ನಿತ್ಯಾನಂದ ಆಯ್ತು, ಈಗ ಶಿವಸಾಯಿಬಾಬಾ ರಾಸಲೀಲೆ
ಚಿಕ್ಕಬಳ್ಳಾಪುರ: 'ರಾ ಬಂಗಾರು.., ರಾ ಬಂಗಾರು..' ಎಂದು ಸಂಬೋಧಿಸಿ ತಮ್ಮ ಕಡೆಗೆ ಗಮನ ಸೆಳೆಯುತ್ತ ನಗರದ ಹೊರ ವಲಯದಲ್ಲಿ ಆಶ್ರಮ ನಡೆಸುತ್ತಿರುವ ಹಾರೋಬಂಡೆ ಶಿವಸಾಯಿ ಬಾಬಾ ಅವರು ಬಿಡದಿಯ ನಿತ್ಯಾನಂದನ ರೀತಿಯಲ್ಲಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಸದ್ಯಕ್ಕೆ ಶಿವಸಾಯಿ ಬಾಬಾ ಮತ್ತು ಅವರ ಹಿಂಬಾಲಕರು ಆಶ್ರಮದಿಂದ ನಾಪತ್ತೆಯಾಗಿದ್ದಾರೆ.
ಖಾಸಗಿ ಚಾನೆಲ್ವೊಂದು ಕುಟುಕು ಕಾರ್ಯಾಚರಣೆ ನಡೆಸಿ ಕಾವಿಧಾರಿ ಶಿವಸಾಯಿ ಬಾಬಾ ಸ್ವಾಮೀಜಿ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ದೃಶ್ಯಾವಳಿಗಳನ್ನು ಪ್ರಸಾರ ಮಾಡುತ್ತಿದ್ದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಆಶ್ರಮಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿವೆ. ಆಂಧ್ರ ಮೂಲದ ಶಿವಸಾಯಿ ಬಾಬಾ ಕಳೆದ ಏಳೆಂಟು ವರ್ಷಗಳ ಹಿಂದೆ ಪುಟ್ಟಪರ್ತಿ ಸಾಯಿಬಾಬಾ ಗೆಟಪ್ನಲ್ಲಿ ಕಾಣಿಸಿಕೊಂಡು ತಾಲೂಕಿನ ಹಾರೋಬಂಡೆ ಬಳಿ ಶಿವಸಾಯಿ ಬಾಬಾ ಆಶ್ರಮ ಪ್ರಾರಂಭಿಸಿದ್ದಾರೆ. ಶಿವಸಾಯಿ ಬಾಬಾ ಹೆಸರಿನಲ್ಲಿ ಟ್ರಸ್ಟ್ ಅನ್ನು ಸಹ ನಡೆಲಾಗುತ್ತಿತ್ತು. ರಾಸಲೀಲೆ ಹೊರ ಬಿದ್ದಿದ್ದರಿಂದ ಕರ್ನಾಟಕ ಜನಪರ ವೇದಿಕೆ, ಕರುನಾಡ ಕನ್ನಡ ಸೇನೆ, ಜಯ ಭಾರತ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳವರು ಭಾನುವಾರ ಆಶ್ರಮದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆಶ್ರಮದ ಬಾಗಿಲನ್ನು ಕಿತ್ತು ಒಳಗೆ ನುಗ್ಗಿ ಪೀಠೋಪಕರಣ ಧ್ವಂಸಕ್ಕೆ ಮುಂದಾದರು. ಆಶ್ರಮದ ಮುಂದೆ ಹಾಕಿದ್ದ ಶಿವಸಾಯಿ ಬಾಬಾ ಅವರ ಬ್ಯಾನರ್, ಕಟೌಟ್ಗಳನ್ನು ಬೆಂಕಿಗೆಸೆದು ಸುಟ್ಟರು. 'ನನ್ನ ವಿರುದ್ದ ಷಡ್ಯಂತ್ರ ನಡೆಸಲಾಗಿದ್ದು. ಆರೋಪ ಸತ್ಯಕ್ಕೆ ದೂರವಾಗಿದೆ. ನಾನು ಸತ್ಯವಂತ. ಯಾವುದೇ ತಪ್ಪು ಮಾಡಿಲ್ಲ' ಎಂದು ಶಿವಸಾಯಿಬಾಬಾ ಸ್ಪಷ್ಟಪಡಿಸಿದ್ದಾರೆ.