ಚನ್ನಪಟ್ಟಣದ ಸೋಲಿನಿಂದ ಧೃತಿಗೆಟ್ಟಿಲ್ಲ
ಕ.ಪ್ರ.ವಾರ್ತ ರಾಮನಗರ ಮೇ 16
ಚನ್ನಪಟ್ಟಣದಲ್ಲಿ ಉಂಟಾದ ಸೋಲಿನಿಂದ ದೃತಿಗೆಟ್ಟಿಲ್ಲ. ಪರಾಜಿತ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಆ ಕ್ಷೇತ್ರದಿಂದ ಪಲಾಯನ ಮಾಡದೆ, ಅಲ್ಲೇ ಸಕ್ರಿಯ ರಾಜಕಾರಣ ಮುಂದುವರೆಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣದಲ್ಲಿ ಪಕ್ಷಕ್ಕೆ ಸೋಲು ಅನಿರೀಕ್ಷಿತ. ಅದಕ್ಕೆ ಯಾರನ್ನೂ ದೂಷಿಸುವುದಿಲ್ಲ ಎಂದು ತಿಳಿಸಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರ ಹಿತರಕ್ಷಣೆಗಾಗಿ ಅನಿತಾ ಕುಮಾರಸ್ವಾಮಿ ಆ ಕ್ಷೇತ್ರದಲ್ಲೇ ರಾಜಕಾರಣ ಮುಂದುವರೆಸುತ್ತಾರೆ. ಈ ಮೊದಲೇ ಘೋಷಿಸಿದ್ದಂತೆ ಚನ್ನಪಟ್ಟಣವೇ ಅವರ ಕಾರ್ಯಕ್ಷೇತ್ರ ಎಂದು ಹೇಳಿದರು. ನಮ್ಮ ಕುಟುಂಬ ಸೋಲು-ಗೆಲವು ಎರಡನ್ನೂ ಕಂಡಿದೆ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. 1999ರಲ್ಲಿ ನಮ್ಮ ಕುಟುಂಬದ ಮೂವರೂ ಸೋಲು ಕಂಡಾಗಲೂ ಮನೆ ಸೇರಲಿಲ್ಲ. ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರ ಹಿಡಿದಿದ್ದೇವೆ ಎಂದರು.
ಕಾರ್ಯಕರ್ತರ ಗೆಲವು: ರಾಮನಗರದ ಜನತೆ ಪಾಪದ ಹಣದ ಆಮಿಷಕ್ಕೆ ಒಳಗಾಗದೆ, ಅಪಪ್ರಚಾರಕ್ಕೆ ಕಿವಿಗೊಡದೆ ನನ್ನನ್ನು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನನ್ನ ಜೀವಮಾನ ಇರುವರೆಗೆ ಅವರ ಋಣ ತೀರಿಸಲು ಪ್ರಯತ್ನಿಸುವೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿದ್ದ ನಾನು ರಾಮನಗರ ಕ್ಷೇತ್ರಕ್ಕೆ ಬರಲಾಗಿರಲಿಲ್ಲ. ಇಷ್ಟಾಗಿಯೂ ಅಭೂತಪೂರ್ವ ಗೆಲವು ಲಭಿಸಿದೆ. ಈ ಗೆಲವು ನನ್ನ ವೈಯಕ್ತಿಕ ಗೆಲವಲ್ಲ. ಬದಲಾಗಿ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರ ಗೆಲವು ಎಂದು ಅವರು ಬಣ್ಣಿಸಿದರು. ಮುಖ್ಯಮಂತ್ರಿ ಹುದ್ದೆಗೇರಲು ರಾಮನಗರವೇ ಕಾರಣ. ಈಗ ಅದಕ್ಕೆ ಸರಿಸಮನಾದ ವಿಧಾನಸಭೆ ಪ್ರತಿಪಕ್ಷ ನಾಯಕ ಹುದ್ದೆಯೂ ಈ ಕ್ಷೇತ್ರದ ಕೊಡುಗೆಯಾಗಿದೆ. ಈ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಖಂಡಿತ ಉಳಿಸಿಕೊಳ್ಳುವೆ ಎಂದರು.
ಈ ಬಾರಿ ರಾಮನಗರದ ಮತದಾರರು ನೀಡಿರುವ ಗೆಲುವು ರಾಜ್ಯಾದ್ಯಂತ ದೀನ, ದಲಿತರು, ಅಲ್ಪ ಸಂಖ್ಯಾತರು, ರೈತರು, ಶೋಷಿತರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಶಾಸಕನಾಗಿ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವೆ ಎಂದು ಹೇಳಿದರು.
ತಿಂಗಳಿಗೆ 2 ಭೇಟಿ: ಸ್ವಕ್ಷೇತ್ರ ರಾಮನಗರಕ್ಕೆ ಹದಿನೈದು ದಿನಕ್ಕೆ ಒಮ್ಮೆಯಂತೆ ತಿಂಗಳಲ್ಲಿ 2 ಬಾರಿ ಭೇಟಿ ಕೊಟ್ಟು, ಜನರ ದೂರು-ದುಮ್ಮಾನಗಳಿಗೆ ಸ್ಪಂದಿಸುವೆ. ಸೂರಿಲ್ಲದ ಕುಟುಂಬಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವೆ ಎಂದು ಅವರು ಭರವಸೆ ನೀಡಿದರು.
ಈಗಾಗಲೇ ರು.5 ಸಾವಿರ ಪಾವತಿಸಿರುವ ಎಲ್ಲ ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿವಿ ಸಹಿತ ನನ್ನ ಅಧಿಕಾರಾವಧಿಯಲ್ಲಿ ಮಂಜೂರಾಗಿದ್ದ ಎಲ್ಲ ಯೋಜನೆಗಳ ಜಾರಿಗೆ ಕಟಿಬದ್ಧನಾಗಿರುವೆ ಎಂದು ತಿಳಿಸಿದರು.
ಅಗ್ಗದ ದರದಲ್ಲಿ ಸುರಕ್ಷಿತ ಮದ್ಯ: ಇದರಲ್ಲೇನೋ ಷಡ್ಯಂತ್ರ
ಕ.ಪ್ರ.ವಾರ್ತ ರಾಮನಗರ ಮೇ 16
ಗ್ರಾಮೀಣರಿಗೆ ಅಗ್ಗದ ದರದಲ್ಲಿ ಸುರಕ್ಷಿತ ಮದ್ಯ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆ ಹಿಂದೆ ಸಾರಾಯಿ ಮಾರಾಟ ಪುನಾರಂಭದ ಷಡ್ಯಂತ್ರ ಅಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಲಿಕ್ಕರ್ ಲಾಬಿಯ ಕೈವಾಡ ನಡೆದಿದೆ. ಈ ಕೃತಜ್ಞತೆಗಾಗಿ ಸಿದ್ದರಾಮಯ್ಯ ಸಾರಾಯಿ ಮಾರಾಟ ಪುನಾರಂಭಿಸಲು ಹೊರಟಿದ್ದಾರೆ ಎಂದು ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಹೇಳಿದರು.
9 ತಾಸು ಸಭೆ: ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಈ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಸಭೆ ನಡೆಸುವ ಬದಲು ಅಗ್ಗದ ದರದಲಿ ನಶೆ ಏರಿಸುವ ಮದ್ಯ ಪ್ರಯೋಗ ಕುರಿತು ಸಿದ್ದರಾಮಯ್ಯ 9 ತಾಸು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಯಾವುದೇ ಲಾಬಿಗೆ ಒಳಗಾಗದೆ ಸತ್ಯ ಹರಿಶ್ಚಂದ್ರನಂತೆ ಆಡಳಿತ ನಡೆಸುವುದಾಗಿ ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದ 48 ತಾಸಿನಲ್ಲೇ ಮದ್ಯದ ದೊರೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ಚರ್ಚೆ: ಬಡ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಸಾರಾಯಿ ನಿಷೇಧಿಸುವಂತೆ ತಾವು ಅಧಿಕಾರದಲ್ಲಿದ್ದಾಗ ರಾಜ್ಯಾದ್ಯಂತ ಮಹಿಳೆಯರು ಒತ್ತಡ ತಂದಿದ್ದರು. ಅದಕ್ಕೆ ಮಣಿದು ಸಾರಾಯಿ ಮತ್ತು ಲಾಟರಿಯನ್ನು ನಿಷೇಧಿಸಿದ್ದಾಗಿ ಅವರು ತಿಳಿಸಿದರು.
ಸಾರ್ವಜನಿಕರ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದೆ ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಒತ್ತು ನೀಡುತ್ತಿರುವ ಸರ್ಕಾರದ ವಿರುದ್ಧ ಸದನದಲ್ಲಿ ಚರ್ಚಿಸಲಾಗುವುದು. ಸಾರಾಯಿ ಪುನಾರಂಭದ ವಿರುದ್ಧ ತಮ್ಮ ಪಕ್ಷ ಸದನದ ಒಳಗೆ, ಹೊರಗೆ ಹೋರಾಟ ನಡೆಸಲಿದೆ ಎಂದರು.
ಕಾಂಗ್ರೆಸ್ ಕುತಂತ್ರ: ನನಗೆ ವಿಧಾನಸಭೆ ಪ್ರತಿಪಕ್ಷ ನಾಯಕತ್ವ ತಪ್ಪಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಕುತಂತ್ರ ನಡೆಸುತ್ತಿದ್ದಾರೆ. ಒಂದೊಮ್ಮೆ ಕುತಂತ್ರ ಫಲಿಸಿ ಪ್ರತಿಪಕ್ಷ ನಾಯಕತ್ವ ಕೈತಪ್ಪಿದರೆ, ಪಕ್ಷದ ಶಾಸಕರೊಡಗೂಡಿ ಸರ್ಕಾರ ಹಳಿ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ, ಮಾಜಿ ಸದಸ್ಯ ಮರಿಲಿಂಗೇಗೌಡ, ಪಕ್ಷದ ಮುಖಂಡರಾದ ಡಿ.ಗಿರೀಗೌಡ, ಕೆ. ದೇವೇಗೌಡ, ಪರ್ವೇಜ್ ಪಾಷ, ರಫೀಕ್ ಮಹಮದ್, ಉಮೇಶ್, ರಾಜಶೇಖರ್ ಇತರರಿದ್ದರು.
ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು ನಗರದ ಶ್ರೀ ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ಅಮ್ಮ, ಶ್ರೀ ಗಣಪತಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚರ್ಚ್, ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ನಮ್ಮ ಕುಟುಂಬ ಸೋಲು-ಗೆಲವು ಎರಡನ್ನೂ ಕಂಡಿದೆ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. 1999ರಲ್ಲಿ ನಮ್ಮ ಕುಟುಂಬದ ಮೂವರೂ ಸೋಲು ಕಂಡಾಗಲೂ ಮನೆ ಸೇರಲಿಲ್ಲ. ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರ ಹಿಡಿದಿದ್ದೇವೆ
-ಎಚ್.ಡಿ. ಕುಮಾರಸ್ವಾಮಿ