ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಯಾಟ್‌ಫಿಷ್ ಹೊಂಡಗಳ ದುರ್ನಾತಕ್ಕೆ ಜನ ತತ್ತರ

Srinivasa Murthy VN
Updated On : 21 May 2013, 11:34 am

ಕ.ಪ್ರ.ವಾರ್ತೆ, ಸೂಲಿಬೆಲೆ ಮೇ 21
ಸೂಲಿಬೆಲೆ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಆಫ್ರಿಕನ್ ಕ್ಯಾಟ್ ಸಾಕಣೆ ಮಾಡುವ ಹೊಂಡಗಳು  ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಹೊಂಡಗಳಿಂದ ಬರುವ ದುರ್ನಾತಕ್ಕೆ ಸ್ಥಳೀಯ ನಾಗರಿಕರು ನೆಮ್ಮದಿ ಕಳೆದುಕೊಂಡು ತತ್ತರಿಸುವಂತಾಗಿದೆ.
 ಹೊಂಡಗಳನ್ನು ತೆರೆವು ಮಾಡುವಂತೆ ಕ್ರಮಕೈಗೊಳ್ಳಿ ಎಂದು ನಾಗರಿಕರು ಸೂಲಿಬೆಲೆ ಗ್ರಾಪಂಗೆ ದೂರು ನೀಡಿದ್ದಾರೆ.
ಕಾನೂನು ಬಾಹಿರವಾಗಿರುವ ಈ ಮೀನು ಹೊಂಡಗಳನ್ನು ಸೂಲಿಬೆಲೆ ಸುತ್ತ ಪ್ರತಿ ನಿರ್ಮಾಣ ಮಾಡುತ್ತಿದ್ದು, ಇದರ ನಿಯಂತ್ರಣಕ್ಕೆ ಯಾವುದೇ ಇಲಾಖೆಯ ಅಧಿಕಾರಿಗಳು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
 ಕಳೆದ 6-7 ತಿಂಗಳಿಂದ ಖಾಸಗಿ ಮತ್ತು ಸರ್ಕಾರಿ ಕೆರೆ ಅಂಗಳದಲ್ಲಿ ಹೊಂಡಗಳು ರಾಜಾರೋಷವಾಗಿ ನಿರ್ಮಾಣವಾಗುತ್ತಿವೆ. ಕೆಲವರು ಖಾಸಗಿ ಜಮೀನುಗಳನ್ನು ಗುತ್ತಿಗೆ ಪಡೆದು ಮೀನು ಸಾಕಣೆಯಲ್ಲಿ ತೊಡಗಿದ್ದರೆ, ಬಹುತೇಕ ಮಂದಿ ಖರಾಬ್ ಮತ್ತು ಕೆರೆ ಅಂಗಳದ ಜಮೀನನ್ನು ಬಳಿಸಿಕೊಂಡಿದ್ದಾರೆ.
ಕೆರೆ ಅಂಗಳ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಿಕೆಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲ ಎಂದು ಸುಮ್ಮನಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ
ನೋಟಿಸ್ ನೀಡಿತ್ತು: ಹೊಂಡಗಳ ಸಂಖ್ಯೆ ಕಡಿಮೆಯಿರುವಾಗಲೇ ಗ್ರಾಪಂ ಅಧಿಕಾರಿಗಳು ಹೊಂಡಗಳ ತೆರವು ಮಾಡುವಂತೆ ನೋಟಿಸ್ ನೀಡಿ ಹೆಚ್ಚಿನ ಕ್ರಮಕ್ಕೆ ತಹಸೀಲ್ದಾರ್ ಹಾಗೂ ಇಓ ಅವರಿಗೆ ಪತ್ರ ಬರೆದು ತಿಳಿಸಿದ್ದು ಅವರು ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
 ಸೂಲಿಬೆಲೆ ಗಿಡ್ಡಪ್ಪನಹಳ್ಳಿ ರಸ್ತೆಯ ನಾನಾ ಕಡೆ, ಬೆಟ್ಟಹಳ್ಳಿ ಕೆರೆ ಅಂಗಳ, ಜನತಾ ಕಾಲೊನಿ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಸಿದ್ದೇನಹಳ್ಳಿ ಗ್ರಾಮಕ್ಕೆ ಹೋಗುವ  ರಸ್ತೆ ಬದಿ ಹಾಗೂ ತೋಟಗಳ ಮಧ್ಯ ಸಹ ಹೊಂಡಗಳನ್ನು ನಿರ್ಮಿಸಿ ಮೀನು ಸಾಕಣಿಗೆ ಬಳಿಸುತ್ತಿದ್ದಾರೆ.
ದುರ್ನಾತ: ಹೊಂಡಗಳಲ್ಲಿರುವ ಮೀನುಗಳಿಗೆ ಹಾಕುವ ಆಹಾರ ಪದಾರ್ಥಗಳಲ್ಲಿ ಪ್ರಾಣಿಗಳ ಕರಳು, ಸತ್ತ ನಾನಾ ಜಾತಿ ಪ್ರಾಣಿಗಳು, ರೇಷ್ಮೆ ಹುಳುಗಳನ್ನು ಬೇಯಿಸಿ ಮೀನು ಹೊಂಡಗಳಿಗೆ ಹಾಕುವುದರಿಂದ ನೀರು ಕಲುಷಿತವಾಗಿ ದುರ್ನಾತ ಬೀರಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಗ್ರಾಪಂಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಇವರೇನಂತಾರೆ

ಸೂಲಿಬೆಲೆಯಲ್ಲಿ ಕಾನೂನು ಬಾಹಿರವಾಗಿರುವಂತ ಆಫ್ರಿಕನ್ ಕ್ಯಾಟ್ ಫಿಷ್ ಸಾಕಾಣಿಕೆ ಬಗ್ಗೆ ಕ್ರಮ ಕೈಗೊಳ್ಳಲು ತಹಸೀಲ್ದಾರ್, ಇ    ಓಗೆ ಪತ್ರ ಮುಖೇನ ತಿಳಿಸಲಾಗಿದ್ದು, ಸಾಕಣಿಕೆದಾರರಿಗೆ ನೋಟಿಸ್ ನೀಡಿದೆ.
- ನಾಗರಾಜ್, ಪಿಡಿಒ ಸೂಲಿಬೆಲೆ ಗ್ರಾಪಂ.

ಆಫ್ರಿಕನ್ ಕ್ಯಾಟ್ ಫಿಷ್ ಸಾಕಾಣಿಕೆ ಮಾಡುವುದು ಕಾನೂನು ಬಾಹಿರ ಎಂದು ಕೋರ್ಟ್ ತೀರ್ಪು ನೀಡಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಚರಣಿ ನಡೆಸಿ ಸೂಲಿಬೆಲೆಯಲ್ಲಿರುವ ಹೊಂಡಗಳನ್ನು ಮುಚ್ಚಲಾಗುವುದು
- ಅಮೃತ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ-ಹೊಸಕೋಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement