ದೇವೇಗೌಡರ ಹುಟ್ಟುಹಬ್ಬ, ರೋಗಿಗಳಿಗೆ ಹಣ್ಣು ವಿತರಣೆ
ಕ.ಪ್ರ.ವಾರ್ತೆ ದೇವನಹಳ್ಳಿ ಮೇ 18
ಮಾಜಿ ಪ್ರಾಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೆಗೌಡ ಅವರ 81ನೇ ಹುಟ್ಟುಹಬ್ಬ ಅಂಗವಾಗಿ ಶಾಸಕ ಪಿಳ್ಳಮುನಿಶಾಮಪ್ಪ ಅವರು ಶನಿವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪಿಳ್ಳಮುನಿಶಾಮಪ್ಪ ಅವರು ಮಾತನಾಡಿ ಪ್ರಧಾನಿಗಳಾಗಿದ್ದ ದೇವೆಗೌಡರು ರಾಷ್ಟ್ರದ ಮುತ್ಸದಿ ರಾಜಕಾರಣಿಯಾಗಿದ್ದು ಬಡವರ ಏಳಿಗೆಯೇ ಅವರ ಗುರಿಯಾಗಿತ್ತು. ಅವರ ಮಾರ್ಗದರ್ಶನ ಎಲ್ಲ ರಾಜಕೀಯ ಮುಖಂಡರಿಗೆ ಅಗತ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಕಾರ್ಯದರ್ಶಿ ಜಿ.ಎ.ರವೀಂದ್ರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಪುರಸಭಾ ಸದಸ್ಯರಾದ ಶಶಿಕುಮಾರ್, ಕುಮಾರ್ ಹಾಗೂ ಡಾ.ನಾಗೇಶ್ ಉಪಸ್ಥಿತರಿದ್ದರು.
ಸ್ಥಿರಾಸ್ತಿ ಮಾರುಕಟ್ಟೆ ಬೆಲೆ ಪಟ್ಟಿ ಪರಿಷ್ಕರಣೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪಟ್ಟಿಯನ್ನು 2013-14ರ ಸಾಲಿಗೆ ಪರಿಷ್ಕರಿಸಲಾಗಿದೆ. ಪರಿಷ್ಕೃತ ಪಟ್ಟಿಯನ್ನು ಉಪನೋಂದಣಾಧಿಕಾರಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಮುದ್ರಾಂಕ ನಿಯಮಗಳು 2003ರ ನಿಯಮ 5(2)ರ ಅಡಿಯಲ್ಲಿ ಈ ಪರಿಷ್ಕರಣೆ ಮಾಡಲಾಗಿದ್ದು, sro.dbp1zgmail.comಪ್ರಕಟಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆ, ಸಲಹೆ-ಸೂಚನೆಗಳಿದ್ದಲ್ಲಿ ತಹಶೀಲ್ದಾರರು ಅಥವಾ ಉಪನೊಂದಣಾಧಿಕಾರಿಗಳ ಕಚೇಗೆ 15 ದಿನದೊಳಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿದ್ದರಾಮಯ್ಯಗೆ ಕರವೇ ಅಭಿನಂದನೆ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಸ್.ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕರವೇ ಕಾರ್ಯಕರ್ತರ ಮೇಲೆ ಈ ಹಿಂದಿನ ಬಿಜೆಪಿ ಸರ್ಕಾರ ಹಾಕಿರುವ ಕೇಸುಗಳನ್ನು ವಾಪಸು ಪಡೆಯುವಂತೆಯೂ ಕೋರಿದ್ದಾರೆ. ಕಳೆದ 12 ವರ್ಷಗಳಿಂದ ನಾಡಿನ ಉನ್ನತಿಗಾಗಿ ಹೋರಾಟ ನಡೆಸಿಕೊಂಡು ಬಂದಿರುವ ಕರವೇ ಕಾರ್ಯಕರ್ತರ ಮೇಲೆ ಈ ಹಿಂದಿನ ಬಿಜೆಪಿ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಸಾವಿರಾರು ಕೇಸುಗಳನ್ನು ಜಡಿದಿದೆ. ಕರವೇ ಕಾರ್ಯಕರ್ತರ ಮೇಲೆ ಹಾಕಲಾಗಿರುವ ಅಂತಹ ಕೇಸುಗಳನ್ನು ನೂತನ ಮುಖ್ಯಮಂತ್ರಿ ಅವರು ಹಿಂಪಡೆಯುವ ಮೂಲಕ ಕನ್ನಡ ಪರ ಧ್ವನಿ ಸದಾ ಮೊಳಗಿಸಲು ಸಹಕರಿಸಬೇಕು ಎಂದು ನಾರಾಯಣ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ. ಜತೆಗೆ, ಅಧಿಕಾರಕ್ಕೆ ಬಂದ ಮೊದಲ ದಿನವೇ ಬಡವರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡುವುದು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಘೋಷಿಸಿರುವ ಸಿದ್ದರಾಮಯ್ಯ ಅವರ ನಿಲುವನ್ನು ಅವರು ಶ್ಲಾಘಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿನ ಅನ್ಯಾಯ ಸರಿಪಡಿಸುವಿಕೆ, ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ದಕ್ಕಿರುವ ನೀರಿನ ಸದ್ಬಳಕೆಗಾಗಿ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಮಳೆ ನೀರು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಲು ಕ್ರಮಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ. ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಸರೋಜಿನಿ ಮಹಿಷಿ ವರದಿ ಮಾರ್ಪಡಿಸಿ ಜಾರಿಗೆ ತರಲು ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಲಾರಿ ಅಪಘಾತ: ಇಬ್ಬರ ಸಾವು
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 18
ರೋಡ್ ರೋಲರ್ ಅನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಗಾಳಿಪೂಜೆ ಗ್ರಾಮದ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಗ್ರಾಮದ ಸಿದ್ಧಾರ್ಥ (23) ಮತ್ತು ತಮಿಳುನಾಡು ಮೂಲದ ಚೆಲುವರಾಜು (37) ಎಂದು ಗುರುತಿಸಲಾಗಿದೆ. ತಾಲೂಕಿನ ಸಾಸಲು ಗ್ರಾಮಕ್ಕೆ ಹೋಗಿದ್ದ ರೋಡ್ ರೋಲರ್ ಅನ್ನು ಲಾರಿಯಲ್ಲಿ ಹೊತ್ತು, ದೇವನಹಳ್ಳಿ ತಾಲೂಕಿನ ವಿಜಯಪುರಕ್ಕೆ ತರಲಾಗುತ್ತಿತ್ತು. ಲಾರಿಯಲ್ಲಿದ್ದ ರೋಡ್ ರೋಲರ್ ಕ್ಯಾಬಿನ್ಗೆ ಅಪ್ಪಳಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮರಕ್ಕೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತ ನಡೆಯುತ್ತಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಇಬ್ಬರ ಸಾವು
ಕ.ಪ್ರ.ವಾರ್ತೆ ನೆಲಮಂಗಲ ಮೇ 18
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಹದೇವಪುರ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ದುರ್ಮರಣಕ್ಕೀಡಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಗೌಡಹಳ್ಳಿ ಹೊನ್ನರಾಜು (30), ಗೆಜ್ಜೆಗದಹಳ್ಳಿಯ ಪುನೀತ (22) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಲಕ್ಷ್ಮಣಪ್ಪ (40), ನಾರಾಯಣಪ್ಪ (32) ಎಂಬುವರು ಗಂಭೀರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಕಾರ್ಯ ನಿಮಿತ್ತ ಈ ನಾಲ್ವರೂ ಕಾರಿನಲ್ಲಿ ಕುಣಿಗಲ್ಗೆ ತೆರಳಿದ್ದರು. ಬೆಂಗಳೂರು ಕಡೆಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ಮಹದೇವಪುರ ಗ್ರಾಮದ ಬಳಿ ಆದಿತ್ಯ ಕ್ರೀಡಾಂಗಣಕ್ಕೆ ತೆರಳಲು ನಿರ್ಮಿಸಿರುವ ಕೆಳ ಸೇತುವೆಯ ಬ್ಯಾರಿಕೇಡ್ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದು ಪೊಲೀಸರು ಆಗಮಿಸುವ ವೇಳೆಗೆ ಹೊನ್ನರಾಜು ಸ್ಥಳದಲ್ಲೇ ಮೃತಪಟ್ಟಿದ್ದರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪುನೀತ ನೆಲಮಂಗಲದಲ್ಲೇ ಮೃತಪಟ್ಟರೆ ಉಳಿದಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗುರುವಂದನಾ ಕಾರ್ಯಕ್ರಮ
ನೆಲಮಂಗಲ: ಶಿಕ್ಷಕರು ನೀಡಿದಂತಹ ಮಾರ್ಗದರ್ಶನ ಅನುಸರಿಸುವುದೇ ವಿದ್ಯಾರ್ಥಿ ಜೀವನದ ಅಡಿಪಾಯ ಎಂದು ಶಿಕ್ಷಕ ಟಿ.ವಿ.ವೀರಭದ್ರಪ್ಪ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ 1992-93ನೇ ಸಾಲಿನ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಆ ಸಾಲಿನಲ್ಲಿ ಶಿಕ್ಷಕರಾಗಿದ್ದವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಗುರು ಹಿರಿಯರನ್ನು ಗೌರವಿಸುವ ಸಮಾರಂಭ ಆಯೋಜಿಸಿದ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರುಗಳಾದ ಹನುಮಂತಯ್ಯ, ಪುಟ್ಟಯ್ಯ, ಬಿ.ಎಸ್.ರವೀಂದ್ರ, ಜಿ.ರಾಮಯ್ಯ, ಜಿ.ಎಸ್.ಸಿದ್ದರಾಜು, ಆರ್.ಎನ್.ಲೋಕೇಶ್, ಟಿ.ವಿ.ವೀರಭದ್ರಪ್ಪ, ಕೆ.ಆರ್.ರಮಾಮಣಿ, ವಿ.ಪಾರ್ವತಿ ಅವರುಗಳಿಗೆ ಸನ್ಮಾನಿಸಿ ಗೌರವಿಸಿದರು. ಸಮಾಜದ ಅಪೂರ್ವ ಚೇತನಗಳಿಗೆ ಸನ್ಮಾನಿಸಿ ಗೌರವಿಸುವುದರಿಂದ ಅವರುಗಳು ಸಮಾಜದ ಆಸ್ತಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಸೆಯಾಗಿದೆ ಎಂದು ಸುಬ್ರಹ್ಮಣ್ಯ ಎಂದರು.
ಟೆಂಪೋ-ಬೈಕ್ ಡಿಕ್ಕಿ: ವ್ಯಕ್ತಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ: ತಾಲೂಕಿನ ಗೂಳ್ಯ ಗ್ರಾಮದ ಬಳಿ ದ್ರಾಕ್ಷಿ ಟೆಂಪೋ ಮತ್ತು ದ್ವಿಚಕ್ರವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವನನ್ನು ಗೌರಿಬಿದನೂರಿನ ವಸಂತಕುಮಾರ್ (30) ಎಂದು ಗುರುತಿಸಲಾಗಿದೆ. ಬಲಗೈ ಮುರಿತ ಮತ್ತು ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಹಿನ್ನಲೆಯಲ್ಲಿ ಆತನನ್ನು ದೊಡ್ಡಬಳ್ಳಾಪುರ ಆಸ್ಪತ್ರೆಯಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಆತನ ಜೊತೆಗಿದ್ದ 4 ವರ್ಷದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ. ಟೆಂಪೋ ಚಾಲಕ ಸಂಚಾರಿ ನಿಯಮ ಪಾಲಿಸದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ಎಚ್.ಎಸ್.ಸುಹಾಸ್ಗೆ ಶೇ. 92
ದೇವನಹಳ್ಳಿ: ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಆಕ್ಸ್ಫರ್ಡ್ ಆಂಗ್ಲ ಶಾಲೆಯ ವಿದ್ಯಾರ್ಥಿ ಎಚ್.ಎಸ್.ಸುಹಾಸ್ ಶೇ. 92 ರಷ್ಟು ಅಂಕಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ. ಈ ಶಾಲೆಯಲ್ಲಿ ಶೇ. ನೂರರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 25 ಮಂದಿ ಅತ್ಯುತ್ತಮ ಹಾಗೂ 46 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನಾಳೆ ಕೃಷಿ ಮೇಳ
ರಾಮನಗರ: ಕಾರ್ಪೊರೇಷನ್ ಬ್ಯಾಂಕ್ನಿಂದ ಮೇ 20ರಂದು ಬೆಳಗ್ಗೆ 9.30ಕ್ಕೆ ಚನ್ನಪಟ್ಟಣದ ಕೊಲ್ಲಾಪುರ ದೇವಸ್ಥಾನದ ಆವರಣದಲ್ಲಿ ಕೃಷಿ ಮೇಳ ಏರ್ಪಡಿಸಲಾಗಿದೆ ಎಂದು ಚನ್ನಪಟ್ಟಣ ಕಾರ್ಪೊರೇಷನ್ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ರಂಗತರಬೇತಿ ಸಮಾರೋಪ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ 19ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ನಡೆಯಲಿದೆ. ಶಾಸಕ ವಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷೆ ಜಿ.ಸವಿತ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ನಗರಸಭಾ ಸದಸ್ಯ ತ.ನ.ಪ್ರಭುದೇವ್, ಲಯನ್ಸ್ ಮಾಜಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡ ಡಾ.ನಾರಾಯಣ್, ಅಶ್ವತ್ಥಪ್ಪ, ವೆಂಕಟೇಶ್, ಆಂಜನಮೂರ್ತಿ, ಬಿರ್ಲಾ ಸೂಪರ್ ಘಟಕದ ಮಂಜುನಾಥ್ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಲೆಪೇಟೆ ಶಾಲೆ ಮುಖ್ಯಶಿಕ್ಷಕ ಅರೇರಂಗಯ್ಯ ಅವರಿಗೆ ಸನ್ಮಾನ, ಮಕ್ಕಳಿಂದ ದುರಾಸೆಯ ಫಲ ನಾಟಕ ಪ್ರದರ್ಶನ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಪುರಸ್ಕಾರ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್(ರಿ) ನೇತೃತ್ವದಲ್ಲಿ ನಡೆಯುತ್ತಿರುವ ಪೋತಲೂರಿ ವೀರಬ್ರಹ್ಮೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಸೇವಾ ಟ್ರಸ್ಟ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿಶ್ವಕರ್ಮ ಜನಾಂಗದ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಟ್ರಸ್ಟ್ಗೆ ನೀಡುವಂತೆ ಕೋರಲಾಗಿದೆ. ವಿವರಗಳಿಗೆ ಸಂಘದ ಕಾರ್ಯದರ್ಶಿ ಸೋಮಶೇಖರ್(9844473390) ಸಂಪರ್ಕಿಸಬಹುದು ಎಂದು ಅಧ್ಯಕ್ಷ ಎಚ್.ಎಸ್.ನಾಗೇಶ್ ತಿಳಿಸಿದ್ದಾರೆ.