ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿ.ಕೆ.ಶಿವಕುಮಾರ್‌ರನ್ನು ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ

Srinivasa Murthy VN
Updated On : 19 May 2013, 12:37 pm

ಕ.ಪ್ರ.ವಾರ್ತೆ ಚನ್ನಪಟ್ಟಣ ಮೇ 18
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷವನ್ನು ಬಲಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ್‌ರನ್ನು ಸಂಪುಟದಿಂದ ಕೈಬಿಟ್ಟಿರುವ ಕ್ರಮ ಸರಿಯಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು 6 ಬಾರಿ ಶಾಸಕರಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಅವಿರತ ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ್‌ರಂತಹ ಪ್ರಮಾಣಿಕರನ್ನು ಸಂಪುಟಕ್ಕೆ ಸೇರ್ಪಡೆ ಗೊಳಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿಡಿಕಾರಿದರು.
ಬಂಗಾರಪ್ಪ, ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಜವಾಬ್ದಾರಿಯುತ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟಿದ್ದ ಡಿ.ಕೆ.ಶಿವಕುಮಾರ್‌ರನ್ನು ಕಳಂಕಿತರು ಎಂದು ನಿರಾಧಾರ ಆರೋಪ ಹೊರಿಸಿ ಸಂಪುಟದಿಂದ ಕೈಬಿಟ್ಟಿದ್ದು ಸಾಧುವಲ್ಲ ಎಂದರು.
ಎಚ್ಚರಿಕೆ: ಮುಖ್ಯಮಂತ್ರಿಗಳು ಈ ಕೂಡಲೇ ಹೈಕಮಾಂಡ್‌ಗೆ ವಸ್ತುಸ್ಥಿಯನ್ನು ಮನವರಿಕೆ ಮಾಡಿ ಕೊಟ್ಟು ಡಿ.ಕೆ.ಶಿವಕುಮಾರ್‌ಗೆ ಜವಾಬ್ದಾರಿಯುತ ಖಾತೆ ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಮುಂದಿನ ಹಂತದ ಸಂಪುಟ ವಿಸ್ತರಣೆಯ ವೇಳೆ ಡಿ.ಕೆ.ಶಿವಕುಮಾರ್‌ಗೆ ಖಾತೆ ನೀಡದೆ ಹೋದರೆ ಉಗ್ರ ಪ್ರತಿಭಟನೆ ನಡೆಸ ಬೇಕಾದೀತು ಎಂದು ಎಚ್ಚರಿಸಿದರು.
ಒಕ್ಕಲಿಗರಿಗೆ ಅನ್ಯಾಯ: ಕಾಂಗ್ರೆಸ್‌ನ ಪ್ರಭಾವಿ ಒಕ್ಕಲಿಗ ಮುಖಂಡರೆನಿಸಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಾದವರು. ಇಂತಹವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಕಾಂಗ್ರೆಸ್ ಪಕ್ಷ ಒಕ್ಕಲಿಗರಿಗೆ ಅನ್ಯಾಯ ವೆಸಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಕ್ಕಲಿಗ ಸಮುದಾಯದ ಸಹಕಾರ ಅತ್ಯಗತ್ಯವಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಭದ್ರಗೊಳಿಸಲು ಡಿ.ಕೆ.ಶಿವಕುಮಾರ್‌ರಂತಹ ಪ್ರಭಾವಿ ಒಕ್ಕಲಿಗ ನಾಯಕರ ಅಗತ್ಯತೆ ಸಾಕಷ್ಟಿದೆ. ಈ ಸಂಗತಿಯನ್ನು ಕಾಂಗ್ರೆಸ್ ವರಿಷ್ಠರು ಅರಿತು ಸೂಕ್ತಸ್ಥಾನ ಮಾನ ನೀಡುವಂತೆ ಆಗ್ರಹಿಸಿದರು.
ಕೆಲ ಮಂದಿಯ ಹುನ್ನಾರ: ಡಿ.ಕೆ.ಶಿವಕುಮಾರ್ ವರ್ಚಸ್ಸು ಸಹಿಸದ ಕೆಲಮಂದಿ ಇಲ್ಲಸಲ್ಲದ ಹುನ್ನಾರ ನಡೆಸಿ ಅವರ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಹೈಕಮಾಂಡ್ ಇಂತಹ ಪಿತೂರಿಗಾರರ ಮಾತಿಗೆ ಮನ್ನಣೆ ನೀಡಬಾರದು ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮನವಿ ಮಾಡಿದರು.
ಸಂಚಾರ ಅಸ್ತವ್ಯಸ್ತ: ಪ್ರತಿಭಟನಾಕಾರರು ಬೆಂ-ಮೈ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ಕೆಲಕಾಲ  ಸಂಚಾರ ವ್ಯತ್ಯಯ ಗೊಂಡಿತು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಸಂತೈಸಿ ಸಂಚಾರ ಸುಗಮ ಗೊಳಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಟಿ.ಕೆ.ಯೋಗೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಯುವ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಜಿ.ಪಂ ಮಾಜಿ ಉಪಾಧ್ಯಕ್ಷೆ ಪದ್ಮಕೃಷ್ಣಯ್ಯ, ಮುಖಂಡರಾದ ಪಿ.ಡಿ.ರಾಜು, ಶಿವಾನಂದ್, ರಾಂಪುರ ಲೋಕೇಶ್, ತಾ.ಪಂ ಮಾಜಿ ಸದಸ್ಯರಾದ ಕಾವೇರಮ್ಮ, ರೇಣುಕ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement