ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

25ರಂದು ಕಬ್ಬು ಬೆಳೆಗಾರರ ಸಮಾವೇಶ

Srinivasa Murthy VN
Updated On : 23 May 2013, 12:28 pm

ಬೆಂಗಳೂರು: ಭಾರತೀಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಮೇ 25ರಂದು ನಗರದಲ್ಲಿ ಇದೇ ಪ್ರಥಮ ಬಾರಿಗೆ ಕಬ್ಬು ಬೆಳೆಗಾರರ ರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಸಮಾವೇಶ ಉದ್ಘಾಟಿಸಲಿದ್ದು, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ತಾರೀಖ್ ಅನ್ವರ್ ಅಧ್ಯಕ್ಷತೆ ವಹಿಸಲಿರುವರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಸಕ್ಕರೆ ಖಾತೆ ಸಚಿವ ಪ್ರಕಾಶ್ ಬಿ. ಹುಕ್ಕೇರಿ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಭಾರತೀಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸತ್ಯನಾಮ್ ಸಿಂಗ್, ಐಎಸ್‌ಎಂಎ ಅಧ್ಯಕ್ಷ ಶ್ರೀನಿವಾಸನ್ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ. ಜತೆಗೆ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಹರಿಯಾಣ ಸೇರಿದಂತೆ ಕಬ್ಬು ಬೆಳೆಯುವ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿರುವರು.
ಅಲ್ಲದೆ, ಕೇಂದ್ರ ಸರ್ಕಾರ ಸಕ್ಕರೆ ವಲಯ ಮುಕ್ತನೀತಿ ಹಾಗೂ ಲೆವಿ ರದ್ದು ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ ಅದರ ಸಾಧಕ- ಬಾಧಕಗಳ ಬಗ್ಗೆ ಮೇ 24ರಂದು ನಗರದ ಮೌರ್ಯ ಹೊಟೇಲ್‌ನಲ್ಲಿ ಚರ್ಚೆ ಏರ್ಪಡಿಸಲಾಗಿದೆ. ಪ್ರಧಾನಿ ಅವರ ಆರ್ಥಿಕ ವ್ಯವಹಾರಗಳ ಸಲಹೆಗಾರ ಡಾ.ಪಿ. ರಂಗರಾಜನ್ ಅವರು ಇದರಲ್ಲಿ ಮುಖ್ಯ ಭಾಷಣ ಮಾಡಲಿರುವರು ಎಂದು ಶಾಂತಕುಮಾರ್ ತಿಳಿಸಿದ್ದಾರೆ.
ವಿಧಾನಪರಿಷತ್ ಅನಗತ್ಯ: ದೇಶದ 4 ರಾಜ್ಯಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ವಿಧಾನಪರಿಷತ್ ಕರ್ನಾಟಕದಲ್ಲೂ ಇದೆ. ಆದರೆ ಯಾವುದೇ ಪ್ರಯೋಜನವಿರದ ಅದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 20 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಆದ್ದರಿಂದ ವಿಧಾನಪರಿಷತ್ ರದ್ದುಗೊಳಿಸುವುದೇ ಸೂಕ್ತ ಎಂದು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಕಾಪಾಡಲು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು: ಸೆಲ್ವಿರಾಜ್
ಕ.ಪ್ರ. ವಾರ್ತೆ ಕೋಲಾರ ಮೇ 22
ವಿದ್ಯಾರ್ಥಿ ಜೀವನವೆಂಬುದು ಸುಂದರವಾದ ಹಾಗೂ ತಮಗೆ ಇಷ್ಟ ಬಂದಂತೆ ಇರುವಂತಹ ದಿನಗಳು. ಈ ದಿನಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡು ವಿರಾಮ ವೇಳೆಯಲ್ಲಿ ಬಿಸಾಡುವ ವಸ್ತುಗಳಿಂದ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ತಯಾರಿಸಿ ಸಮಾಜಕ್ಕೆ ಹಾಗೂ ಪರಿಸರಕ್ಕೆ ಮಿತ್ರರಂತೆ ನಡೆದುಕೊಳ್ಳಬೇಕೆಂದು ಚೈಲ್ಡ್ ಫಂಡ್ ಅಂತರ ರಾಷ್ಟ್ರೀಯ ಕಚೇರಿ ಅಧಿಕಾರಿ ತಿಮೋ ಸೆಲ್ವಿರಾಜ್ ಅಭಿಪ್ರಾಯಪಟ್ಟರು. ಅವರು ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿ ಗ್ರಾಮ ವಿಕಾಸ ಮತ್ತು ಚೈಲ್ಡ್‌ಫಂಡ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಲ್ಲಾ ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಕಲಿತ ವಿಷಯಗಳನ್ನು ಇತರೆ ಸ್ನೇಹಿತರಲ್ಲಿ ಹಂಚಿಕೊಂಡು ಸಮಾಜದಲ್ಲಿ ಎಲ್ಲರೂ ಉತ್ತಮ ನಾಗರೀಕರಾಗಲು ಪ್ರಯತ್ನಿಸಬೇಕು ಎಂದರು.

ಕಂಪ್ಯೂಟರ್ ಆಪರೇಟರ್‌ಗಳ ವೇತನ ಬಿಡುಗಡೆ
ಬೆಂಗಳೂರು:  ಬಿಬಿಎಂಪಿ ಕಂಪ್ಯೂಟರ್ ಆಪರೇಟರ್‌ಗಳು ವೇತನಕ್ಕಾಗಿ ಪ್ರತಿಭಟಿಸುತ್ತಿದ್ದ ಹಿನ್ನೆಲೆಯಲ್ಲಿ ಆಯುಕ್ತ ಸಿದ್ದಯ್ಯ ಬುಧವಾರ ರು. 2.9ಕೋಟಿ ಬಿಡುಗಡೆಗೊಳಿಸಿದರು.
ಕಂಪ್ಯೂಟರ್ ಆಪರೇಟರ್‌ಗಳಿಗೆ ಬಿಬಿಎಂಪಿ ಕಿಯೋನಿಕ್ಸ್ ಸಂಸ್ಥೆ ಮೂಲಕ ವೇತನ ನೀಡುತ್ತಿದೆ. ಆದರೆ, ಕಿಯೋನಿಕ್ಸ್ ಸಕಾಲಕ್ಕೆ ಬಿಲ್ ಸಲ್ಲಿಸದೆ ವೇತನ ಬಿಡುಗಡೆ ವಿಳಂಬವಾಗಿತ್ತು. ಇನ್ನು ಮುಂದೆ ಹೀಗಾದಂತೆ  ಸಕಾಲಕ್ಕೆ ಬಿಲ್ ಸಲ್ಲಿಸಿ ವೇತನ ಪಡೆಯಬೇಕೆಂದು ಸಿದ್ದಯ್ಯ ಹೇಳಿದರು. ವೇತನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಂಪ್ಯೂಟರ್ ಆಪರೇಟರ್‌ಗಳು ಗುರುವಾರದಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದು, ಸೇವೆಗಳು ಎಂದಿನಂತಿರುತ್ತವೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement