ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿಗೆ ಬೇಸಿಗೆ ಶಿಬಿರ ಅಗತ್ಯ
ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಮಾನಸಿಕ ವಿಕಸನಕ್ಕೆ ಬೇಸಿಗೆ ಶಿಬಿರಗಳು ಉತ್ತಮ ಅಡಿಪಾಯವಾಗಲಿವೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಕ್ಷರ ಫೌಂಡೇಷನ್ ಸಂಸ್ಥೆಯ ಸಂಯೋಜಕ ಶ್ರೀನಿವಾಸ್ ಹೇಳಿದ್ದಾರೆ.
ಸೂಲಿಬೆಲೆ ಬಳಿಯಿರುವ ಟಿ.ಅಗ್ರಹಾರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಕ್ಷರ ಫೌಂಡೇಷನ್ ಸಂಸ್ಥೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ನಮ್ಮೂರು ಶಾಲಾ ಮಕ್ಕಳ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಬಿರವನ್ನು ಉದ್ಫಾಟನೆ ಮಾಡಿದ ಜಿಪಂ ಸದಸ್ಯೆ ವೆಂಕಟಲಕ್ಷ್ಮಮ್ಮ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಇಂಥ ಶಿಬಿರಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಸಮಯ ಹಾಳುಮಾಡದೇ ಶೈಕ್ಷಣಿಕವಾಗಿ ಪ್ರಗತಿಯನ್ನು ಹೊಂದಲು ಕಾರಣವಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕಪ್ಪಯ್ಯಪ್ಪ ಮಾತನಾಡಿ, ನಗರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹಣ ಕೊಟ್ಟು ಶಿಬಿರಗಳಿಗೆ ಸೇರಿಸುತ್ತಾರೆ. ಹಳ್ಳಿಗಾಡಿನ ಪ್ರದೇಶದಲ್ಲಿ ನೈಸರ್ಗಿಕವಾಗಿ ಅನೇಕ ಚಟುವಟಿಕೆಗಳು ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನೀಡುವಂತ ಪಾಠ ಪ್ರವಚನಗಳು ಬೇಸಿಗೆ ರಜೆಯಲ್ಲಿ ಸಿಗುತ್ತಿವೆ ಎಂದರು. ಹಿರಿಯ ಮುಖಂಡ ಮುನಿಯಪ್ಪ, ಸಿಆರ್ಪಿ ವೆಂಕಟೇಶ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೇಶವ, ಗ್ರಾಪಂ ಸದಸ್ಯ ಚಂದ್ರು, ಶಿವರಾಜ್, ಮುಖ್ಯ ಶಿಕ್ಷಕ ವೆಂಕಟೇಶ್, ನಾರಾಯಣಸ್ವಾಮಿ, ರಾಜಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ದೇವನಹಳ್ಳಿ ಲಯನ್ಸ್ ಸಂಸ್ಥೆಯಲ್ಲಿ 138ನೆ ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 138 ನೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಿ ನಮ್ಮ ಲಯನ್ಸ್ ಸಂಸ್ಥೆ ಕಳೆದ 35 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದ ಜನರಿಗಾಗಿ ಆರೋಗ್ಯ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಪ್ರಮುಖವಾಗಿ ಈಗ 138 ನೆ ನೇತ್ರ ಚಿಕಿತ್ಸಾ ಶಿಬಿರ ನಡೆಯುತ್ತಿದೆ. ಅಲ್ಲದೆ ಪ್ರತಿ ತಿಂಗಳ ಮೂರನೆಯ ಭಾನುವಾರ ಉಚಿತವಾಗಿ ಹೋಮಿಯೋಪತಿ ಶಿಬಿರ ನಡೆಯುತ್ತಿದ್ದು ಈ ಶಿಬಿರದಲ್ಲಿ ಪ್ರಮುಖವಾಗಿ ಆರಂಭಿಕ ಹಂತದ ಕ್ಯಾನ್ಸರ್, ಮಹಿಳೆಯರಿಗೆ ಸಂಬಂಧ ಪಟ್ಟ ಕಾಯಿಲೆಗಳು ಅಲ್ಲದೆ ಯಾವುದೇ ಹಳೇ ಕಾಯಿಲೆಗಳು ಇದ್ದರೂ ಉಚಿತವಾಗಿ ನುರಿತ ವೈದ್ಯರಿಂದ ಪರೀಕ್ಷೆ ಮಾಡಿ ಔಷಧಗಳನ್ನು ನೀಡಲಾಗುತ್ತಿದೆ. ಈ ಶಿಬಿರಗಳ ಪ್ರಯೋಜನ ಪಡೆದವರು ಇತರ ರೋಗಿಗಳಿಗೆ ತಿಳಿಸುವುದೇ ಸಮಾಜ ಸೇವೆಯಾಗಿರುತ್ತದೆ ಎಂದರು. ಶಿಬಿರದ ಪ್ರಾಯೋಜಕರಾದ ಸಾಯಿರಾಂ ಎಂಟರ್‌ಪ್ರೈಸಸ್ ಸಂಸ್ಥೆಯ ಎಂ. ವೆಂಕಟೇಶ್ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಆರ್.ರವಿಕುಮಾರ್ ಮಾತನಾಡಿದರು. ಮಾಜಿ ಅಧ್ಯಕ್ಷ ಪಿ.ವಿಜಯಕುಮಾರ್ ಹಾಗೂ ಪಿ.ಬಸವರಾಜು ಉಪಸ್ಥಿತರಿದ್ದರು.