ಪೂಜೇರಾಮನಹಳ್ಳಿ ಬಳಿ ಶವ ಪತ್ತೆ: ಇಬ್ಬರ ಬಂಧನ
ಕ.ಪ್ರ.ವಾರ್ತೆ ಸೂಲಿಬೆಲೆ ಮೇ 19
ಇಲ್ಲಿಗೆ ಸಮೀಪದ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪೂಜೇರಾಮನಹಳ್ಳಿ ಯಲ್ಲಿ ಮೇ 11 ರಂದು ಪತ್ತೆಯಾದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಾಸಿರ್ (30), ಮುಸ್ತಾಕ್ (31) ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ: ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೂಜೇರಾಮನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಕೋಲಾರದ ಇಮ್ರಾನ್ ಎಂಬಾತನ ಶವ ಮೇ 11 ರಂದು ಪತ್ತೆಯಾಗಿತ್ತು. ಸುದ್ದಿತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಸಿಪಿಐ ವಸಂತ್ ಹಾಗೂ ಪಿಎಸ್ಐ ಪ್ರಕಾಶ್ ಭೇಟಿ ನೀಡಿ ವ್ಯಕ್ತಿ ಮತ್ತು ಪ್ರದೇಶವನ್ನು ಪರಿಶೀಲನೆ ಮಾಡಿದಾಗ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿ ಹೋಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಕೊಲೆಯಾದ ವ್ಯಕ್ತಿಯ ಮೊಬೈಲ್ ಜಾಡು ಹಿಡಿದು ಹೊರಟ ನಂದಗುಡಿ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದರು.
ಕೋಲಾರದಲ್ಲಿ ಟ್ರಾವೆಲ್ ಏಜೆನ್ಸಿ ಹೊಂದಿರುವ ವ್ಯಕ್ತಿಯೊಬ್ಬರ ಪತ್ನಿಯೊಂದಿಗೆ ಇಮ್ರಾನ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮೇ 10 ರಂದು ಇಮ್ರಾನ್ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ನಡೆಸುತ್ತಿರುವುದನ್ನು ಕಂಡು ಕುಪಿತಗೊಂಡ ಗಂಡ ಹಾಗೂ ಇತರ ಬಾವಂದಿರು ಸೇರಿ ಇಮ್ರಾನ್ನನ್ನು ಕತ್ತು ಹಿಸಕಿ ಕೊಂದು ಶವವನ್ನು ಪೂಜೇರಾಮನಹಳ್ಳಿ ಬಳಿ ಬಿಸಾಡಿ ಪರಾರಿಯಾಗಿದ್ದರು.
ಕೊಲೆಯಾದ ವ್ಯಕ್ತಿಯ ಮೊಬೈಲು ಜಾಡು ಹಿಡಿದು ಹೋರಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಿಂತಿದ್ದ ಲಾರಿಗೆ ಆಕಸ್ಮಿಕ ಬೆಂಕಿ
ದೇವನಹಳ್ಳಿ: ದೇವನಹಳ್ಳಿ ಬೆಂಗಳೂರು ರಸ್ತೆಯ ಬಂಡೆ ಕೆರೆ ಗೋಟ್ಬಳಿ ಸೇಲಂನಿಂದ ದೇವನಹಳ್ಳಿ ಮಾರ್ಗವಾಗಿ ಯಲಹಂಕಕ್ಕೆ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ಶನಿವಾರ ಸಂಜೆ 7 ಗಂಟೆ ಸಮಯದಲ್ಲಿ ಚಹ ಕುಡಿಯಲು ಹೋಗಿ ಬರುವಷ್ಟರಲ್ಲಿ ಲಾರಿಯಲ್ಲಿ ಹೊಗೆ ಕಾಣಿಸಿಕೊಂಡು ನಂತರ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಕೂಡಲೇ, ಲಾರಿಯ ಚಾಲಕ ವೀರಾಸ್ವಾಮಿ ಸ್ಥಳೀಯ ಪೊಲೀಸರಿಗೆ ಮತ್ತು ತನ್ನ ಮಾಲೀಕನಿಗೆ ಸುದ್ದಿ ಮುಟ್ಟಿಸಿದನು. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಆಗಮಿಸಿ ವಾಹನ ಸಂಚಾರ ನಿಯಂತ್ರಣಗೊಳಿಸಿದರಲ್ಲದೆ ಎರಡು ಅಗ್ನಿಶಾಮಕ ವಾಹನ ಕರೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರೂ ಲಾರಿಯಲ್ಲಿದ್ದ ಲಕ್ಷಾಂತಢಿರ ರುಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಲಾರಿಯಲ್ಲಿ ಹೊಸ ಸೀರೆಗಳು, ಬಟ್ಟೆಗಳ ಹೊಲಿಗೆ ಸಂದರ್ಭದಲ್ಲಿ ಉಪಯೋಗಿಸುವ ವಸ್ತುಗಳು ಅಲ್ಲದೆ ರಾಸಾಯನಿಕ ವಸ್ತುಗಳು ಇದ್ದವೆಂದು ತಿಳಿದು ಬಂದಿದೆ. ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.