ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿದ್ದರಾಮಯ್ಯ ಘೋಷಣೆ ರೈತರ ಅಲ್ಪತೃಪ್ತಿಗಷ್ಟೆ ಸೀಮಿತ

Srinivasa Murthy VN
Updated On : 20 May 2013, 12:48 pm

ನೆಲಮಂಗಲ: ಕಾಂಗ್ರೆಸ್ ಸರ್ಕಾರದ ನೂತನ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಲೀಟರ್ ಹಾಲಿಗೆ 4 ರು. ಪ್ರೋತ್ಸಾಹ ಧನವನ್ನು ಘೋಷಣೆ  ಮಾಡಿ ರೈತರಿಗೆ ನೀಡಿದ ಬಂಪರ್ ಕೊಡುಗೆಯಿಂದ ಹೈನೋದ್ಯಮ ಮಾಡುವ ರೈತರು ಅಲ್ಪ ಸಂತೃಪ್ತರಾಗಿದ್ದಾರೆ.
 ಕಳೆದ ವರ್ಷ ಸರಿಯಾಗಿ ಮಳೆ ಬಾರದೆ ಇದುದ್ದರಿಂದ ರೈತರಿಗೆ ನಿರೀಕ್ಷಿಸಿದಷ್ಟು ಬೆಳೆ, ದನಗಳಿಗೆ ಮೇವು ದೊರೆಯಲಿಲ್ಲ.  ಈ ಕಾರಣದಿಂದ ದನಗಳಿಗೆ ಮೇವು ಹೊಂದಿಸಿಕೊಳ್ಳಲು ಸಾಧ್ಯವಾಗದೇ ಸಾಕಿದ್ದ ಎಂಟು ಹಸುಗಳ ಪೈಕಿ ನಾಲ್ಕನ್ನು ಕೇಳಿದಷ್ಟಕ್ಕೆ ಮಾರಿ ಉಳಿದ ನಾಲ್ಕು ಹಸುಗಳನ್ನು ಉಳಿಸಿಕೊಂಡೆ.  
ಆದರೂ ಉಳಿಸಿಕೊಂಡ ಹಸುಗಳಿಗೆ ಮೇವು ಹೊಂದಿಸಿಕೊಳ್ಳಲು ಹರಸಾಹಸ ಮಾಡಿ ಸೊರಗಿ ಹೋಗಿದ್ದೇವೆ ಎನ್ನುತ್ತಾರೆ ಹೊನ್ನೇನಹಳ್ಳಿ ರೈತ ಯುವಕ ಮುದ್ದಪ್ಪ.
ನಷ್ಟವೇ ಹೆಚ್ಚು: ದುಬಾರಿಯಾಗಿರುವ ಮೇವು ಕೊಳ್ಳಬೇಕಾದ್ದರಿಂದ ಹಸು ಸಾಕಣೆಯಿಂದ ಬರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಇದರಿಂದ ಅಲ್ಪಸ್ವಲ್ಪ ಕೂಡಿಟ್ಟಿದ್ದ ಹಣವೆಲ್ಲಾ ಖರ್ಚಾಯಿತು. ಆದರೂ ತಮ್ಮ ಕಸುಬನ್ನು ಬಿಡದೆ ಕಷ್ಟವನ್ನು  ಸಹಿಸಿಕೊಂಡು ಹೈನುಗಾರಿಕೆಯನ್ನು ಮುಂದುವರೆಸುತ್ತಿದ್ದೇನೆ ಎನ್ನುತ್ತಾರೆ.ಈಗ ಸರ್ಕಾರ ಲೀಟರ್ ಹಾಲಿಗೆ 2 ರು. ಪ್ರೋತ್ಸಾಹ ಧನ ಹೆಚ್ಚಿಸಿದೆ. ಇದರಿಂದ  ಹೊಸ ಭರವಸೆ ಮೂಡುತ್ತಿದ್ದರೂ ಕಷ್ಟಕರವಾದ ಈ ಬರಗಾಲದಲ್ಲಿ ಈ ಪ್ರೋತ್ಸಾಹಧನ ಏನೇನು ಸಾಲದು.  
ಕುಡಿಯುವ ನೀರನ್ನು ಕೊಳ್ಳುವ ಈ ಕಾಲದಲ್ಲಿ ಒಂದು ಪೆಂಡಿ ಹುಲ್ಲಿಗೆ ಇನ್ನೂರರಿಂದ ಮುನ್ನೂರು, ಹಸಿ ಮೇವು ಒಂದು ಸಾಮಾನ್ಯ ಹೊರೆಗೆ ನಾಲ್ಕು ನೂರುಗಳಿಂದ ಐದುನೂರು, ಪಶು ಆಹಾರವಾದ 50 ಕೆ.ಜಿಯ ಪೀಡ್‌ನ ಬೆಲೆ 780, ಬೂಸ 50 ಕೆ.ಜಿಗೆ 900 ರು, ಖರ್ಚುಮಾಡಬೇಕು.  ಇನ್ನು ಹಣ ಉಳಿಸುವುದಾದರೂ ಹೇಗೆ ಎಂಬುದು ಇವರ ಪ್ರಶ್ನೆ   ಡೈರಿಯಲ್ಲಿ ಲೀಟರ್ ಒಂದಕ್ಕೆ 21.90 ರು. ಜೊತೆಗೆ 4 ರು. ಪ್ರೋತ್ಸಾಹಧನ ಸೇರಿ  ಒಂದು ಲೀಟರ್‌ಗೆ 25.90 ರು. ದೊರೆಯುತ್ತದೆ.  ಮೂರು ಲೀಟರ್ ಹಾಲು ನೀಡುವ  ಹಸುವಿಗೆ ತಿಂಗಳಿಗೆ ಬರುವ ಆದಾಯವೆಲ್ಲಾ ಖರ್ಚಾಗುತ್ತದೆ.  ಇನ್ನು ಉಳಿಕೆ ಹಣ ಎಷ್ಟು. ಇನ್ನು ಸಂಸಾರ ಸಾಗಿಸುವುದು, ಮಕ್ಕಳ ಶಿಕ್ಷಣದ ಖರ್ಚು, ಅನಾರೋಗ್ಯದ ಸಂದರ್ಭದಲ್ಲಿ ಸಾಕಷ್ಟು ಹಣ ಔಷಧಿಗೆ ಖರ್ಚಾಗುತ್ತದೆ. ಇಷ್ಟೆಲ್ಲಾ ಖರ್ಚುವೆಚ್ಚಗಳು ಬರುತ್ತವೆ. ಇದರಿಂದ ಇಂದು ಪಶುಪಾಲನೆ ಮಾಡುವುದು ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಮುಚ್ಚಿದ ಗೋಶಾಲೆ: ಬಿಜೆಪಿ ಸರ್ಕಾರ ಗೋಶಾಲೆಗಳನ್ನು ತೆರೆದಷ್ಟೇ ಬೇಗ ಮುಚ್ಚಿತು. ಕೇವಲ ಒಂದು ವಾರ ಮಾತ್ರ ನಡೆದ ಗೋಶಾಲೆಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ದೊರೆಯಲಿಲ್ಲ.  
 ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸ್ಥಿತಿವಂತರು ಗೋಶಾಲೆಗಳಿಗೆ ಸರಬರಾಜು ಆಗುತ್ತಿದ್ದ ಪಶು ಆಹಾರ ಮತ್ತು ಮೇವನ್ನು ಬಳಸಿಕೊಂಡು ನಿಜವಾದ ರೈತರಿಗೆ ಮೋಸ ಮಾಡಿದರು ಎಂಬ ಆರೋಪ ರೈತ ಸಮುದಾಯದಲ್ಲಿ ಕೇಳಿಬರುತ್ತಿದೆ.ಸರ್ಕಾರ ಪ್ರೋತ್ಸಾಹ ಧನದ ಬದಲಿಗೆ ಜಾನುವಾರುಗಳ ಗಣತಿಯಂತೆ ಪ್ರತಿ ಹಸುವಿಗೆ ಇಂತಿಷ್ಟು ಮೇವು ಸರಬರಾಜು ಮಾಡಬೇಕು. ದುಬಾರಿ ಹಣ ನೀಡಿ ಮೇವು ಖರೀದಿ ಮಾಡುವುದು ತಪ್ಪುತ್ತದೆ ಎನ್ನುತ್ತಾರೆ ಪೆಮ್ಮನಹಳ್ಳಿ ಜಿ.ಮಾರುತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement