ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅನ್ಯಾಯ
ಕ.ಪ್ರ.ವಾರ್ತೆ ಮಾಗಡಿ ಮೇ 19
ರಾಮನಗರ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡದೆ ಕಡೆಗಣಿಸಿರುವುದು ಒಕ್ಕಲಿಗ ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರ ಸಮುದಾಯದ ಪ್ರಭಾವಿ ರಾಜಕೀಯ ಧುರೀಣ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಹಗಲಿರುಳು ದುಡಿದಿರುವ ಡಿ.ಕೆ. ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲಿಲ್ಲದ ಸರದಾರನಾಗಿ ಆರು ಬಾರಿ ಶಾಸಕರಾಗಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಇಂತಹ ಪ್ರಭಾವಿ ನಾಯಕನನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದ್ದು ಸರಿಯಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರ ಪಕ್ಷದ ಸಂಘಟನೆಯಲ್ಲಿನ ಕ್ರಿಯಾಶೀಲತೆ, ಜಿಲ್ಲೆಯ ಕುರಿತು ತನ್ನದೇ ಆದ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವುದಲ್ಲದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರಲು ಡಿಕೆಶಿ ಅವರ ಶ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ಅವರನ್ನು ಕೂಡಲೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಉತ್ತಮ ಸಂದೇಶ ನೀಡುವಂತೆ ನರಸಿಂಹಮೂರ್ತಿ ಒತ್ತಾಯಿಸಿದರು.
ಎಲ್ಲರ ಸಾಲ ಮನ್ನಾ ಮಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಶೋಷಿತ ಸಮುದಾಯದ ಸಾಲ ಮನ್ನಾ ಮಾಡಿದರೆ ಸಾಲದು. ಲಿಂಗಾಯುತ, ಒಕ್ಕಲಿಗ ಹಾಗೂ ಬ್ರಾಹ್ಮಣ ಸಮುದಾಯದ ರೈತರ ಸಾಲವನ್ನು ಸಹ ಮನ್ನಾ ಮಾಡುವಂತೆ ನರಸಿಂಹಮೂರ್ತಿ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಮತ್ತು ದಿ. ಎಸ್. ಬಂಗಾರಪ್ಪ ಅವರ ಆಡಳಿತದಲ್ಲಿ ಸಂಪುಟ ಸಚಿವರಾಗಿ ಉತ್ತಮ ಆಡಳಿತ ನೀಡಿರುವ ಡಿ.ಕೆ.ಶಿವಕುಮಾರ್ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಸಚಿವ ಸಂಪುಟದಲ್ಲಿ ಉತ್ತಮ ಖಾತೆ ನೀಡುವ ಮೂಲಕ ಜಿಲ್ಲೆಗೆ ವಿಶೇಷ ಸ್ಥಾನ ಮಾನ ನೀಡುವಂತೆ ತಾಲೂಕು ಕುದೂರು ಹೋಬಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮುಬೀನಾ ಸುಹೇಲ್, ಮಾಜಿ ಅಧ್ಯಕ್ಷ ಸುಹೇಲ್, ಸದಸ್ಯರಾದ ಶಾರದಮ್ಮ, ಯಶೋಧಮ್ಮ, ನಾಗರಾಜು, ಮೂರ್ತಿ, ಶಿವಕುಮಾರ್ ಸೇರಿದಂತೆ ಕ್ಷೇತ್ರದ ನೂರಾರು ಕಾಂಗ್ರೆಸ ಕಾರ್ಯಕರ್ತರು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.