ಬಹುದಿನದ ನಂತರ ಕಳೆಗಟ್ಟಿದ ವಿಧಾನಸೌಧ
ಬೆಂಗಳೂರು: ಬಹುದಿನಗಳ ಬಳಿಕ ವಿಧಾನಸೌಧ ಶನಿವಾರ ಕಳೆಗಟ್ಟಿತ್ತು.
ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧಕ್ಕೆ ಸಚಿವರ ಆಗಮನವೇ ಇಲ್ಲದಂತಾದ ಮೇಲೆ, ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರೂ ಕಾಣೆಯಾಗಿದ್ದರು. ಆದರೆ, ಶನಿವಾರ ವಿಧಾನಸೌಧದಲ್ಲಿ ಜನಜಂಗುಳಿ ವಾತಾವರಣ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ವಿಧಾನಸೌಧದಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು. ಆದರೆ, ಸಚಿವಾಕಾಂಕ್ಷಿಗಳಾಗಿ ಶಾಸಕರೆಲ್ಲ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರಿಂದ ಶನಿವಾರದವರೆಗೆ ವಿಧಾನಸೌಧದತ್ತ ಸುಳಿದಿರಲಿಲ್ಲ.
ಸಚಿವ ಸಂಪುಟದ ಸದಸ್ಯರಾಗಿ 28 ಶಾಸಕರು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದರು. ಪ್ರಥಮ ಸಚಿವ ಸಂಪುಟದಲ್ಲಿ ಎಲ್ಲರೂ ಭಾಗವಹಿಸಿದ್ದರು. ಇದು ಇಡೀ ವಿಧಾನಸೌಧವನ್ನು ಕಳೆಗಟ್ಟಿಸಿತ್ತು. ಸಚಿವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರೆಲ್ಲ ನೂರಾರು ಸಂಖ್ಯೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದರು. ಶಾಸಕರಿಂದ ಪಾಸ್ ಹಾಗೂ ತಮ್ಮವರಿಂದ ಶಿಫಾರಸು ಪಡೆದುಕೊಂಡು ವಿಧಾನಸೌಧದ ಒಳಗೆ ಬಂದಿದ್ದು ವಿಶೇಷ. ಸಚಿವ ಸಂಪುಟ ಮುಗಿಯುವವರೆಗೂ ಮೂರನೇ ಅಂತಸ್ತಿನ ಮೊಗಸಾಲೆಯಲ್ಲೇ ಬೀಡುಬಿಟ್ಟಿದ್ದ ಅಭಿಮಾನಿಗಳು, ನಂತರ ಸಚಿವರನ್ನು ಅಭಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಮಧ್ಯಾಹ್ನ 3 ಗಂಟೆಯವರೆಗೂ ವಿಧಾನಸೌಧದಲ್ಲಿ ಜನಜಂಗುಳಿ ಇತ್ತು. ಸಚಿವರ ಖಾತೆಗಳು ಅಂತಿಮವಾಗಿ ಪ್ರಕಟವಾಗುವವರೆಗೆ ಸಚಿವರಿಗೆ ಯಾವ ಕೊಠಡಿಯಲ್ಲಿ ಕುಳಿತುಕೊಳ್ಳಬೇಕೆಂಬ ಗೊಂದಲ ಇದ್ದುದರಿಂದ ಸಚಿವರೆಲ್ಲ ವಿಧಾನಸೌಧದಿಂದ ನಿರ್ಗಮಿಸಿದರು. ಖಾತೆಗಳು ಪ್ರಕಟವಾಗಲಿ, ನಂತರ ಕೊಠಡಿ ಪಡೆದುಕೊಂಡು ಕಾರ್ಯಾರಂಭಿಸುವ ಆಶಯ ಅವರದ್ದಾಗಿತ್ತು.
ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಸಚಿವರೆಲ್ಲ ಸೋಮವಾರದಿಂದಲೇ ಕಾರ್ಯಾರಂಭಿಸುವುದು ಸಂದೇಹವಾಗಿದೆ. ಶನಿವಾರ ಸಂಜೆಯವರೆಗೂ ಸಚಿವರ ಖಾತೆಗಳ ಬಗ್ಗೆ ಅಂತಿಮ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಸೋಮವಾರದ ವೇಳೆಗೆ ಸಚಿವರು ಕೊಠಡಿ ಪಡೆದು, ಪೂಜಾವಿಧಾನಗಳನ್ನು ಪೂರೈಸಿ ಪದಗ್ರಹಣ ಮಾಡುವುದು ಅನುಮಾನವಾಗಿದೆ.
ಸಚಿವರಿಗೆ ಖಾತೆಗಳು ಹಂಚಿಕೆಯಾದರೂ ಭಾನುವಾರ ಸರ್ಕಾರಿ ರಜೆಯಾದ್ದರಿಂದ ಕೊಠಡಿ ಹಂಚಿಕೆ ಕಾರ್ಯ ಆಗುವುದಿಲ್ಲ. ವಿಧಾನಸೌಧದ 3ನೇ ಮಹಡಿಯಲ್ಲಿ ಕೊಠಡಿ ಬೇಕು ಎನ್ನುವವರಿಗೇನೂ ಕಡಿಮೆ ಇಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ಈ ಪ್ರಕ್ರಿಯೆಯಲ್ಲ ಮುಗಿಯುತ್ತದೆ. ತೀರಾ ತರಾತುರಿ ಮಾಡಿದರೆ ಬುಧವಾರ ಕಚೇರಿ ಪೂಜೆಯೊಂದಿಗೆ ಸಚಿವರು ಪದಗ್ರಹಣ ಮಾಡಬಹುದು. ಇಲ್ಲದಿದ್ದರೆ ಮಂಗಳವಾರ ಬಹುತೇಕರು ಪದಗ್ರಹಣ ಮಾಡುವುದಿಲ್ಲ. ಹೀಗಾಗಿ ಬುಧವಾರದವರೆಗೆ ಅಥವಾ ಆಯಾ ಸಚಿವರ ಮುಹೂರ್ತಕ್ಕನುಗುಣವಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನೆರವೇರಲಿದೆ.