ಗುರುವಿನ ಆಶೀರ್ವಾದ ಇದ್ದರೆ ಗೆಲವು: ನಟ ಪ್ರೇಮ್
ಹಗರಿಬೊಮ್ಮನಹಳ್ಳಿ: ಗುರುವಿನ ಆಶೀರ್ವಾದ ಇದ್ದರೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಸುಲಭವಾಗಿ ಗೆಲ್ಲಬಹುದು. ಇಲ್ಲದಿದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸಾಧನೆ ಹಿಂದೆ ಒಬ್ಬ ಗುರುವಿರುತ್ತಾನೆ ಎಂಬುದನ್ನು ಮರೆಯಕೂಡದು ಎಂದು ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಹೇಳಿದರು.
ಸೋಮವಾರ ಹಳೇಹಗರಿಬೊಮ್ಮನಹಳ್ಳಿಯಲ್ಲಿ ನೂತನ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕುರುಹಿನಶೆಟ್ಟಿ ಸಮಾಜದವರು ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿ, ನಾನು ಇವತ್ತು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಗುರುವಿನ ಆಶೀರ್ವಾದವೇ ಕಾರಣ ಎಂದರು. ಕುರುಹಿನಶೆಟ್ಟಿ ಸಮಾಜದ ಪೀಠಾಧೀಶ ಶ್ರೀ ನೀಲಕಂಠೇಶ್ವರ ಪಟ್ಟದಾರ್ಯಶ್ರೀಗಳು ಸಾನಿಧ್ಯ ವಹಿಸಿದ್ದರು.
ಚಂದ್ರನತ್ತ ಪ್ರೇಮ್ ಚಿತ್ತ: ಚಾರ್ ಮಿನಾರ್ ತುಂಬಾ ಯಶಸ್ವಿಯಾಗಿದ್ದು, ಶತದಿನೋತ್ಸವ ಆಚರಿಸಿದೆ. ಜೂನ್ ತಿಂಗಳಲ್ಲಿ ತೆರೆಗೆ ಬರುತ್ತಿರುವ 'ಚಂದ್ರ' ಚಿತ್ರವೂ ಸೂಪರ್ ಹಿಟ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ 'ಚಂದ್ರ' ಚಿತ್ರ ನನ್ನ ವೃತ್ತಿ ಜೀವನಕ್ಕೆ ಉತ್ತಮ ತಿರುವು ನೀಡುವ ಭರವಸೆ ಇದೆ. ಈ ಚಿತ್ರವನ್ನು ರೂಪಾ ಐಯ್ಯರ್ ನಿರ್ದೇಶಿಸಿದ್ದಾರೆ ಎಂದು ಹೇಳಿದರು.