ಬೊಂಬೆನಗರಿಯಲ್ಲಿ ರಾಜಕೀಯ ತಾಪ
-ಸು.ನಾ.ನಂದಕುಮಾರ್
ಚನ್ನಪಟ್ಟಣ: ಬಿಸಿಲ ಬೇಗೆಯಿಂದ ಬಸವಳಿದಿರುವ ಬೊಂಬೆನಗರಿಯಲ್ಲೀಗ ರಾಜಕೀಯ ಕಾವು ತೀವ್ರ ಗೊಂಡಿದೆ.
ಒಕ್ಕಲಿಗರ ಶಕ್ತಿ ಕೇಂದ್ರವೆನಿಸಿರುವ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯ ಸಾಧಿಸಲು ಸೆಣಸಾಡುತ್ತಿದ್ದು ನಾಯಕರ ಒಳಜಗಳದಿಂದ ನಾಲ್ಕು ಚುನಾವಣೆಗಳಲ್ಲಿ ಸೋಲುಕಂಡಿರುವ ತಾಲೂಕು ಜೆಡಿಎಸ್‌ಗೆ ಚೈತನ್ಯ ತುಂಬಲು ಅನಿತಾಕುಮಾರಸ್ವಾಮಿ ಕಣಕ್ಕಿಳಿದಿರುವುದು ರಾಜಕೀಯ ಅಖಾಡವನ್ನು ರಂಗೇರಿಸಿದೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಮಾಜಿ ಸಚಿವ ಯೋಗೇಶ್ವರ್ ಐದನೇ ಬಾರಿಗೆ ಗೆಲವು ಸಾಧಿಸುವ ತವಕದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕ್ಷೇತ್ರದಾದ್ಯಂತ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅದಾಗಲೇ ಚುನಾವಣಾ ಪ್ರಚಾರ ಆರಂಭಿಸಿ ಚುನಾವಣಾ ಜ್ವರ ತಾಲೂಕಿನಾದ್ಯಂತ ಹಬ್ಬಲು ಕಾರಣರಾಗಿದ್ದಾರೆ.
ಕ್ಷೇತ್ರ ಮಹಿಮೆ: ಬೆಂ-ಮೈ ಹೆದ್ದಾರಿಯಲ್ಲಿರುವ ಚನ್ನಪಟ್ಟಣ ಬೊಂಬೆಗಳ ತಯಾರಿಕೆಗೆ ಪ್ರಸಿದ್ಧಿಯಾಗಿರುವಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಇಲ್ಲಿ ನಡೆದ ಕೋಮುಗಲಭೆಗಳು ಸರ್ಕಾರಗಳನ್ನು ಉರುಳಿಸಿದರೆ. ಈ ನೆಲದಲ್ಲಿ ಹುಟ್ಟಿದ ನೀರಾ ಚಳವಳಿ ಜೆಡಿಎಸ್‌ಗೆ ರಾಜ್ಯರಾಜಕಾರಣದಲ್ಲಿ ರೀಎಂಟ್ರಿ ಕೊಟ್ಟಿತು.
2009 ರಿಂದ ಬಿಜೆಪಿಯ ಆಪರೇಷನ್ ಕಮಲಕ್ಕೆ ಇಬ್ಬರು ಶಾಸಕರು ಬಲಿಯಾಗುವ ಮೂಲಕ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ಬೊಂಬೆಬೀಡು, ಕಳೆದ 5 ವರ್ಷಗಳಲ್ಲಿ ನಾಲ್ಕು ವಿಧಾನ ಸಭಾ ಚುನಾವಣೆಯನ್ನು ಕಂಡ ರಾಜ್ಯದ ಏಕೈಕ ಕ್ಷೇತ್ರ.
1983 ರಿಂದ ಜನತಾ ಪರಿವಾರದ ಭದ್ರ ಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲಿ ಯೋಗೇಶ್ವರ್ ಒಮ್ಮೆ ಪಕ್ಷೇತರವಾಗಿ ಮತ್ತೊಮ್ಮೆ ಬಿಜೆಪಿಯಿಂದ ಎರಡುಬಾರಿ ಕಾಂಗ್ರೆಸ್‌ನಿಂದ ಗೆಲವು ಸಾಧಿಸಿ 5ನೇ ಬಾರಿಗೆ ಶಕ್ತಿಪರೀಕ್ಷೆಗಿಳಿದಿದ್ದಾರೆ. ತನ್ನ ಶಕ್ತಿ ಕೇಂದ್ರದಲ್ಲಿ ನೆಲೆಯೂರುವ ತವಕದೊಂದಿಗೆ ಅನಿತಾಕುಮಾರಸ್ವಾಮಿಯವರನ್ನು ಜೆಡಿಎಸ್ ವರಿಷ್ಠರು ಕಣಕ್ಕಿಳಿಸಿದ್ದು ಚುನಾವಣಾ ಅಖಾಡ ಕುತೂಹಲದ ಕೇಂದ್ರವಾಗಿದೆ.
ರಾಜ್ಯದ ಮೊದಲ ವಿಧಾನಸಭಾ ಸ್ಪೀಕರ್ ಈ ತಾಲೂಕಿನ ವಿ. ವೆಂಕಟಪ್ಪ, ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಕೆ.ಪುಟ್ಟರಾಮೇಗೌಡ, ರೇಷ್ಮೆ ಸಚಿವರಾಗಿದ್ದ ವರದೇಗೌಡ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಜೆ.ಲಿಂಗೇಗೌಡ ರಂತಹ ರಾಜಕಾರಣಿಗಳನ್ನು ಕಂಡ ತಾಲೂಕು ಜಗತ್ಪ್ರಸಿದ್ದ ಅರ್ಥಶಾಸ್ತ್ರಜ್ಞ ವೆಂಕಟಗಿರೀಗೌಡ, ಕರ್ನಾಟಕ ರತ್ನ ದೇ. ಜವರೇಗೌಡ ರಂತಹ ಮೇರು ವ್ಯಕ್ತಿಗಳಿಗೆ ಜನ್ಮನೀಡಿದ ಹಿರಿಮೆ ಈ ಕ್ಷೇತ್ರದ್ದು.
ಬಲಾಬಲ: ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದು, ಗ್ರಾಮ ಪಂಚಾಯಿತಿ ಗಳ ಪೈಕಿ 25ರಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದರೆ, 5 ಜಿಲ್ಲಾ ಪಂಚಾಯಿತಿಗಳಲ್ಲಿ ಎಲ್ಲವೂ ಜೆಡಿಎಸ್ ತೆಕ್ಕೆಯಲ್ಲಿದೆ. ಉಳಿದಂತೆ 19 ತಾ.ಪಂ ಗಳಲ್ಲಿ ಜೆಡಿಎಸ್ 15 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದು ನಗರಸಭೆಯ 31 ಸದಸ್ಯರಲ್ಲಿ 16 ಮಂದಿ ಜೆಡಿಎಸ್‌ನವರಾಗಿದ್ದರೆ 13 ಮಂದಿ ಕಾಂಗ್ರೆಸ್‌ನವರು.
ಯೋಗೇಶ್ವರ್ ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ತೊರೆದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು, ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಲ್ಲದೆ ಎರಡು ವಿಧಾನ ಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿತ್ತು.
ಬರದ ನಾಡಿನಲ್ಲಿ ಭರವಸೆಯ ಹೊಳೆ: ತಾಲೂಕಿನ ಜನತೆಯನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ನೀರಾವರಿ, ಕಳೆದ 10 ವರ್ಷಗಳಿಂದ ಮಳೆಯ ಕೊರತೆಯ ಎದುರಿಸುತ್ತಿರುವ ಬೊಂಬೆನಾಡು ಬಿಸಿಲ ಬೇಗೆಯಿಂದ ಬಸವಳಿದಿದ್ದು, ಭೂಮಿಯನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ಜನತೆಗೆ ಮರ್ಮಾಘಾತವಾಗಿದೆ. ತಾಲೂಕಿನ ಜೀವನಾಡಿ ಎನಿಸಿದ ಕಣ್ವ ತುಂಬಿ ದಶಕಗಳೇ ಕಳೆದಿದ್ದು, ರೈತರು ನಂಬಿದ್ದ ಕೊಳವೆ ಬಾವಿಗಳು ಇದೀಗ ಕೈ ಕೊಟ್ಟಿವೆ. ಸಾವಿರ ಅಡಿ ಆಳಕ್ಕಿಳಿದರೂ ಬೊಗಸೆತುಂಬುವಷ್ಟು ಗಂಗೆ ದೊರೆಯದೆ ಕೃಷಿ ಚಟುವಟಿಕೆಗಿರಲಿ ಜನಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಇದನ್ನೇ ಬಂಡವಾಳ ವಾಗಿಸಿ ಕೊಳ್ಳಲು ಹವಣಿಸುತ್ತಿರುವ ರಾಜಕಾರಣಿಗಳು ಭರವಸೆಯ ಹೊಳೆಯನ್ನೇ ಹರಿಸುತ್ತಿದ್ದು ನೀರಾವರಿ ಈಬಾರಿಯ ಚುನಾವಣೆಯ ಪ್ರಮುಖ ವಸ್ತುವಾಗಿದೆ.
ಇಗ್ಗಲೂರು ಜಲಾಶಯದಿಂದ ತಾಲೂಕಿನ ಕೆಲ ಕೆರೆಗಳಿಗೆ ನೀರು ತುಂಬಿದ್ದು, 15 ವರ್ಷಗಳಿಂದ ನೀರು ಬರುತ್ತದೆಂದು ಕಾಯ್ದಿದ್ದ ಆಭಾಗದ ಜನತೆ ನಿಟ್ಟುಸಿರು ಬಿಡುತ್ತಿದ್ದರೆ, ಈ ಯೋಜನೆಯ ಕ್ರೆಡಿಟ್‌ಗಾಗಿ ಜೆಡಿಎಸ್ ಮತ್ತು ಯೋಗೇಶ್ವರ್ ನಡುವೆ ಜಟಾಪಟಿ ನಡೆದಿದೆ.
ಈ ಯೋಜನೆಯನ್ನು ನಾನು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ಮಾಡಿದ್ದೆಂದು ಯೋಗೇಶ್ವರ್ ಹೇಳುತ್ತಿದ್ದರೆ, ಇತ್ತ ಅನಿತಾಕುಮಾರಸ್ವಾಮಿ ನಮ್ಮ ಮಾವ ದೇವೇಗೌಡರು ನೀಡಿದ ಯೋಜನೆಯನ್ನು ಯೋಗೇಶ್ವರ್ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇತ್ತ ಯೋಗೇಶ್ವರ್ 198 ಕೋಟಿ ರು. ಮೊತ್ತದ ಕಣ್ವ ಏತನೀರಾವರಿ ಯೋಜನೆಯನ್ನು ಬಿಜೆಪಿ ಸರ್ಕಾರದಲ್ಲಿ ಮಂಜೂರು ಮಾಡಿಸಿದ್ದು ಇದನ್ನು ಅನುಷ್ಠಾನ ಗೊಳಿಸಲು ನನ್ನನ್ನು ಬೆಂಬಲಿಸಿ ಎನ್ನುತ್ತಿದ್ದರೆ, ಜೆಡಿಎಸ್ ಇದೆಲ್ಲ ಯೋಗೇಶ್ವರ್ ಗಿಮಿಕ್ ಎಂದು ಟೀಕಿಸುತ್ತಿದ್ದು ಮುಗ್ಧ ಮತದಾರರು ಇಬ್ಬರ ಕಾದಾಟವನ್ನು ಮೌನವಾಗೇ ವೀಕ್ಷಿಸುತ್ತಿದ್ದಾರೆ.
ಸಾಕಷ್ಟು ಸಮಸ್ಯೆ ಸವಾಲುಗಳ ನಡುವೆಯೂ ರಾಜಕಾರಣವನ್ನೇ ಉಸಿರಾಡಿ ಉಂಡೆದ್ದು ಮಲಗುವ ಬೊಂಬೆನಗರಿಯ ರಾಜಕಾರಣಿಗಳು 2013ರ ಮೇಘಾ ಪೈಟ್‌ಗೆ ಅಣಿಯಾಗಿದ್ದು, ಕ್ಷೇತ್ರದ ಮತದಾರರು ಕೊನೆಕ್ಷಣದಲ್ಲಿ ಯಾರಿಗೆ ಒಲವು ತೋರಿಯಾರೆಂದು ಕಾಯ್ದು ನೋಡ ಬೇಕಿದೆ.