ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಂತ್ರಜ್ಞಾನ ಅಭಿವೃದ್ಧಿಗೆ ಪ್ರೋತ್ಸಾಹ ಇಲ್ಲ

Srinivasa Murthy VN
Updated On : 19 May 2013, 12:38 pm

ಕ.ಪ್ರ.ವಾರ್ತೆ ರಾಮನಗರ ಮೇ 18
ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಪ್ರೋತ್ಸಾಹ ಇಲ್ಲದ ಕಾರಣದಿಂದ ಭಾರತೀಯ ತಂತ್ರಜ್ಞರು ವಿದೇಶಗಳಿಗೆ ವಲಸೆ ಹೋಗಿ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕಾದಂತಹ ದುಃಸ್ಥಿತಿ ನಿರ್ಮಾಣವಾಗಿದೆ ಎಂದು
ಸಿಂಥೆಟಿಕ್ ರಬ್ಬರ್ ಪ್ರಾಡಕ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ರಮೇಶ್ ಆತಂಕ ವ್ಯಕ್ತಪಡಿಸಿದರು.  ಬಿಡದಿಯ  ಜ್ಞಾನವಿಕಾಸ ತಾಂತ್ರಿಕ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಭಾ ಪಲಾಯನ ತಡೆಗಟ್ಟಬೇಕಾದರೆ ಭಾರತ ಸರ್ಕಾರವು  ತಂತ್ರಜ್ಞಾನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದರು. ಭಾರತದಲ್ಲಿ ಅಸಾಮಾನ್ಯ ಪ್ರತಿಭೆಯುಳ್ಳ ತಂತ್ರಜ್ಞರಿದ್ದಾರೆ. ಆದರೆ ವೈಜ್ಞಾನಿಕ  ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸೂಕ್ತ ಪ್ರೋತ್ಸಾಹ ಇಲ್ಲದಾಗಿದೆ. ತಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬೇಕಾದರೆ ಸಾಕಷ್ಟು ಹಣ ವ್ಯಯಿಸಿ ವಿದೇಶಗಳಿಗೆ ಹೋಗಬೇಕಾಗಿದೆ. ಪ್ರತಿಭೆಯಿದ್ದರೂ ಸಾಕಷ್ಟು ಹಣವಿಲ್ಲದ ಎಷ್ಟೋ ಪ್ರತಿಭೆಗಳು ಪ್ರಾರಂಭಿಕ ಹಂತದಲ್ಲಿಯೇ ಕಮರಿ ಹೋಗುತ್ತಿವೆ ಎಂದು ವಿಷಾದಿಸಿದರು.
ತುರ್ತು ಅಗತ್ಯ: ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆಯಲು ಅರ್ಹರಾಗಿರುವ ಎಷ್ಟೋ ಮಂದಿ ಗಣ್ಯರು ಅಭಿವೃದ್ಧಿ ಹೊಂದಿದ ದೇಶಗಳ ಕಡೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ದೇಶದಲ್ಲಿರುವ ತಂತ್ರಜ್ಞರನ್ನು ಮತ್ತು ಸಂಶೋಧಕರನ್ನು ಗುರುತಿಸಿ ಬಳಸಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ. ಆದರೆ  ತಂತ್ರಜ್ಞರನ್ನು ಕಡೆಗಣಿಸುವ ಸರ್ಕಾರಗಳು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದರು.  ವಿದ್ಯಾರ್ಥಿ ದಿಸೆಯಲ್ಲಿಯೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದರೂ ನಮ್ಮ ಏಳಿಗೆಗೆ ಕಾರಣಕರ್ತರಾದ ಪೋಷಕರು ಹಾಗೂ ಶಿಕ್ಷಕರನ್ನು ಮರೆಯಬಾರದು. ಜ್ಞಾನವಿಕಾಸ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎಂ. ಲಿಂಗಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  ಜ್ಞಾನವಿಕಾಸ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಕೆ. ಶ್ರೀವಾತ್ಸವ, ಉಪಪ್ರಾಂಶುಪಾಲ ಡಾ.ಎಲ್. ಸ್ವರ್ಣಜ್ಯೋತಿ, ಎಸ್. ರಾಮಶಿವಣ್ಣ, ಖಜಾಂಚಿ ಬಿ.ಜೆ. ಹೊನ್ನಶೆಟ್ಟಿ, ನಿರ್ದೇಶಕರಾದ ಪಿ.ಕೆ.ರಾಮಮೂರ್ತಿ, ಗಂಗಾಧರ್, ಎಲ್. ಸತೀಶ್‌ಚಂದ್ರ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement