'ರಾಜೀವ್ ದೂರದರ್ಶಿತ್ವ ನಾಯಕ'
ಕ.ಪ್ರ.ವಾರ್ತೆ ಬೆಂಗಳೂರು ಮೇ 21
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ದೇಶವನ್ನು 21ನೇ ಶತಮಾನದೆಡೆಗೆ ಮುನ್ನೆಡೆಸುವ ದೂರದರ್ಶಿತ್ವ ಹೊಂದಿದ್ದ ಮಹಾನ್ ನಾಯಕ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಬಣ್ಣಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿಯವರ 22ನೇ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಂಗಳವಾರ ಈ ವಿಷಯ ತಿಳಿಸಿದರು.
ರಾಜೀವ್ ಗಾಂಧಿ ಅವರು ಅನುಷ್ಠಾನಕ್ಕೆ ತಂದ ಪಂಚಾಯತ್ ರಾಜ್ ತಿದ್ದುಪಡಿ ಕಾಯಿದೆಯಿಂದ ಸಮಾಜದ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕುವಂತಾಯಿತು. ರಾಜೀವ್ ಗಾಂಧಿ ಅವರು ರಾಜ್ಯಕ್ಕೆ ಬಂದಿದ್ದಾಗ ಅವರೊಂದಿಗೆ ಜೀಪ್‌ನಲ್ಲಿ ಓಡಾಡಿಕೊಂಡು ಪಕ್ಷ ಸಂಘಟಿಸುವ ಭಾಗ್ಯ ದೊರೆತಿತ್ತು ಎಂದು ಹೇಳಿದರು.
ಮಾಜಿ ಸಚಿವ ಎಂ.ವಿ. ರಾಜಶೇಖರನ್ ಮಾತನಾಡಿ ಮಾಹಿತಿ- ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ವಿಶ್ವದಲ್ಲೇ ಇಂದು ಮೊದಲ ಸ್ಥಾನದಲ್ಲಿದೆ. ಇದಕ್ಕೆ ರಾಜೀವ್ ಗಾಂಧಿಯವರ ದೂರದರ್ಶಿತ್ವವೇ ಕಾರಣ ಎಂದು ಅಭಿಪ್ರಾಯಪಟ್ಟರು.
18 ವರ್ಷದವರಿಗೆ ಮತದಾನದ ಹಕ್ಕು ನೀಡುವ ಮೂಲಕ ಯುವಕ- ಯುವತಿಯರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗುವುದಕ್ಕೆ ಅವರು ಅವಕಾಶ ಕಲ್ಪಿಸಿದರು. ಅದೇ ರೀತಿ ಮಹಿಳೆಯರಿಗೂ ರಾಜಕೀಯದಲ್ಲಿ ಅವಕಾಶ ಕಲ್ಪಿಸಿದರು. ಅವರ ಕನಸನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನನಸಾಗಿಸಲಿ ಎಂದು ಹೇಳಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಗ್ರಾಮಗಳು ಪ್ರಗತಿಯಾದಾಗ ಮಾತ್ರ ರಾಷ್ಟ್ರ ಉದ್ಧಾರವಾಗುತ್ತದೆ ಎಂಬ ನಂಬಿಕೆಯಲ್ಲಿ ರಾಜೀವ್ ಗಾಂಧಿ ನಂಬಿಕೆ ಇಟ್ಟಿದ್ದರು. ಮಹಿಳಾ ಮೀಸಲು ನೀತಿಯೂ ಅವರ ಕನಸಾಗಿತ್ತು. ಆದರೆ ರಾಜ್ಯ ಸಚಿವ ಸಂಪುಟ ರಚನೆ ವೇಳೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನ
ರಾಮನಗರ: ರಾಮನಗರ ತಾಲೂಕಿನ ಹುಣಸನಹಳ್ಳಿ (ಎಸ್‌ಸಿ ಮಾಜಿ ಸೈನಿಕರು) ಹಾಗೂ ಮಾಯಗಾನಹಳ್ಳಿ(ಸಾಮಾನ್ಯ ಅಭ್ಯರ್ಥಿ) ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಮಾಸಿಕ ಗೌರವ ಸಂಭಾವನೆ ರು.2500 ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಎಸ್‌ಎಸ್‌ಎಲ್‌ಸಿ ಪಾಸಾಗಿರುವವರಿಂದ ಮೀಸಲಾತಿಗೆ ಅನುಗುಣವಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಕಂದಾಯ ಭವನ, 2ನೇ ಮಹಡಿ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.20ರ ಸಂಜೆ 4ರೊಳಗೆ ಸದರಿ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ದೂ. 080-27275084 ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.