ಗ್ರಾಮ ಸಹಾಯಕರ ಕಾಯಮಾತಿಗೆ ಆಗ್ರಹ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ19
ಕಂದಾಯ ಇಲಾಖೆ ವ್ಯಾಪ್ತಿಯ ಗ್ರಾಮ ಸೇವಕರು ಇಂದಿನವರೆಗೂ ದಿನಗೂಲಿಗಳಾಗಿಯೇ ದುಡಿಯುತ್ತಿದ್ದಾರೆ. ಅವರನ್ನು ಕಾಯಂ ನೌಕರರಾಗಿ ನೇಮಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಜೈರಾಮ್ ಹೇಳಿದರು.
ದೊಡ್ಡಬಳ್ಳಾಪುರ ಶಾಸಕರಾಗಿ ನೂತನವಾಗಿ ಆಯ್ಕೆಯಾಗಿರುವ ಟಿ.ವೆಂಕಟರಮಣಯ್ಯ ಅವರನ್ನು ಗ್ರಾಮ ಸಹಾಯಕರ ನೇತೃತ್ವದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯ ಸಂಘ ಗ್ರಾಮ ಸೇವಕರನ್ನು ಕಾಯಂಗೊಳಿಸಿ ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು ಮತ್ತು ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಬೃಹತ್ ಹೋರಾಟ ನಡೆಸಿತ್ತು. ಅದರ ಫಲವಾಗಿ ಸರ್ಕಾರ ವೇತನ ಹೆಚ್ಚಿಸಿತು. ಆದರೆ ಕಾಯಂ ನೌಕರರಾಗಿ ಇನ್ನೂ ಪರಿಗಣಿಸಿಲ್ಲ. ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಗ್ರಾಮ ಸಹಾಯಕರಿದ್ದು, ಅವರನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ವೆಂಕಟರಮಣಯ್ಯ ಅವರನ್ನು ಅಭಿನಂದಿಸಲಾಯಿತು. ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಕೇಂದ್ರ ಉಕ್ಕು ಸಚಿವಾಲಯ ಗ್ರಾಹಕ ಮಂಡಲಿ ಸದಸ್ಯ ಸಿ.ಜಿ.ನಾಗೇಶ್, ಗ್ರಾಮ ಸಹಾಯಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ವಿ.ಮಂಜುನಾಥ್, ತಾ.ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ಗಂಗಣ್ಣ, ಕಾರ್ಯದರ್ಶಿ ಎಚ್.ಎನ್.ಮಂಜುನಾಥ್, ಜಯಲಕ್ಷ್ಮಮ್ಮ, ರಾಜಘಟ್ಟ ಕಾಂತರಾಜು, ಗ್ರಾ.ಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕದ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.