ಅನುದಾನ ರಹಿತ ಶಾಲೆ ಶುಲ್ಕ ಅಂತಿಮಗೊಳಿಸಲು ಕಸರತ್ತು
ಬೆಂಗಳೂರು: ರಾಜ್ಯದ ಅನುದಾನರಹಿತ ಶಾಲೆಗಳ ಪ್ರವೇಶ ಶುಲ್ಕವನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಅಂತಿಮಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಕುರಿತಂತೆ ಪ್ರಾಥಮಿಕ ಹಂತವಾಗಿ ನಗರದಲ್ಲಿ ಭಾನುವಾರ ಖಾಸಗಿ ಆಡಳಿತ ಮಂಡಳಿ, ಪಾಲಕರು ಹಾಗೂ ಶಿಕ್ಷಣ ತಜ್ಞರ ಜತೆ ಇಲಾಖೆಯ ಹಿರಿಯ ಅಧಿಕಾರಿಗಳು ದಿನವಿಡಿ ವಿಸ್ತೃತ ಚರ್ಚೆ ನಡೆಸಿದರು. ಆದರೆ ನಿಯಮವು ರಾಜ್ಯದ ಎಲ್ಲ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಹಿನ್ನೆಲೆಯಲ್ಲಿ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲೂ ಇದೇ ರೀತಿಯ ಸಭೆ ನಡೆಸಿ ನಡಾವಳಿ ತಯಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ 4 ವಿಷಯಗಳ ಕುರಿತಂತೆ ಚರ್ಚೆ ನಡೆಸಿ ಕರಡು ಪ್ರತಿ ರಚಿಸಲಾಗಿದೆ. ಈ ಪ್ರತಿಯನ್ನು ಎಲ್ಲ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಸ್ಥಳೀಯ ಪಾಲಕರು, ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈಗ ತಯಾರಾಗಿರುವ ಕರಡಿನ ಬಗ್ಗೆ ಚರ್ಚೆ ನಡೆದು, ಹೆಚ್ಚುವರಿ ಅಂಶಗಳ ಸೇರಿಕೆಯೂ ಆಗುತ್ತದೆ.
ಇದಾದ ಬಳಿಕ ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ ಪ್ರತ್ಯೇಕ ಕರಡು ಪ್ರತಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬರಲಿದೆ. ಎಲ್ಲ ಜಿಲ್ಲೆಗಳ ವರದಿ ಆಧರಿಸಿ ಮತ್ತೆ ರಾಜ್ಯ ಮಟ್ಟದ ಸಭೆ ನಡೆಸಲಾಗುತ್ತದೆ. ಅಂತಿಮವಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುತ್ತದೆ.
ಆದರೆ ಹೈಕೋರ್ಟ್ ಆದೇಶದ ಪ್ರಕಾರ ಮೇ 29ರಂದು ಈ ಕುರಿತಂತೆ ಅಂತಿಮ ವರದಿ ನೀಡಬೇಕಿತ್ತು. ವಿಸ್ತೃತ ಚರ್ಚೆಯ ಅನಿವಾರ್ಯತೆ ಹಾಗೂ ಕಾಲಾವಧಿಯನ್ನು ಕೋರ್ಟ್ ಗಮನಕ್ಕೆ ತಂದು ಹೆಚ್ಚಿನ ಕಾಲಾವಕಾಶ ಕೇಳಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜೂನ್ ಅಂತ್ಯದೊಳಗೆ ಶುಲ್ಕ ನಿಗದಿ ಕುರಿತಂತೆ ತೀರ್ಮಾನ ಕೈಗೊಳ್ಳಲು ಇಲಾಖೆ ಚಿಂತನೆ ನಡೆಸಿದೆ. ಭಾನುವಾರ ನಡೆದ ಸಭೆಯಲ್ಲಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗದಿ, ಮಾನದಂಡ, ಶಾಲೆಗಳ ಶ್ರೇಣಿಕರಣ, ಬೋಧಕ-ಬೋಧಕೇತರ ಸಿಬ್ಬಂದಿ ಸೇವಾನಿಯಮ, ಆಡಳಿತ ಮಂಡಳಿಗಳ ಹಿತಾಸಕ್ತಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಕುರಿತಂತೆ ಪ್ರತ್ಯೇಕ 4 ತಂಡ ರಚಿಸಿ ಚರ್ಚೆ ನಡೆಸಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು, ಪೋಷಕರು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪೋಷಕರು ಹಾಗೂ ಕೆಲ ಆಡಳಿತ ಮಂಡಳಿಯ ಹಠಮಾರಿತನ: ಹೈಕೋರ್ಟ್ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಸಭೆ ನಡೆಸಿತ್ತು. ಇಲಾಖೆಯು ಕೂಡ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ಮಾಡಿರಲಿಲ್ಲ. ಆದ್ದರಿಂದ ಬೆರಳೆಣಿಕೆಯ ಪಾಲಕರು ಹಾಗೂ ಆಡಳಿತ ಮಂಡಲಿಯ ಸದಸ್ಯರು ಭಾಗವಹಿಸಿದ್ದರು. ಆದರೆ ಸಭೆಗೆ ಆಗಮಿಸಿದ್ದ ಕೆಲ ಪಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರು ತಮಗೆ ರಾಜ ಮರ್ಯಾದೆ ದೊರೆಯಲಿಲ್ಲ ಎಂಬ ಕಾರಣಕ್ಕೆ ಸಭೆಯ ಉದ್ದೇಶ ಮರೆತು ಸಿಬ್ಬಂದಿ ಜತೆ ಜಗಳಕ್ಕೆ ಮುಂದಾದರು. ಇದರ ಫಲವಾಗಿ ಕೆಲ ಪೋಷಕರು ಹಾಗೂ ಶಿಕ್ಷಣ ತಜ್ಞರು ಸಭೆಯಿಂದ ಹೊರಹೋದರು.
ಶುಲ್ಕ ನಿಗದಿಯ ನಿಯಮ ಬದಲಾಯಿಸಿ: ಶಿಕ್ಷಣ ಹಕ್ಕು ಕಾಯಿದೆಯ ಶೇ.25 ಮೀಸಲು ಸೀಟುಗಳ ಆರ್ಥಿಕ ಹೊರೆಯನ್ನು ಪರಿಗಣಿಸಿ ಪ್ರವೇಶ ಶುಲ್ಕ ನಿಗದಿ ಮಾಡಬೇಕು. ಆರ್‌ಟಿಇ ಪ್ರಕಾರ ಹೆಚ್ಚುವರಿ ಹೊರೆಯು ಶಿಕ್ಷಣ ಸಂಸ್ಥೆಗಳ ಮೇಲೆ ಬೀಳುತ್ತದೆ. ಮತ್ತೊಂದೆಡೆ ಶೇ.25 ವಿದ್ಯಾರ್ಥಿಗಳ ಶುಲ್ಕವನ್ನು ಶೇ.75 ವಿದ್ಯಾರ್ಥಿಗಳಿಂದ ಪಡೆಯಬೇಕಾದ ಅನಿವಾರ್ಯತೆಯಿದೆ. ಈ ಕಾರಣದಿಂದ ಶುಲ್ಕ ನಿಗದಿ ಮಾಡುವಾಗ ಮೀಸಲು ಮಕ್ಕಳ ಲೆಕ್ಕಾಚಾರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಆಡಳಿತ ಮಂಡಳಿಯ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.