತಿ ವರಸೆ, ಮಲ್ಲಕಂಬ, ಹಗ್ಗದ ಕಸರತ್ತು, ಮಟ್ಟಿಕುಸ್ತಿ ಕುರಿತು ತರಬೇತಿ ನೀಡಲಾಗುವುದು. ಶಿಬಿರದಲ್ಲಿ 12ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳು ಭಾಗವಹಿಸಬಹುದು. ಹೊರಗಿನಿಂದ ಬರುವ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಇದೆ. ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವ ವಿದ್ಯಾರ್ಥಿಗಳು ಏ.5ರೊಳಗೆ ಸಂಚಾಲಕರಾದ ಹಾಸನ ರಘು, ಸಾಹಸ ಕಲಾ ಶಿಕ್ಷಣ ಕೇಂದ್ರ, ರಾಮದೇವರ ಬೆಟ್ಟದ ರಸ್ತೆ, ರಾಮನಗರ ಇವರನ್ನು ಖುದ್ದಾಗಿ ಅಥವಾ ಮೊ. 9483501854, ದೂ.080-27271022 ಸಂಪರ್ಕಿಸಬಹುದು.

ಕ್ಯಾಂಟರ್‌ನಿಂದ ಬಿದ್ದು ಯುವಕ ಸಾವು
ಚನ್ನಪಟ್ಟಣ:
ಚಲಿಸುತ್ತಿದ್ದ ಕ್ಯಾಂಟರ್‌ನಿಂದ ಕೆಳಗೆಬಿದ್ದು ಯುವಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೊಲೂರು ಗೇಟ್ ಸಮೀಪ ಬುಧವಾರ ರಾತ್ರಿ ಸಂಭವಿಸಿದೆ.  ಮಂಜುನಾಥ್(24) ಮೃತ ದುರ್ದೃವಿ. ಕ್ಯಾಂಟರ್‌ನಲ್ಲಿ ಸರಕು ತುಂಬಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಈತನಿಗೆ ತೀವ್ರ ರಕ್ತ ಸ್ರಾವ ವಾಗಿ ಸ್ಥಳದಲ್ಲೇ ಮರಣವಪ್ಪಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲುಷಿತ ನೀರು ಸೇವನೆ: 10 ಅಸ್ವಸ್ಥ
ಮಾಗಡಿ:
ಕಲುಷಿತ ನೀರು ಸೇವನೆಯಿಂದ 10ಕ್ಕೂ ಹೆಚ್ಚು ಮಕ್ಕಳು ವಾಂತಿಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.  ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳು ಕಲುಷಿತ ನೀರು ಸೇವನೆಯಿಂದ ಮಕ್ಕಳು  ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದು, ಅವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ಮಕ್ಕಳು ಚೇತರಿಸಿಕೊಂಡಿದ್ದಾರೆ.ಸುದ್ದಿ ತಿಳಿದ ಕೂಡಲೆ ಶಾಸಕ ಎಚ್.ಸಿ. ಬಾಲಕೃಷ್ಣ  ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿಕೊಂಡರು. ಸೂಕ್ತ ಚಿಕಿತ್ಸೆ ನೀಡುವಂತೆ ಇದೇ ವೇಳೆ  ವೈದ್ಯರಿಗೆ ಸೂಚಿಸಿದರು. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಹೊರಗಡೆ ಮಾರಾಟ ಮಾಡುವ ಆಹಾರ ಪದಾರ್ಥಗಳನ್ನು ಮಕ್ಕಳು ಕೊಂಡು ತಿನ್ನಬಾರದು, ಶುಚಿತ್ವ ಕಾಪಾಡಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆರ್. ಮಂಜುನಾಥ್ ಕರೆ  ಕೊಟ್ಟಿದ್ದು, ಈಗಾಗಲೇ ಪುರಸಭೆ ವತಿಯಿಂದ ಚರಂಡಿಗಳಿಗೆ ಡಿಡಿಟಿ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಾಳೆ ಕೆಜೆಪಿ ಕಾರ್ಯಕರ್ತರ ಸಭೆ
ಮಾಗಡಿ:
ಮಾಗಡಿ ಪಟ್ಟಣದ ಹೊಸೂರು ಕಲ್ಯಾಣ ಮಂಟಪದಲ್ಲಿ ಕೆಜೆಪಿ  ಕಾರ್ಯಕರ್ತರ ಸಭೆಯನ್ನು ಮಾ.30 ರಂದು  ಶನಿವಾರ ಬೆಳಿಗ್ಗೆ 12 ಗಂಟೆಗೆ ಏರ್ಪಡಿಸಲಾಗಿದೆ ಎಂದು ಬ್ಯಾಲಕೆರೆ ಮಹೇಶಯ್ಯ ತಿಳಿಸಿದ್ದಾರೆ. ಕಾರ್ಯಕರ್ತರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿ ಕೋರಿದ್ದಾರೆ.

ಇಂದು ಮಂದಿರವಾರ್ಷಿಕೋತ್ಸವ
ದೊಡ್ಡಬಳ್ಳಾಪುರ:
ಇಲ್ಲಿನ ರಂಗಪ್ಪ ವೃತ್ತದಲ್ಲಿರುವ ಶ್ರೀಶಿರಡಿ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಮಾ.29ರ ಗುರುವಾರ ನಡೆಯಲಿದೆ ಎಂದು ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ತಿಳಿಸಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಸುಗಂಧ ದ್ರವ್ಯಾಭಿಷೇಕ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ವಿಶೇಷ ಅಲಂಕಾರ-ಪೂಜಾ ವಿಧಿ ವಿಧಾನಗಳು ಬೆಳಗ್ಗಿನಿಂದ ರಾತ್ರಿಯವರೆಗೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಎಚ್.ಸಿ. ಕೃಷ್ಣ ನೇಮಕ
ಚನ್ನಪಟ್ಟಣ:
ತಾಲೂಕು ಕಾಂಗ್ರೆಸ್ ಸೇವಾದಳದ ಗ್ರಾಮಾಂತರ ವಿಭಾಗದ ಮುಖ್ಯ ಸಂಘಟಕರಾಗಿ ತಾಲೂಕಿನ ಹೊನ್ನನಾಯ್ಕನ ಹಳ್ಳಿ ಗ್ರಾಮದ ಎಚ್.ಸಿ. ಕೃಷ್ಣರನ್ನು ನೇಮಕ ಮಾಡಿ ಜಿಲ್ಲಾ ಮುಖ್ಯ ಸಂಘಟಕ ಶ್ರೀಕಂಠಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ೇವಾದಳದ ಸಂಘಟಕರಾಗಿ  ತಾಲೂಕಿನಲ್ಲಿ ಸೇವಾದಳದ ಘಟಕವನ್ನು ಬಲಪಡಿಸುವ ಮೂಲಕ  ನಮ್ಮ ಅಧಿನಾಯಕಿ ಸೋನಿಯಾ ಗಾಂಧಿರ ಕೈ ಬಲ ಪಡಿಸಲು ಶ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ದೂರು ಸ್ವೀಕಾರ
ರಾಮನಗರ:
ಜಿಲ್ಲೆಯ ಲೋಕಾಯುಕ್ತ ಡಿವೈಎಸ್‌ಪಿ ಮಾ.30ರಂದು ಬಿಡದಿಯ ನಾಡ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು. ತಾಲೂಕಿನ ಯಾವುದೇ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣ ಕೇಳಿದ್ದಲ್ಲಿ ಅಥವಾ ಉದ್ದೇಶಪೂರ್ವಕ ವಿಳಂಬ ಮಾಡಿದ್ದಲ್ಲಿ ಸಾರ್ವಜನಿಕರು ಅಂತಹ ದೂರುಗಳನ್ನು ಖುದ್ದಾಗಿ ಸಲ್ಲಿಸಬಹುದು.

ಅಪರಿಚಿತ ವ್ಯಕ್ತಿಯಕೊಲೆ
ಚನ್ನಪಟ್ಟಣ:
ಅಪರಿಚಿತ ವ್ಯಕ್ತಿಯನ್ನು ಕೊಲೆಗೈದು ಶವದ ಗುರುತು ಸಿಗದಂತೆ ಸುಟ್ಟುಹಾಕಿರುವ ಘಟನೆ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕೆರೆಯ ಬಳಿ ಸುಮಾರು 25 ವರ್ಷ ವಯಸ್ಸಿನ ಯುವಕನನ್ನು ದುಷ್ಕರ್ಮಿಗಳು ಕೊಲೆಗೈದು ಶವವನ್ನು ಬಿಸಾಡಿ ಹೋಗಿದ್ದಾರೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಧನಗಾಯಿ ಹುಡುಗರು ಕಂಡು ಅಕ್ಕೂರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾ ರಥೋತ್ಸವಕ್ಕೆ ಚಾಲನೆ
ಪಾವಗಡ:
ಮುಜರಾಯಿ ಇಲಾಖೆಗೆ ಸೇರಿದ ವದನಕಲ್ಲು ಗ್ರಾಮದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ತಪೋ ಭೂಮಿಯಲ್ಲಿ ಗುರುವಾರ ಮಧ್ಯಾಹ್ನ ಚಿತ್ತ ನಕ್ಷತ್ರದಲ್ಲಿ ಮಹಾ ರಥೋತ್ಸವಕ್ಕೆ ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಚಾಲನೆ ನೀಡಿದರು.

4ದಿನಗಳ ಜಾತ್ರೆ ಮುಕ್ತಾಯ
ಪಾವಗಡ:
ನಿಡಗಲ್ ವ್ಯಾಪ್ತಿಯ ಕರೇಕ್ಯಾತನಹಳ್ಳಿಯ ಜಾನಪದ ಐತಿಹಾಸಿಕ ಹಿನ್ನೆಲೆ ಪಡೆದ ತಾಯಿ ಸ್ವಾರಮ್ಮದೇವಿಯ 4ದಿನಗಳ ಜಾತ್ರೆ ಯಶಸ್ವಿಯಾಗಿ ಗುರುವಾರ ಮುಕ್ತಾಯವಾಯಿತು. ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ 4ದಿನಗಳ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ
ಚಿಕ್ಕನಾಯಕನಹಳ್ಳಿ:
ಶಿಕ್ಷಕರಿಗೆ ತಾವು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ಅವರು ವರ್ಗಾವಣೆಗೊಂಡು ಹೋಗುವಾಗ ಗೌರವಿಸಿದರೆ ಅದರಿಂದ ಅವರ ಮನಸ್ಸಿಗಾಗುವ ಆನಂದ  ಅಗಣಿತ ಎಂದು ಶಾಲೆಯ ಮುಖ್ಯಶಿಕ್ಷಕ ಜಿ.ಪುಟ್ಟಸ್ವಾಮಿ ನುಡಿದರು. ಅವರು ತಮ್ಮ ಶಾಲೆಯಲ್ಲಿ ಇದುವರೆಗೆ ಕರ್ತವ್ಯ ನಿರ್ವಹಿಸಿದ ಎಸ್.ಬಿ. ನಿಂಗರಾಜು ಮತ್ತುಎಚ್.ಜಿ. ಗಿರೀಶ್ ಅವರು ಮುಖ್ಯಶಿಕ್ಷಕರುಗಳಾಗಿ ಬಡ್ತಿಹೊಂದಿದ್ದು ನಮ್ಮ ಶಾಲೆಗೆ ಹೆಮ್ಮೆ ತರುವ ವಿಷಯ. ಅವರು ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಕ್ಕಳಿಗೆ ನಿರ್ವಂಚನೆಯಿಂದ ಕಲಿಸಿದ್ದಾರೆ. ನಮ್ಮ ಶಾಲೆ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯುವ  ಶಾಲೆಗಳ ಸಾಲಿನಲ್ಲಿ ಬರುವುದು ಸಾಧ್ಯವಾಯಿತು.ಇದಲ್ಲದೆ ಸಿ.ಆರ್.ನಾಗರಾಜು ಅವರು ಮಕ್ಕಳಿಗೆ ಶಿಕ್ಷಣ ನೀಡಿದ ಆದರ್ಶ ಶಿಕ್ಷಕರಾಗಿದ್ದರು ಎಂದರು.

ನಾಳೆ ನ್ಯಾಯಾಲಯ ಉದ್ಘಾಟನೆ
ರಾಮನಗರ:
ಮೊದಲನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ಉದ್ಘಾಟನೆಯು ಮಾ.30ರ ಬೆಳಗ್ಗೆ 10.30ಕ್ಕೆ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆಯಲಿದೆ. ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ನ್ಯಾಯಾಲಯವನ್ನು ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ ಅಧ್ಯಕ್ಷತೆ ವಹಿಸುವರು. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್, ನ್ಯಾಯಾಧೀಶರಾದ ಕೆ.ಸುರೇಶ್, ವಿ.ಪುಷ್ಪಾವತಿ, ಕೆ.ನಾರಾಯಣ ಪ್ರಸಾದ್, ಬಿ.ಕೆ.ಕೋಮಲ, ಕೆ.ಎನ್.ರೂಪ ಭಾಗವಹಿಸುವರು.

ನಾಳೆ ಅಭಿನಂದನಾ ಸಮಾರಂಭ
ರಾಮನಗರ:
ಶಿಕ್ಷಣ ಇಲಾಖೆಯ ವಿಭಾಗ ಮಟ್ಟದ ಪ್ರಶಸ್ತಿ ಪುರಸ್ಕೃತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭವು ಮಾ.30ರ ಮಧ್ಯಾಹ್ನ 2.30ಕ್ಕೆ ನಗರದ ಗುರುಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಯಟ್‌ಣನ ಉಪನಿರ್ದೇಶಕ ಎಂ.ಪಿ.ಮಾದೇಗೌಡ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಹ್ಲಾದ್ ಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಡಯಟ್ ಉಪನಿರ್ದೇಶಕಿ ಡಾ.ಇಂದ್ರಾಣಿ ಭಾಗವಹಿಸುವರು. ವಿಷಯ ಪರಿವೀಕ್ಷಕ ಪಿ.ಸೋಮಲಿಂಗಯ್ಯ, ಡಯಟ್‌ನ ಉಪನ್ಯಾಸಕಿ ಭಾರತಿ, ಹರೀಸಂದ್ರ ಕ್ಲಸ್ಟರ್‌ನ ಸಿಆರ್‌ಪಿ ಡಿ.ಪಿ.ಮೃತ್ಯುಂಜಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಜೆಡಿಎಸ್‌ಗೆ ರಾಜಿನಾಮೆ, ಬಿಜೆಪಿಗೆ ಸೇರ್ಪಡೆ
ದೊಡ್ಡಬಳ್ಳಾಪುರ:
ಜೆಡಿಎಸ್‌ಗೆ ರಾಜಿನಾಮೆ ನೀಡಿದ್ದ ಯುವ ಕಾರ್ಯಕರ್ತ ಜನಪರ ಮಂಜು, ಶಾಸಕ ಜೆ.ನರಸಿಂಹಸ್ವಾಮಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನರಸಿಂಹಸ್ವಾಮಿ ಅವರ ನಾಯಕತ್ವ ಮತ್ತು ಅಭಿವೃದ್ಧಿ ಪ್ರಜ್ಞೆಯನ್ನು ಬೆಂಬಲಿಸಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಜಿ.ಪಂ ಉಪಾಧ್ಯಕ್ಷ ಹನುಮಂತೇಗೌಡ, ತಾ.ಪಂ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣಕುಮಾರ್, ನಗರಭೆ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ, ಜಗದೀಶರೆಡ್ಡಿ ಮತ್ತಿತರರಿದ್ದರು.

ಇಂಗ್ಲಿಷ್ ವ್ಯಾಕರಣ, ಮಾತುಗಾರಿಕೆ ತರಬೇತಿ
ದೊಡ್ಡಬಳ್ಳಾಪುರ: 
ಇಲ್ಲಿನ ಶ್ರೀಗಾಯತ್ರಿ ಪೀಠ ಮಿತ್ರ ಬಳಗದ ನೇತೃತ್ವದಲ್ಲಿ ಯುವ ಬಳಗ ಮತ್ತು ಮಹಿಳಾ ಬಳಗದ ಸಹಯೋಗದಲ್ಲಿ ಇಂಗ್ಲಿಷ್ ವ್ಯಾಕರಣ ಕಲಿಕೆ ಮತ್ತು ಮಾತುಗಾರಿಕೆ ತರಬೇತಿ ಶಿಬಿರ ಪ್ರೌಢಶಾಲಾ ಮತ್ತು ಕಾಲೇಜು ಹಂತದ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ. ತರಗತಿಗಳು ಏ.14ರಿಂದ ಆರಂಭವಾಗಲಿದ್ದು, ಬೆಳಗ್ಗೆ 8ರಿಂದ 9 ಮತ್ತು ಸಂಜೆ 5ರಿಂದ 8ರವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಎಲ್.ಎನ್.ನಾಗರಾಜ್(9743782402) ಸಂಪರ್ಕಿಸಬಹುದು. ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ: ಟ್ರಸ್ಟ್‌ನ ನೇತೃತ್ವದಲ್ಲಿ ಶ್ರೀದೇವರ ದಾಸಿಮಯ್ಯ ಜಯಂತ್ಯುತ್ಸವ ಅಂಗವಾಗಿ ಗಾಯತ್ರಿ ಪೀಠ ಮಹಿಳಾ ಬಳಗದ ವತಿಯಿಂದ ಮೆಹಂದಿ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಏ.14ರ ಭಾನುವಾರ ಬೆಳಗ್ಗೆ 10ರಿಂದ ಮೆಹಂದಿ ಹಾಕುವ ಸ್ಪರ್ಧೆ ಮತ್ತು ಸಂಜೆ 3 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಹೆಸರುಗಳನ್ನು ನೋಂದಾಯಿಸಲು ಏ.13 ಕಡೆಯ ದಿನವಾಗಿದ್ದು, ಪ್ರತಿ ಹಂತದಲ್ಲೂ 3 ವಿಶೇಷ ಬಹುಮಾನ ಮತ್ತು 3 ಸಮಾಧಾನಕರ ಬಹುಮಾನಗಳಿವೆ. ಆಸಕ್ತರು ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಬಿಜೆಪಿಯಿಂದಲೇ ಸ್ಪರ್ಧಿಸುವೆ, ಯಾವುದೇ ಅನುಮಾನ ಬೇಡ: ಕೃಷ್ಣಯ್ಯಶೆಟ್ಟಿ ಸ್ಪಷ್ಟನೆ
ಮಾಲೂರು:
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಗುರ್ತಿನಲ್ಲೇ ಸ್ವರ್ಧಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದು ಶಾಸಕ ಕೃಷ್ಣಯ್ಯ ಶೆಟ್ಟಿ ಸ್ಪಷ್ಟಪಡಿಸಿದರು.  ಪಟ್ಟಣದ ವೈಟ್ ಗಾರ್ಡ್‌ನ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಿ ಸ್ಪರ್ಧಿಸುತ್ತಾರೆ ಎಂಬ ಗಾಳಿ ಸುದ್ದಿಗೆ ವಿರಾಮ ಹಾಕಿದ ಶಾಸಕರು, ಬಿಜೆಪಿ ವರಿಷ್ಠರು ಮೊದಲ ಪಟ್ಟಿಯಲ್ಲೇ ನಿಮ್ಮ ಹೆಸರಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡಿ ಕಳೆದ ಬಾರಿಕ್ಕಿಂತ ಇನ್ನೂ ಹೆಚ್ಚಿನ ಅಂತರದಲ್ಲಿ ಗೆದ್ದು ಬನ್ನಿ ಎಂದು ತಿಳಿಸಿದ್ದು, ತಮ್ಮ ಅವಧಿಯಲ್ಲ ಮಾಲೂರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತದಾರರ ಮುಂದಿಟ್ಟು, ಕಾರ್ಯಕರ್ತರು ಇಂದಿನಿಂದಲೇ ಬಿಜೆಪಿ ಗೆಲವಿಗಾಗಿ ದುಡಿಯಬೇಕು ಎಂದು ಕಿವಿಮಾತು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ನಾರಾಯಣಗೌಡ, ತಾಪಂ ಅಧ್ಯಕ್ಷ ಚಂದ್ರಪ್ಪ, ಪುರಸಭೆ ಸದಸ್ಯರಾದ ಎಂ.ಪಿ.ವಿಜಯಕುಮಾರ್, ವೇಮನ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣಾರೆಡ್ಡಿ, ಎಪಿಎಂಸಿ ಅಧ್ಯಕ್ಷ ಕೆ.ಆರ್.ಬೀರಪ್ಪ, ಜಿ.ಪಂ.ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಯಶೋಧಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement