ಮಳೆ ಅವಘಡಕ್ಕೆ ಪಾಲಿಕೆ ಸಜ್ಜು
ಬೆಂಗಳೂರು: ನಗರದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನಾಹುತ ತಡೆಗೆ ಬಿಬಿಎಂಪಿ ಸಜ್ಜಾಗುತ್ತಿದೆ. ಎರಡು ವರ್ಷಗಳ ಹಿಂದೆ ಸುರಿದ ಮಹಾಮಳೆಗೆ ನಗರ ತತ್ತರಿಸಿತ್ತು. ಹೀಗಾಗಿ ಈ ಬಾರಿ ಬಿಬಿಎಂಪಿ ಮಳೆಗಾಲದ ಆರಂಭದಲ್ಲೇ ಎಚ್ಚೆತ್ತಿದೆ. ಮಳೆಯಿಂದ ಆಗಬಹುದಾದ ಅನಾಹುತ ತಡೆಗೆ ಮುಂಜಾಗ್ರತಾ ಕೆಲಸ ಆರಂಭಿಸಿದೆ. ಇದಕ್ಕಾಗಿ ಸ್ಥಳೀಯ ನಿವಾಸಿಗಳು, ಸೇವಾ ಸಂಸ್ಥೆಗಳ ಸಹಯೋಗ ಪಡೆಯುವುದಕ್ಕೂ ಬಿಬಿಎಂಪಿ ಮುಂದಾಗಿದೆ. ಆರಂಭಿಕ ಪ್ರಯತ್ನವಾಗಿ ಭಾನುವಾರ ಈಜೀಪುರದಲ್ಲಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ನೇತೃತ್ವದಲ್ಲಿ ಸಮಗ್ರ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಯ್ಯ ಅವರು, ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ನಗರಾದ್ಯಂತ ತೀವ್ರ ಸ್ವಚ್ಚತಾ ಕಾರ್ಯ ನಡೆಸಲಾಗುತ್ತದೆ ಎಂದರು. ಮಂಗಳವಾರದಿಂದ ವಿವಿಧ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಕಸ ವಿಲೇವಾರಿ, ರಸ್ತೆ ದುರಸ್ತಿ ಎಲ್ಲಕ್ಕಿಂತ ಮುಖ್ಯವಾಗಿ ಮಳೆ ನೀರು ಚರಂಡಿಗಳಲ್ಲಿ ಸುಗಮವಾಗಿ ಹರಿದು ಹೋಗುವಂತೆ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪಾದಚಾರಿ ರಸ್ತೆಗಳನ್ನೂ ಸರಿಪಡಿಸುತ್ತಿದೆ ಎಂದು ಸಿದ್ದಯ್ಯ ಹೇಳಿದರು. ಸೇನಾ ಇಲಾಖೆ ಸಿಬ್ಬಂದಿ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು ಹಾಗೂ ಇತರ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ದಿನವಿಡೀ ದುಡಿದರು.
ಅರ್ಜಿ ಆಹ್ವಾನ
ಮಾಗಡಿ: ಚಿಗುರು ಬಾಲವಿಕಾಸ ಸಂಸ್ಥೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ನಡೆಯುತ್ತಿರುವ ಕಿರಣ ಬಾಲಕಿಯರ ವಸತಿ ವಿದ್ಯಾರ್ಥಿ ನಿಲಯಕ್ಕೆ 5 ರಿಂದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 2013-14ನೇ ಸಾಲಿಗೆ ಸೇರಬಯಸುವ ಆಸಕ್ತ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಿಗುರು ಬಾಸ ವಿಕಾಸ ಸಂಸ್ಥೆ, ನಂ.215, ನಾರಸಿಂಹ ಕಾಂಪೌಂಡ್, ಕಲ್ಯಗೇಟ್, ಮಾಗಡಿ ಟೌನ್, ರಾಮನಗರ ಜಿಲ್ಲೆ, ಮೊ.9740506004 ಸಂಪರ್ಕಿಸುವಂತೆ ಕೋರಲಾಗಿದೆ.
ಜಯಂತ್ಯುತ್ಸವ
ಮಾಗಡಿ: ಪಟ್ಟಣದ ತಿಪ್ಪಸಂದ್ರ ಹೋಬಳಿ ನೇರಳೆ ಕೆರೆ ಗ್ರಾಮದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಜಯಂತ್ಯುತ್ಸವ ಮೇ 24 ರಂದು ನಡೆಯಲಿದೆ. ಶಾಸಕ ಎಚ್.ಸಿ. ಬಾಲಕೃಷ್ಣ, ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್, ತಾ.ಪಂ. ಸದಸ್ಯೆ ಶಾಂತಮ್ಮ ನರಸಿಂಹಮೂರ್ತಿ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿಶೇಷ ಪೂಜೆ
ಮಾಲೂರು: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ವಾಸವಿ ಜಂಯತ್ಯುತ್ಸವ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಅಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ನಡೆಯಲಿದ್ದು, ಸುಮಂಗಲಿಯರಿಂದ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
ಡಿಕ್ಕಿ: ಸ್ಕೂಟರ್ ಸವಾರ ಸಾವು
ಮಾಗಡಿ: ಅಪರಿಚಿತ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48 ರ ಈಡಿಗ ಮಹಾಸಂಸ್ಥಾನದ ಬಳಿ ನಡೆದಿದೆ. ಅರಳಿಮರದ ಪಾಳ್ಯದ ರಂಗಸ್ವಾಮಿ (38) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಈತ ತಾಲೂಕಿನ ಮರೂರು ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಂಗಸ್ವಾಮಿ ಸೋಲೂರು ಸರ್ಕಾರಿ ಆಸ್ಪತ್ರೆಗೆ ಔಷಧ ತಲುಪಿಸಿ ಮನೆಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜೂಜಾಟ: 6 ಮಂದಿ ಬಂಧನ
ಕೋಲಾರ: ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದ ಟ್ಯಾಂಕ್ ಬಂಡ್ ಬಳಿ ಜೂಜಾಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿ ಪಣಕ್ಕೆ ಇಟ್ಟಿದ್ದ 10,250 ವಶಪಡಿಸಿಕೊಂಡಿದ್ದಾರೆ. ಶನಿವಾರ ಜಿಲ್ಲಾ ಅಪರಾಧ ನಿಯಂತ್ರಣ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಶಿವಾರಪಟ್ಟಣಕ್ಕೆ ತೆರಳಿ ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಉಗಾಂಡಾ ಪ್ರಜೆಗಳ ಉಡಾಫೆ; ಗೂಸಾ
ಬೆಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಲ್ಲದೆ ಸಂಚಾರ ಪೊಲೀಸರೊಂದಿಗೆ ಗಲಾಟೆ ಮಾಡಿ ಅವರ ಮೇಲೆ ಹಲ್ಲೆಗೆ ಮುಂದಾದ ಉಗಾಂಡ ದೇಶದ ನಾಲ್ವರು ಪ್ರಜೆಗಳಿಗೆ ಸಾರ್ವಜನಿಕರು ಗೂಸಾ ಕೊಟ್ಟು ಬುದ್ದಿ ಕಲಿಸಿರುವ ಘಟನೆ ತುಮಕೂರು ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಶನಿವಾರ ರಾತ್ರಿ ಪೀಣ್ಯ ಸಂಚಾರ ಪೊಲೀಸರು ತುಮಕೂರು ರಸ್ತೆ 8ನೇ ಮೈಲಿಗಲ್ಲು ಬಳಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಮಧ್ಯರಾತ್ರಿ 1.30ರ ಸುಮಾರಿಗೆ ನಗರದ ಕಡೆಯಿಂದ ಸ್ವಿಫ್ಟ್ ಕಾರಿನಲ್ಲಿ ಉಗಾಂಡ ದೇಶದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಬರುತ್ತಿದ್ದರು. ಪೊಲೀಸರು ಮದ್ಯ ಸೇವನೆ ತಪಾಸಣೆಗಾಗಿ ಆಲ್ಕೋಮೀಟರ್ನಲ್ಲಿ ಊದುವಂತೆ ಹೇಳಿದ್ದಾರೆ. ಅದಾಗಲೇ ಮದ್ಯದ ನಶೆಯಲ್ಲಿದ್ದ ಚಾಲಕ ಸೇರಿದಂತೆ ನಾಲ್ವರು ಉದ್ಧಟತನ ಪ್ರದರ್ಶಿಸಿ ಪೊಲೀಸರ ಕರ್ತವ್ಯಕ್ಕೆ ಸಹಕರಿಸಿಲ್ಲ. ಮದ್ಯ ಸೇವಿಸಿದ್ದ ಕಾರಣ ಲೈಸನ್ಸ್ ಹಾಗೂ ವಾಹನ ದಾಖಲೆಗಳನ್ನು ಒಪ್ಪಿಸಿ ಸೋಮವಾರ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಪೊಲೀಸರು ಹೇಳಿದ್ದಾರೆ.