ದೊಡ್ಡಬಳ್ಳಾಪುರದಲ್ಲಿ ಮುತ್ಯಾಲಮ್ಮದೇವಿ ಜಾತ್ರೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 21
ಇಲ್ಲಿನ ಶಾಂತಿನಗರದಲ್ಲಿರುವ ನಗರದೇವತೆ ಶ್ರೀಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಆರಂಭವಾಯಿತು. 2 ದಿನಗಳ ಕಾಲ ನಡೆಯುವ ಈ ಸುಪ್ರಸಿದ್ಧ ಜಾತ್ರೆ ಅಂಗವಾಗಿ ಶ್ರೀಮಾತೆಗೆ ತಾಲೂಕಿನ ಹಲವು ಗ್ರಾಮಗಳ ಗ್ರಾಮಸ್ಥರು ರಥಗಳು ಮತ್ತು ಆರತಿಗಳ ಮೂಲಕ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳವಾರ ಮಧ್ಯಾಹ್ನ ವಿಶೇಷ ಪೂಜೆ ನಂತರ ಮುತ್ಯಾಲಮ್ಮ ದೇವಿ ರಾಜಬೀದಿ ಉತ್ಸವ-ಜಾತ್ರಾ ಕಾರ್ಯಕ್ರಮ ನಡೆಯಿತು. ನೂರಾರು ಜನ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ, ನಾಗಸಂದ್ರ, ಕೊಡಿಗೇಹಳ್ಳಿ, ಶಾಂತಿನಗರ, ದೊಡ್‌ಡಬಳ್ಳಾಪುರ ನಗರ ಮತ್ತು ವಿವಿಧ ಬಡಾವಣೆಗಳ ಜನ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಿವಿದೆಡೆಗಳಿಂದ ಮಹಿಳೆಯರು ಹೊಂಬಾಳೆ ಆರತಿಗಳನ್ನು ವಿಶೇಷವಾಗಿ ಅಲಂಕರಿಸಿ ತಲೆಯ ಮೇಲೆ ಹೊತ್ತು ತಂದು ಶ್ರೀಮಾತೆಗೆ ಅರ್ಪಿಸಿದರು.
ತಂಡೋಪತಂಡವಾಗಿ ಮಹಿಳೆಯರು ಆರತಿಗಳನ್ನು ಹೊತ್ತು ತಂದು ತಮ್ಮ ಜನಪದ ಸಂಸ್ಕೃತಿಯ ಶಕ್ತಿದೇವತಾ ಆರಾಧನೆಯನ್ನು ನಡೆಸಿದ್ದು ವಿಶೇಷವಾಗಿತ್ತು. ಮುತ್ಯಾಲಮ್ಮ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ತಂಡಗಳು, ಮಹಿಳಾ ವೀರಗಾಸೆ ಗಮನ ಸೆಳೆದವು.
ಹಗಲು ಜಾತ್ರೆ: ಶ್ರೀಮುತ್ಯಾಲಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಬುಧವಾರ ಹಗಲು ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಏಳೂರು ಗ್ರಾಮಸ್ಥರಿಂದ ರಥ ಮತ್ತು ಆರತಿಗಳು ದೇವಾಲಯಕ್ಕೆ ಆಗಮಿಸಲಿವೆ. ಶ್ರೀಮಾತೆಗೆ ವಿಶೇಷ ಮುತ್ತಿನ ಅಲಂಕಾರ ಮತ್ತು ವಿಶೇಷಾಲಂಕಾರಗಳನ್ನು ಏರ್ಪಡಿಸಲಾಗಿದೆ.
ಈ ಹಿಂದೆ ಸೇಂದಿ ಚಿಕ್ಕಹನುಮಂತಪ್ಪ ಕುಟುಂಬದವರು ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ ಇತಿಹಾಸವಿದೆ. ಇದೀಗ ದೇವಾಲಯವನ್ನು ಮತ್ತೆ ಜೀರ್ಣೋದ್ಧಾರಗೊಳಿಸಲಾಗುತ್ತಿದ್ದು, ಮುತ್ಯಾಲಮ್ಮದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ದೇವಾಲಯ ಪ್ರಾಂಗಣ, ಪ್ರಾಕಾರ ಮತ್ತು ರಾಜಗೋಪುರ ಕಾಮಗಾರಿ ನಡೆಯಲಿವೆ. ಮುಂದಿನ ವರ್ಷದ ಜಾತ್ರೆ ವೇಳೆಗೆ ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂಬುದು ಟ್ರಸ್ಟ್‌ನ ಆಶಾವಾದ.