ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರಿ ವ್ಯವಸ್ಥೆಯಿಂದ ಮತದಾನಕ್ಕೆಪ್ರೇರೇಪಿಸುವ ಪ್ರಯೋಗ: ಡಿಸಿ

Srinivasa Murthy VN
Updated On : 29 Mar 2013, 12:23 pm

ಕ.ಪ್ರ.ವಾರ್ತೆ ರಾಮನಗರ ಮಾ. 28
ಮತದಾರರ ಕ್ರಮ ಸಂಖ್ಯೆ, ಭಾಗದ ಸಂಖ್ಯೆಯ ವಿವರವುಳ್ಳ ಚೀಟಿಯನ್ನು ಮತದಾನಕ್ಕೆ ಒಂದು ದಿನ ಮುಂಚೆಯೇ ಮನೆ ಮನೆಗೆ ತಲುಪಿಸುವ ಜತೆಗೆ ಮತದಾನಕ್ಕೆ ಪ್ರೇರೇಪಿಸುವ ಪ್ರಯೋಗ ಈ ಬಾರಿ ಸರ್ಕಾರಿ ವ್ಯವಸ್ಥೆಯಿಂದಲೇ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಹೇಳಿದರು.  
ಇಲ್ಲಿವರೆಗೆ ರಾಜಕೀಯ ಪಕ್ಷಗಳು ಇಲ್ಲವೇ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆ ಹೊರಗೆ ಟೇಬಲ್ ಹಾಕಿಕೊಂಡು, ಚೀಟಿ ಬರೆದುಕೊಡುತ್ತಿದ್ದರು. ಚೀಟಿ ಹಿಂದೆ ಅಭ್ಯರ್ಥಿ ಭಾವಚಿತ್ರ, ಚಿಹ್ನೆ ಇರುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಹೊಸ ವ್ಯವಸ್ಥೆ ಪ್ರಯೋಗಿಸಲಾಗುತ್ತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಕ್ತ, ನಿರ್ಭೀತ, ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಮತದಾರರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಚೀಟಿ ಹಂಚಿಕೆ, ಮತದಾನಕ್ಕೆ ಪ್ರೇರೇಪಣೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಹೋಬಳಿವಾರು ತಂಡ: ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹೋಬಳಿವಾರು ತಂಡಗಳನ್ನು ರಚಿಸಲಾಗಿದೆ. 4 ಚೆಕ್ ಪೋಸ್ ಸ್ಥಾಪಿಸಲಾಗಿದೆ. 11 ಸ್ಥಾನಿಕ ತಂಡಗಳು ಮತ್ತು 22 ಸಂಚಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ನವೀನ್‌ರಾಜ್ ಸಿಂಗ್ ವಿವರಿಸಿದರು.
ಮಾಹಿತಿ ಪಡೆದು ಕ್ರಮ: ಕನಕಪುರದಲ್ಲಿ ಅಭ್ಯರ್ಥಿಯೊಬ್ಬರು ಮತದಾರರಿಗೆ ವಾಚ್, ಸೀರೆ, ಟಿಷರ್ಟ್ ಹಂಚಿದ್ದಾರೆಂದು ಪ್ರತಿಸ್ಪರ್ಧಿ ಮಾಡಿರುವ ಆರೋಪ ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಮಾಹಿತಿ ಪಡೆದು, ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜು
ಕ.ಪ್ರ.ವಾರ್ತೆ ಚನ್ನಪಟ್ಟಣ ಮಾ. 28

ಏ.1 ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕು ಶಿಕ್ಷಣ ಇಲಾಖೆ ಸಿದ್ಧಗೊಂಡಿದೆ. ಈಭಾರಿ 1555 ಗಂಡು, 1635 ಹೆಣ್ಣು ಮಕ್ಕಳು ಸೇರಿದಂತೆ 3190 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ತಾಲೂಕಿನ 5 ಪ್ರೌಢಶಾಲೆಗಳಿಂದ 3131ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆಗೆ ಕೂರಲಿದ್ದು, 59 ಮಂದಿ ಹಳೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಟ್ಟಣದಲ್ಲಿ 4 ಗ್ರಾಮೀಣ ಪ್ರದೇಶದಲ್ಲಿ 9 ಪರೀಕ್ಷಾ ಕೆಂದ್ರಗಳನ್ನು ನಿಗದಿ ಪಡಿಸಿದ್ದು ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲೂ ವಿದ್ಯಾರ್ಥಿಗಳಿಗೆ ಪೀಠೋಪಕರಣದ ವ್ಯವಸ್ಥೆ ಕಲ್ಪಿಸಲಾಗಿದೆ. ಏ. 1 ರಂದು ಪ್ರಥಮ ಭಾಷೆ, ಏ.3 ರಂದು ವಿಜ್ಞಾನ, ಏ.5ರಂದು ದಿತೀಯ ಭಾಷೆ, ಏ.8ರಂದು ಗಣಿತ, ಏ.10 ರಂದು ತೃತೀಯ ಭಾಷೆ, ಏ.11 ರಂದು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಬೆಳಿಗ್ಗೆ 9.30 ರಿಂದ ಪರೀಕ್ಷೆಗಳು ಆರಂಭ ಗೊಳ್ಳಲಿದ್ದು ವಿದ್ಯಾರ್ಥಿಗಳು ಬೆಳಿಗ್ಗೆ 9.10ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದ್ದಾರೆ. ಆಯಾ ಶಾಲಾ ಮುಖ್ಯಸ್ಥರಿಗೆ ಅದಾಗಲೇ ಪ್ರವೇಶ ಪತ್ರವನ್ನು ತಲುಪಿಸಲಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆ ಆರಂಭ ವಾಗುವ ಒಂದು ಗಂಟೆ ಮುಂಚಿತವಾಗಿ ಸಂಬಂಧಿಸಿದ ಪರೀಕ್ಷಾ ಕೆಂದ್ರಗಳಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ಪರೀಕ್ಷೆ ಮುಗಿಯುತ್ತಿದ್ದಂತೆ ಅದೇದಿನ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಕೇಂದ್ರಕ್ಕೆ ತಲುಪಿಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಿದ್ದು, ಇಬ್ಬರು ಸ್ಥಾನಿಕ ಜಾಗೃತ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇವರ ಜತೆಗೆ ತಾಲೂಕು ಮಟ್ಟದ ವಿಶೇಷ ಜಾಗೃತ ದಳವನ್ನು ರಚಿಸಲಾಗಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಶಿಕ್ಷಣ ಇಲಾಖೆ ಸಜ್ಜಾಗಿರುವುದಾಗಿ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement