ಎಂ.ಟಿ.ಬಿ.ನಾಗರಾಜುಗೆ ಸಚಿವ ಸ್ಥಾನ ನೀಡಿ
ನೆಲಮಂಗಲ: ಗಣನೀಯ ಪ್ರಮಾಣದಲ್ಲಿ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಭಿವೃದ್ಧಿ ಮತ್ತು ಇತರೆ ವಿಷಯಗಳಲ್ಲಿ ಸಾಕಷ್ಟು ಒತ್ತಡ ಇರುವುದರಿಂದ ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂ.ಟಿ.ಬಿ.ನಾಗರಾಜು ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಮಂತ್ರಿಯನ್ನಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ದಾಬಸ್ಪೇಟೆಯ ಗೋವಿಂದರಾಜು ಮತ್ತು ನೆಲಮಂಗಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿದ್ದರಾಮು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅಷ್ಟಕಷ್ಟೆ ಇದ್ದು ಜಿಲ್ಲಾ ಆಡಳಿತವು ವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಗ್ರಾಮಾಂತರ ಜಿಲ್ಲೆಗೆ ಸಚಿವ ಸ್ಥಾನ ಅವಶ್ಯಕತೆ ಇದೆ. ಇಲ್ಲಿನ ಪರಿಸ್ಥಿತಿಯನ್ನು ಸಂಪೂರ್ಣ ಅರಿತಿರುವ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ವರಿಷ್ಠರೊಂದಿಗೆ ಚರ್ಚಿಸಿ ಹೊಸಕೋಟೆಯ ಶಾಸಕ ನಾಗರಾಜು ಅವರಿಗೆ ಮಂತ್ರಿ ಪದವಿಯನ್ನು ನೀಡುವಂತೆ ನೆಲಮಂಗಲ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮೈಸೂರು; ಬಿಎಫ್ಎ ಪ್ರವೇಶಕ್ಕೆ ಆಹ್ವಾನ
ರಾಮನಗರ: ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ ಪ್ರಥಮ ಮೂಲ ತರಗತಿ, ಪ್ರಥಮ ಬಿಎಫ್ಎ ತರಗತಿ ಪ್ರವೇಶಕ್ಕಾಗಿ 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಿದೆ. ಪ್ರಥಮ ಬಿಎಫ್ಎ ತರಗತಿಗಳಲ್ಲಿ ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ(ಗ್ರಾಫಿಕ್ಸ್) ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ, ಕಲಾ ಇತಿಹಾಸ ಈ ವಿಷಯಗಳಲ್ಲಿ ತರಗತಿ ನಡೆಸಲಾಗುವುದು. ವಿದ್ಯಾರ್ಹತೆ ಪ್ರಥಮ ಮೂಲ ತರಗತಿಗೆ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಉತ್ತೀರ್ಣ, ಪ್ರಥಮ ಬಿಎಫ್ಎಗೆ ದ್ವಿತಿಯ ಮೂಲ ತರಗತಿ ಅಥವಾ ತತ್ಸಮಾನ. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣಾ ಪತ್ರಿಕೆಯನ್ನು ಖುದ್ದಾಗಿ ರು.125 ಪಾವತಿಸಿ ಅಥವಾ ಡೀನ್ಕಾವಾ, ಮೈಸೂರು ಇವರ ಹೆಸರಿನಲ್ಲಿ ರು.150 ಡಿಡಿ ಪಡೆದು ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ಪ್ರಥಮ ಮೂಲ ತರಗತಿಗಳಿಗೆ ಅರ್ಜಿ ಸಲ್ಲಿಸಲು ಜೂ.4, ಕಡೆಯ ದಿನವಾಗಿದ್ದು, ಜೂ.11 ರಂದು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಿಟಿಐ ಕಟ್ಟಡದಲ್ಲಿ ಅರ್ಹತಾ ಪರೀಕ್ಷೆಯು ಬೆಳಗ್ಗೆ 11ಕ್ಕೆ ಹಾಗೂ 2ಕ್ಕೆ ವೈಯಕ್ತಿಕ ಸಂದರ್ಶನ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೂ 0821-2438931 ಸಂಪರ್ಕಿಸಬಹುದು.
ಹಿಂದುಳಿದವರ ಹಾಸ್ಟೆಲ್ಗೆ ಅರ್ಜಿ
ರಾಮನಗರ: ಚನ್ನಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 2013-14ನೇ ಸಾಲಿಗೆ ಹೊಸದಾಗಿ ಸೇರಿಸಿಕೊಳ್ಳಲು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಅಥವಾ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂ.10ರೊಳಗೆ ಸಲ್ಲಿಸಬಹುದು. ವಿದ್ಯಾರ್ಥಿನಿಲಯಗಳಲ್ಲಿ ಉಚಿತ ಊಟ ವಸತಿ ಜತೆ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ನೀಡಲಾಗುವುದು. ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲಾಗುವುದು. ಎಸ್ಎಸ್ಎಲ್ಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಚನ್ನಪಟ್ಟಣ ಟೌನ್ ಹಾಗೂ ಬೇವೂರು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಅರಳಾಳುಸಂದ್ರ, ಚಿಕ್ಕಮಳೂರು, ತಗಚಗೆರೆ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಚನ್ನಪಟ್ಟಣ ಟೌನ್ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಅವಿವಾಹಿತ ಪುರುಷರಿಂದ ಅರ್ಜಿ
ರಾಮನಗರ: ಭಾರ ತೀಯ ವಾಯುದಳವು ಅವಿವಾಹಿತ ಪುರುಷ ಭಾರತೀಯ ನಾಗರಿಕರಿಂದ ಏರ್ಮ್ಯಾನ್ ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅಥವಾ ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರೂಮೆಂಟೇಷನ್ ಟೆಕ್ನಾಲಜಿ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿಗಳ ಮೂರು ವರ್ಷದ ಡಿಪ್ಲೊಮೋ ಕೋರ್ಸ್ಗಳಲ್ಲಿ ಶೇ.50ಕ್ಕೂ ಹೆಚ್ಚು (ಆಂಗ್ಲಭಾಷೆ ಪರೀಕ್ಷೆಯಲ್ಲಿ ಶೇ 50 ಅಂಕಗಳನ್ನು ಪಡೆದಿರಬೇಕು) ಅಂಕ ಗಳಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಡಿಪ್ಲೊಮೋದಲ್ಲಿ ಆಂಗ್ಲ ಭಾಷೆಯ ವಿಷಯವಿಲ್ಲದಿದ್ದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯ ಆಂಗ್ಲಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದು. 1993ರ ಸೆಪ್ಟಂಬರರ್ನಿಂದ 1996ರ ಡಿಸಂಬರ್ 30 ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ಮೇ 23 ಕಡೆಯ ದಿನವಾಗಿದ್ದು, ದಿ ಪ್ರೆಸಿಡೆಂಟ್, ಸೆಂಟ್ರಲ್ ಏರ್ಮೆನ್ ಸೆಲೆಕ್ಷನ್ ಬೋರ್ಡ್ ಪೋಸ್ಟ್ಬಾಕ್ಸ್ ನಂ 11807, ನ್ಯೂ ಡೆಲ್ಲಿ-110010 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು. ಮಾಹಿತಿಗೆ ನಂ.7, ಏರ್ಮೆನ್ ಸೆಲೆಕ್ಷನ್ ಸೆಂಟರ್, ನಂ.1 ಕಬ್ಬನ್ ರೋಡ್, ಬೆಂಗಳೂರು-560001 ಇಲ್ಲಿ ಕೆಲಸದ ದಿನಗಳಲ್ಲಿ ಸಂಪರ್ಕಿಸಿ ಪಡೆಯಬಹುದು.
ಖಾಸಗಿ ಬಸ್ ಡಿಕ್ಕಿ: ದ್ವಿಚಕ್ರ ಸವಾರ, ಮಗು ಸಾವು
ಕ.ಪ್ರ.ವಾರ್ತ ರಾಮನಗರ ಮೇ 16
ಖಾಸಗಿ ಬಸ್ ಡಿಕ್ಕಿಯಿಂದ ದ್ವಿಚಕ್ರ ಸವಾರ ಮತ್ತು ಮಗು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ತೀವ್ರ ಗಾಯಗೊಂಡ ಘಟನೆ ನಗರದ ಕನಕಪುರ ರಸ್ತೆ ತಿರುವಿನ ಬಳಿ ಗುರುವಾರ ಸಂಭವಿಸಿದೆ. ಮೂಲತಃ ರಾಮನಗರ ತಾಲೂಕಿನ ವಡ್ಡರಹಳ್ಳಿಯ ರಾಜೇಶ್ (30), ಆತನ ಪುತ್ರ ಕಿರಣ್ (7) ಮೃತರು. ಮೃತ ರಾಜೇಶ್ ಪತ್ನಿ ಮೋಹನಕುಮಾರಿ, ಮತ್ತೊಬ್ಬ ಮಗ ಅಕ್ಷಯ್, ಸಹೋದರನ ಪುತ್ರಿ ಹಂಪನಾ ತೀವ್ರ ಗಾಯಗೊಂಡು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಬಟ್ಟೆ ಅಂಗಡಿಯೊಂದರ ನೌಕರ ರಾಜೇಶ್ ಬೆಂಗಳೂರಿನಲ್ಲಿ ವಾಸವಿದ್ದರು. ಸ್ವಗ್ರಾಮ ವಡ್ಡರಹಳ್ಳಿಯಲ್ಲಿ ನಡೆದ ವಿವಾಹ ಕಾರ್ಯಕ್ರಮ ಮುಗಿಸಿ ಹೋಂಡಾ ಆಕ್ಟಿವಾದಲ್ಲಿ ರಾಜೇಶ್, ಪತ್ನಿ ಮೋಹನಕುಮಾರಿ, ಮಕ್ಕಳಾದ ಕಿರಣ್, ಅಕ್ಷಯ್ ಹಾಗೂ ಸಹೋದರನ ಪುತ್ರಿ ಹಂಪನಾ ಜತೆ ಬೆಂಗಳೂರಿಗೆ ಹೋಂಡಾ ಆಕ್ಟಿವಾದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕನಕಪುರ ರಸ್ತೆಯಿಂದ ಬೆಂಗಳೂರು ಕಡೆ ಹೆದ್ದಾರಿಗೆ ರಾಜೇಶ್ ದ್ವಿಚಕ್ರ ವಾಹನ ತಿರುಗಿಸಿದಾಗ ಚನ್ನಪಟ್ಟಣ ಕಡೆಯಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಯಿತು. ದ್ವಿಚಕ್ರ ವಾಹನ ಸಮೇತ ಬಸ್ ಅಡಿಗೆ ಸಿಕ್ಕಿಹಾಕಿಕೊಂಡ ರಾಜೇಶ್ ಸ್ಥಳದಲ್ಲೇ ಮೃತಪಟ್ಟರು. ಹಂಪನಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಿರಣ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮೃತ ರಾಜೇಶ್ ಪತ್ನಿ ಮೋಹನಕುಮಾರಿ ಮತ್ತು ಪುತ್ರ ಅಕ್ಷಯ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಬಂಧ ರಾಮನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಂಗನಾಥಸ್ವಾಮಿ ಅದ್ಧೂರಿ ತಿಂಗಳ ತೇರು
ಮಾಗಡಿ: ಇತಿಹಾಸ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ತಿಂಗಳ ತೇರು ವಿಜೃಂಭಣೆಯಿಂದ ನೆರವೇರಿತು. ತಿಂಗಳ ತೇರಿನ ಅಂಗವಾಗಿ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಉಭಯಮ್ಮನವರ ಸಮೇತ ಶ್ರೀಸ್ವಾಮಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿದ್ದು, ಭಕ್ತರು ಸೇರಿ ಸಡಗರ ಸಂಭ್ರಮದಿಂದ ರಥ ಎಳೆದು ಪುನೀತರಾದರು. ವ್ಯವಸ್ಥಾಪಕ ಎಚ್.ಜಿ. ನಾರಾಯಣಪ್ಪ, ಕೊಟ್ಟಗಾರಹಳ್ಳಿ ಎಚ್.ಶಿವಕುಮಾರ್, ಕೃಷ್ಣಮೂರ್ತಿ, ದಿವಂಗತ ಜವರಪ್ಪ ಅವರ ವಂಶಸ್ಥರು ಸೇರಿದಂತೆ ಹೊಸಪೇಟೆ, ತಿರುಮಲೆ, ಮಾಗಡಿ ಪಟ್ಟಣ ಇತರೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಸಾದ ವಿನಿಯೋಗ ನಡೆಯಿತು. ಅರ್ಚಕ ಗೋವಿದರಾಜು ಇತರರು ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಸಿಲಿಂಡರ್ ಸ್ಫೋಟ ಐವರಿಗೆ ಗಾಯ
ಬೆಂಗಳೂರು: ರೆಸ್ಟೋರೆಂಟ್ನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಿಸಿದ ಪರಿಣಾಮ, ಐವರು ಗಾಯಗೊಂಡಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಿಇಎಸ್ಐಟಿ ಕಾಲೇಜು ಸಮೀಪದ ದ್ವಾರಕಾ ನಗರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.
ಮಾನಸಿ ಚೈನೀಸ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದ್ದು, ಮಾಲೀಕ ರಾಮ್ಸಿಂಗ್ ಯಾದವ್, ಸಿಬ್ಬಂದಿ ಸೂರಜ್ ಯಾದವ್, ಚಂದ್ರಮೌಳಿ ಯಾದವ್, ಮೊಹಮದ್ ಜುಬೇರ್, ಎರ್ರಿ ಸ್ವಾಮಿ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಬ್ಬಂದಿ ಪ್ರತಿದಿನ ರೆಸ್ಟೋರೆಂಟ್ನಲ್ಲೇ ವಾಸಿಸುತ್ತಿದ್ದರು. ರಾತ್ರಿ ಅನಿಲ ಸೋರಿಕೆಯಾಗಿದ್ದು, ಈ ಬಗ್ಗೆ ಯಾರಿಗೂ ಗಮನಕ್ಕೆ ಬಂದಿಲ್ಲ. ಬೆಳಗ್ಗೆ ಎಂದಿನಂತೆ ಕೆಲಸ ಮಾಡಲು ಮುಂದಾದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ರೆಸ್ಟೋರೆಂಟ್ನಲ್ಲಿದ್ದ ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿವೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.
ಅಪರೂಪದ ಬಿಳಿ ಹುಲಿ ಸಾವು
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಹೆಣ್ಣು ಹುಲಿ ಪ್ರೀತಾ (23) ಸಾವನ್ನಪ್ಪಿದೆ ಎಂದು ಆಡಳಿತಾಧಿಕಾರಿ ದೇವರಾಜ್ ತಿಳಿಸಿದ್ದಾರೆ. ಪ್ರೀತಾಳನ್ನು 2003ರಲ್ಲಿ ಮೈಸೂರು ಮೃಗಾಲಯದಿಂದ ತರಲಾಗಿತ್ತು. ಉದ್ಯಾನವನದ ಆಕರ್ಷಣೆಯ ಪ್ರಾಣಿಗಳಲ್ಲಿ ಪ್ರೀತಾ ಒಂದಾಗಿತ್ತು. ಸಾಧಾರಣ ಹುಲಿಗಳು 20 ವರ್ಷ ಬದುಕುತ್ತವೆ. ಅಪರೂಪದ ಬಿಳಿ ಹುಲಿಯಾದ ಪ್ರೀತಾಳನ್ನು ಹೆಚ್ಚು ಜತನದಿಂದ ಕಾಣಲಾಗುತ್ತಿತ್ತು. ವಯಸ್ಸಾಗಿದ್ದ ಈ ಹುಲಿ ಇತ್ತೀಚೆಗೆ ಮೂಳೆ ನಿತ್ರಾಣದಿಂದ ಬಳಲುತ್ತಿತ್ತು. ವಯೋ ಸಹಜವಾದ ಕಾಯಿಲೆ ಇದ್ದು ಇದು ಸಹಜ ಸಾವನ್ನಪ್ಪಿದೆ ಎಂದು ಅವರು ತಿಳಿಸಿದರು.
ಮೃತ ಹುಲಿಯ ಕ್ಯಾರಕಸ್ ಅನ್ನು ಸಂಗ್ರಹಿಸಿದ್ದು ಸಾವಿಗೆ ನಿಖರ ಕಾರಣ ತಿಳಿಯಲಾಗುವುದು. ಅದರ ಕಳೇಬರವನ್ನು ಹೂಳಲಾಗಿದೆ ಎಂದರು.
ಅನಧಿಕೃತ ಕಟ್ಟಡ ತೆರವು
ಬೆಂಗಳೂರು: ಜೆ.ಪಿ.ನಗರ 2ನೇ ಹಂತದ ಮಾರೇನಹಳ್ಳಿಯ ಸರ್ವೆ ಸಂಖ್ಯೆ 32ರ ಎಸ್ಸಿ ಮತ್ತು ಎಸ್ಟಿ ಹರಿಜನ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆಯ 6ನೇ ಎ ಅಡ್ಡರಸ್ತೆಯಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಕಟ್ಟಡಗಳನ್ನು ಬಿಬಿಎಂಪಿ ತೆರವುಗೊಳಿಸಿತು. ಅಡ್ಡರಸ್ತೆ ಅತಿಕ್ರಮಿಸಿ 3480 ಚದರ ಅಡಿ ವಿಸ್ತೀರ್ಣದಲ್ಲಿ ಕಾಂಪೌಂಡ್ ಗೋಡೆ ಹಾಗೂ 1110 ಚದರ ಅಡಿ ವಿಸ್ತೀರ್ಣದಲ್ಲಿ ಶೆಡ್ಗಳನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ರು. 5 ಕೋಟಿ ಮೌಲ್ಯದ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಡಿಪ್ಲೊಮಾ ಕೋರ್ಸ್
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿ.ಯು.ಸಿ ಪಾಸಾದ ವಿದ್ಯಾರ್ಥಿಗಳಿಗೆ 3ವರ್ಷದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಡಿಪ್ಲೊಮಾ ಕೋರ್ಸ್ ರೂಪಿಸಿದ್ದು ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳ ಆಯ್ಕೆಯು ಸರ್ಕಾರಿ ನಿಯಮಾನುಸಾರ, ಮೆರಿಟ್ ಆಧಾರದ ಮೇಲೆ ನಡೆಯಲಿದೆ. ಬಡವರ ಅನುಕೂಲಕ್ಕಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ 3600 ಹಾಗೂ ಎಸ್.ಸಿ/ಎಸ್.ಟಿ ಮತ್ತು ಆದಾಯ ಕಡಿಮೆ ಇರುವ ವರ್ಗದ ವಿದ್ಯಾರ್ಥಿಗಳಿಗೆ 1,300 ನಿಗದಿ ಮಾಡಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳಿಗಾಗಿ- ಸರ್ಕಾರಿ ಎಸ್.ಆರ್.ಸಿ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಎಸ್.ಜೆ.ಪಿ ಕ್ಯಾಂಪಸ್, ಶೇಷಾದ್ರಿ ರಸ್ತೆ, ಬೆಂ-01. ಸಂಪರ್ಕಿಸಬಹುದು.
ಪ್ರತಿಭಾವಂತರಿಗೆ ಶಾಲೆಯಲ್ಲಿ ಉಚಿತ ಸೀಟು
ಬೆಂಗಳೂರು: ತುಮಕೂರು ತಾಲೂಕಿನಲ್ಲಿರುವ ಶ್ರೀಸಾಯಿಬಾಬಾ ಅಂತರಾಷ್ಟ್ರೀಯ ವಸತಿ ಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಪ್ರತಿಭಾನ್ವಿತ ಮತ್ತು ಬಡ ವಿದ್ಯಾರ್ಥಿಗಳಿಗೆ ಕೆಲವು ಉಚಿತ ಮತ್ತು ರಿಯಾಯಿತಿಯ ಸೀಟುಗಳನ್ನು ಕಾಯ್ದಿರಿಸಿದೆ. ಪ್ರವೇಶಕ್ಕಾಗಿ 3ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಮೇ 19ರಂದು ಬೆಳಗ್ಗೆ 11ಕ್ಕೆ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ಕುರುಬ ವಧು-ವರರ ಮುಖಾಮುಖಿ
ಬೆಂಗಳೂರು: ಕುರುಬರ ವಿವಾಹ ಕಲ್ಯಾಣ ಕೇಂದ್ರವು ಕುರುಬ ವಧು-ವರರ ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಂ.ಡಿ, ಎಂ.ಎಸ್ಸಿ, ಎಂ.ಟೆಕ್, ಸಾಫ್ಟ್ವೇರ್ ಇಂಜಿನಿಯರ್, ವೈದ್ಯರು, ಎಂ.ಬಿ.ಎ, ಎಂ.ಸಿ.ಎ, ಐಟಿ, ವೃತ್ತಿಪರರು, ಅನಿವಾಸಿ ಭಾರತೀಯರು, ಸ್ನಾತಕೋತ್ತರ ಮತ್ತು ಸ್ನಾತಕಪೂರ್ವ ಪದವೀಧರರ ಜೀವನ ಸಂಗಾತಿಗಳ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಆಸಕ್ತ ಅರ್ಹ ವಧು-ವರರು ಇತ್ತೀಚಿನ ಭಾವಚಿತ್ರ ಹಾಗೂ ಸ್ವ-ವಿವರಗಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 9880631408, 26701410.
26ರಂದು ನೇತ್ರ ಪರೀಕ್ಷೆ ಉಚಿತ ಶಿಬಿರ
ಬೆಂಗಳೂರು: ಉದಯಭಾನು ಕಲಾಸಂಘದ ವತಿಯಿಂದ ಕಣ್ಣು ಪರೀಕ್ಷೆ 76ನೆಯ ಉಚಿತ ಶಿಬಿರವನ್ನು ಮೇ 26ರಂದು ಹಮ್ಮಿಕೊಂಡಿದೆ. ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಉಚಿತವಾಗಿ ನಾರಾಯಣ ನೇತ್ರಾಲಯದಲ್ಲಿ ನಡೆಸಲಿದೆ. ಹೆಚ್ಚಿನ ವಿವರಗಳಿಗೆ ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂ-19. ದೂ. 26609343 ನ್ನು ಸಂಪರ್ಕಿಸಬಹುದು.
ಡಿಪ್ಲೊಮಾ ಕೋರ್ಸ್ಗೆ ಅರ್ಜಿ
ಬೆಂಗಳೂರು: ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ವತಿಯಿಂದ ಪ್ರಸಕ್ತ 2013-14 ಸಾಲಿಗೆ ಡಿಪ್ಲೊಮಾ ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಮೇ.25ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ 080-28466768, 28446672. www.filminstitutebangalore.com ನ್ನು ಸಂಪರ್ಕಿಸಿ.
ವಿದ್ಯಾರ್ಥಿನಿಯರಿಗೆ ವಸತಿ ಪ್ರವೇಶ
ಬೆಂಗಳೂರು: ಶೇಷಾದ್ರಿಪುರದ ಯಜಮಾನ್ ನಾಗಪ್ಪ ನಂಜಮ್ಮ ವೀರಶೈವ ವಿದ್ಯಾರ್ಥಿನಿ (ಡಿಗ್ರಿ, ಡಿಪ್ಲೊಮಾ) ನಿಲಯದ ಪ್ರವೇಶ ಬಯಸುವವರು ಅರ್ಜಿಗಳನ್ನು ಮೇ 31ರೊಳಗಾಗಿ ಸಲ್ಲಿಸಲು ಕೋರಿದೆ. ವಿವರಗಳಿಗೆ 9242263630, 9986471493.