ಉದ್ಯೋಗ ಮೇಳಕ್ಕೆಉತ್ತಮ ಪ್ರತಿಕ್ರಿಯೆ
ಮೈಸೂರು: ಯುವಜನತೆಯ ನಿರುದ್ಯೋಗ ನಿವಾರಣೆಗಾಗಿ ಇಲ್ಲಿನ ನಂಜರಾಜ ಬಹುದ್ದೂರ್ ಛತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜ್ಯುಬಿಲೆಂಟ್ ಭಾರತೀಯ ಪ್ರತಿಷ್ಠಾನ ಹಾಗೂ ಲೇಬರ್ ನೆಟ್ ಸಂಸ್ಥೆ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ ಈ ಉದ್ಯೋಗ ಮೇಳವನ್ನು ನಂಜನಗೂಡಿನ ಲೇಬರ್ನೆಟ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಜಾನ್ಸನ್ ಉದ್ಘಾಟಿಸಿದರು. ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳು ಹಾಗೂ ಬಿ.ಕಾಂ, ಬಿ.ಎಸ್ಸಿ, ಬಿ.ಎ, ಬಿಬಿಎಂ, ಬಿ.ಇ ಅಲ್ಲದೆ ಎಂಬಿಎ, ಎಂ.ಕಾಂ, ಎಂಎಸ್ಡಬ್ಲ್ಯೂ ಹಾಗೂ ಎಂಸಿಎ ಪದವೀಧರರು ಭಾಗವಹಿಸಿ ತಮ್ಮ ನೆಚ್ಚಿನ ಕಂಪನಿಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಸ್ವವಿವರ ಮತ್ತು ಅನುಭವ ಮುಂತಾದ ಮಾಹಿತಿ ನೀಡುವುದು ಕಂಡುಬಂತು. ಹಿಂದೂಜಾ ಗ್ಲೋಬಲ್ ಸಲ್ಯೂಷನ್, ನವಭಾರತ ಫರ್ಟಿಲೇಷರ್ಸ್, ಮೈಸೂರು ಐಟಿ ಸಲ್ಯೂಷನ್, ನಂದಿ ಟಿವಿಎಸ್, ಭೂಮಿಕಾ ಹೌಸಿಂಗ್ ಫೈನಾನ್ಸ್, ಕೆಫೆಕಾಫಿ ಡೇ, ಎಚ್ಡಿಎಫ್ಸಿ ಹಾಗೂ ಎಲ್ಐಸಿ ಸೇರಿದಂತೆ 10ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಿದ್ದವು.ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ವಿವಿಧ ಕಂಪನಿಗಳನ್ನು ಆಹ್ವಾನಿಸಿ, ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಾನ್ಸನ್ ತಿಳಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 500 ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.