ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಿಕೆಶಿಗೆ ತಪ್ಪಿದ ಸಚಿವ ಸ್ಥಾನ, ಕನಕಪುರದಲ್ಲಿ ಆತಂಕ

Srinivasa Murthy VN
Updated On : 19 May 2013, 12:37 pm

ಕ.ಪ್ರ.ವಾರ್ತೆ ಕನಕಪುರ ಮೇ 18
ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪಿರುವ ಹಿನ್ನೆಲೆಯಲ್ಲಿ ಕನಕಪುರ ಪಟ್ಟಣದಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಯಿತು.
ಸಚಿವ ಸ್ಥಾನ ದೊರೆಯದಿರುವ ಬಗ್ಗೆ ಕಲ್ಪಿಸಿಕೊಳ್ಳಲೂ ಆಗದ ಮಟ್ಟಿಗೆ ಆತ್ಮವಿಶ್ವಾಸದಿಂದ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಿನ್ನೆ ರಾತ್ರಿ ಅಂತಿಮ ಪಟ್ಟಿ ಹೊರಬರುತ್ತಿದ್ದಂತೆ ನಿರಾಶರಾಗಿ, ಆಕ್ರೋಶದಿಂದ ಪ್ರತಿಭಟನೆಯ ಮಾರ್ಗ ಹಿಡಿದರು. ನಿನ್ನೆ ರಾತ್ರಿ 11 ಗಂಟೆ ವೇಳೆಯಲ್ಲಿ ರಾಮನಗರ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪುರಸಭಾಸದಸ್ಯ ಕೆ.ಎಂ. ಮಲ್ಲೇಶ್, ಕೆ.ಎನ್.ದಿಲೀಪ್ ನೇತೃತ್ವದಲ್ಲಿ ಗುಂಪುಗೂಡಿ ರಸ್ತೆಗೆ ಟೈರ್‌ಗಳನ್ನು ಹಾಕಿ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ನಡುರಾತ್ರಿ  ಕನಕಪುರದ ಚನ್ನಬಸಪ್ಪ ವೃತ್ತ, ಬೆಂಗಳೂರನ್ನು ಸಂಪರ್ಕಿಸುವ ಅರ್ಕಾವತಿ ಸೇತುವೆ, ವಾಣಿ ಟಾಕೀಸ್ ಮೊದಲಾದ ಕಡೆಗಳಲ್ಲಿ ಕಾರ್ಯಕರ್ತರ ವಿವಿಧ ಗುಂಪುಗಳು ಟೈರ್‌ಗಳಿಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು. ಹಲವಾರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಒಂದು ಪ್ರಕರಣದಲ್ಲಿ ಸಾರಿಗೆ ಬಸ್‌ಗಳಿಗೆ ಕಲ್ಲುತೂರಾಟ ನಡೆಸಿದ ಘಟನೆಯೂ ನಡೆಯಿತು. ರಸ್ತೆ ತಡೆ ನಡೆಸಿ ಪ್ರತಿಭಟನೆ: ಪೊಲೀಸರ ಸಕಾಲಿಕ ಬಂದೋಬಸ್ತ್‌ನಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.  ಶನಿವಾರ ಬೆಳಗ್ಗಿನಿಂದಲೇ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಎಸ್ ಅಭಿಮಾನಿಗಳು, ತಾಲೂಕು ಕಚೇರಿ ಮುಂಭಾಗ ಗುಂಪುಗೂಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು, ರಾಮಚಂದ್ರ, ಮುನಿಯಪ್ಪ ನೇತೃತ್ವದಲ್ಲಿ  ಕೆಲವು ಕಾಲ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ನಂತರ ಹಿರಿಯ ಕಾಂಗ್ರೆಸ್ ಮುಖಂಡರು,  ಶಾಸಕ ಶಿವಕುಮಾರ್ ಅವರನ್ನು ಸಮರ್ಪಕವಾಗಿ ನಡೆಸಿಕೊಂಡಿಲ್ಲ, ಅವರ ನಾಯಕತ್ವಕ್ಕೆ ಮನ್ನಣೆ ನೀಡಿಲ್ಲ, ಸಂಪುಟದಿಂದ ಕೈಬಿಟ್ಟು ಘೋರ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿವಕುಮಾರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬೆಂಗಳೂರಿಗೆ ತೆರಳಿ ಕೃಷ್ಣ ಭೇಟಿ: ನಂತರ ಕಾಂಗ್ರೆಸ್ ಮುಖಂಡರಾದ ಕೆ.ಎನ್.ದಿಲೀಪ್, ಮುನಿಯಪ್ಪ, ಕೆಂಪರಾಜು, ಮರಸಪ್ಪರವಿ, ರಾಮಚಂದ್ರ, ಕೆ.ಬಿ. ಮಹೇಶ್ ಮೊದಲಾದವರ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚುಮಂದಿ ನೂರಾರು ವಾಹನಗಳಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರಲ್ಲಿಗೆ ಅಹವಾಲು ಸಲ್ಲಿಸಲು ಬೆಂಗಳೂರಿಗೆ ತೆರಳಿದರು. ರಾಮನಗರ ಜಿಲ್ಲೆಗೆ ಸಚಿವ ಸ್ಥಾನ ದೊರೆಯದೆ ಅನಾಥ ಸ್ಥಿತಿ ಏರ್ಪಾಡಾಗಿದೆ. ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒತ್ತಡ ಹೇರಲು ಸ್ಥಳೀಯ ಮುಖಂಡರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಿಂದ ಬೆಳಗ್ಗಿನಿಂದಲೂ ಕನಕಪುರದಲ್ಲಿ ಅಘೋಷಿತ ಬಂದ್ ರೀತಿಯ ವಾತಾವರಣ ಏರ್ಪಾಡಾಗಿತ್ತು. ವ್ಯಾಪಾರಿಗಳು ಆತಂಕದಿಂದಲೇ ತಮ್ಮ ವಾಹಿವಾಟುಗಳನ್ನು ನಿರ್ವಹಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರತಿಭಟನೆ ಬೇಡ: ಡಿಕೆಶಿ ಮನವಿ
ಶಾಸಕ ಡಿ.ಕೆ.ಶಿವಕುಮಾರ್‌ಪತ್ರಿಕಾ ಪ್ರಕಟಣೆ ನೀಡಿ, ಕಾರಣಾಂತರಗಳಿಂದ ಪಕ್ಷದ ವರಿಷ್ಠಮಂಡಳಿ ತಮ್ಮನ್ನು ಕೆಲವು ಕಾಲ ಸಚಿವ ಸಂಪುಟದಿಂದ ಹೊರಗುಳಿಯಲು ಸೂಚಿಸಿದೆ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾದ ತಾವು ಹೈಕಮಾಂಡ್‌ಸೂಚನೆಯನ್ನು  ಪಾಲಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳಿಗೆ ಯಾವುದೇ ರೀತಿಯ ಬಂದ್, ಪ್ರತಿಭಟನೆ, ಧರಣಿ ನಡೆಸದಂತೆ ಸೂಚಿಸಿ, ಶಾಂತಿ, ತಾಳ್ಮೆಯಿಂದ ವರ್ತಿಸಿ ಕಾಂಗ್ರೆಸ್ ಪಕ್ಷದ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕೆಂದು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement