ಕ್ರೈಸ್ತ ಮಿಷನರಿಗಳಿಂದ ಮತಾಂತರ: ರಾಘವ
ಕ.ಪ್ರ. ವಾರ್ತೆ ಬಳ್ಳಾರಿ ಮೇ 22
ಕ್ರೈಸ್ತ ಮಿಷನರಿಗಳಿಂದ ಆಂಧ್ರಪ್ರದೇಶದಲ್ಲಿ ಭಾರಿ ಮತಾಂತರ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ 23 ಜಿಲ್ಲೆಗಳ ಪೈಕಿ 9ರಲ್ಲಿ ಮತಾಂತರ ಜೋರಾಗಿ ನಡೆದಿದೆ. ಕೆಳ ಮತ್ತು ಮೇಲ್ವರ್ಗದ ಸುಶಿಕ್ಷಿತ ಜನರನ್ನು ಕೇಂದ್ರಿಕರಿಸಲಾಗಿದೆ. ಇದನ್ನು ತಡೆಗಟ್ಟಲು ವಿಶ್ವಹಿಂದೂ ಪರಿಷತ್ ಬಲಿಷ್ಠ ಯೋಜನೆ ರೂಪಿಸಿದೆ ಎಂದರು.
ವಿದೇಶಗಳಿಂದ ದೇಶದ ಕ್ರಿಶ್ಚಿಯನ್ ಮಿಷನರಿಗಳಿಗೆ ವಾರ್ಷಿಕ 40 ಸಾವಿರ ಕೋಟಿ ದೇಣಿಗೆ ಹರಿದುಬರುತ್ತಿದೆ. ಈ ಪೈಕಿ ಶೇ.75ರಷ್ಟನ್ನು ಮತಾಂತರ, ಮಿಷನರಿಗಳ ಸ್ಥಾಪನೆಗೆ ಬಳಸಲಾಗುತ್ತಿದೆ. ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಕರೆದುಕೊಳ್ಳದ ಜನರನ್ನು ಇವರು ಚರ್ಚ್ಗಳಲ್ಲಿ ಮೊದಲ ಸಾಲಿನಲ್ಲಿ ಕೂರಿಸುತ್ತಾರೆ. ಪರಿಶಿಷ್ಟ ಜನಾಂಗದಲ್ಲಿನ ವಿದ್ಯಾವಂತರನ್ನು ಹುಡುಕಿ ಹಣದ ಆಸೆ ತೋರಿಸುತ್ತಾರೆ. ಅಥವಾ ಅವರನ್ನು ಫಾದರ್ ಆಗಿ ನೇಮಿಸಿ, ಜನಾಂಗವನ್ನು ಮತಾಂತರ ಮಾಡುತ್ತಾರೆ. ಉದ್ಯೋಗ ಕಲ್ಪಿಸುವ ನೆಪದಲ್ಲಿ ಆಟೋ ನೀಡಿ, 1000 ವಸೂಲಿ ಮಾಡುತ್ತಾರೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಮನಹರಿಸುವ ಅಗತ್ಯವಿದೆ ಎಂದರು.
ಬುದ್ಧಿಮಾಂದ್ಯರ ಶಾಲೆಗೆ ಅರ್ಜಿ
ಬೆಂಗಳೂರು: ಯಲಹಂಕ ಉಪನಗರದಲ್ಲಿರುವ ವಿದ್ಯಾರಣ್ಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯು ಉಚಿತ ವಸತಿ-ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನಿಸಿದೆ. 6 ರಿಂದ 16 ವರ್ಷದೊಳಗಿನ ವಯಸ್ಸಿನ ಬುದ್ಧಿ ವಿಕಲಚೇತನ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದ್ದು, ಸೇರ್ಪಡೆಗೊಂಡ ಮಕ್ಕಳಿಗೆ ಎಲ್ಲ ಸೇವೆ ಉಚಿತವಾಗಿ ಲಭ್ಯ. ಹೆಚ್ಚಿನ ಮಾಹಿತಿಗೆ 22862622, 28470731 ಸಂಪರ್ಕಿಸಬಹುದು.
ಪ್ರತಿಭಾವಂತರಿಂದ ಅರ್ಜಿ ಆಹ್ವಾನ
ಬೆಂಗಳೂರು: ಶ್ರೀರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರ 14 ವರ್ಷ ಮೇಲ್ಪಟ್ಟ ಅತಿ ಬಡವ ಮತ್ತು ಅನಾಥ ಪ್ರತಿಭಾವಂತ ಬಾಲಕರಿಗೆ ಉಚಿತ ಊಟ- ವಸತಿ ಸೌಕರ್ಯ ಜತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಟ್ಯೂಷನ್ ಕೂಡ ನೀಡಲಿದೆ. ಗ್ರಾಮೀಣ ಪ್ರದೇಶದವರಿಗೆ ಹೆಚ್ಚಿನ ಪ್ರಾಶಸ್ತ್ಯ. ಕೆ.ಆರ್.ಪುರ ಗೋಕುಲ ಬಡಾವಣೆಯ 2ನೇ ಎ ಅಡ್ಡರಸ್ತೆಯಲ್ಲಿರುವ ಕಚೇರಿ ಅಥವಾ ದೂರವಾಣಿ ಸಂಖ್ಯೆ 25618300, 9449435675 ಸಂಪರ್ಕಿಸಬಹುದು.
ಅನಾಥಾಶ್ರಮದಿಂದ ಅರ್ಜಿ ಕೋರಿಕೆ
ಬೆಂಗಳೂರು: ಸ್ಪಂದನ ಉಚಿತ ಅನಾಥಾಶ್ರಮ ಮತ್ತು ಚಾರಿಟೆಬಲ್ ಟ್ರಸ್ಟ್ ಅನಾಥ ಮಕ್ಕಳು, ವಿಧವೆ, ವೃದ್ಧರಿಗೆ ಆಶ್ರಯ ಕಲ್ಪಿಸುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇನ್ನೂರು ಹಾಸಿಗೆಗಳ ಸಾಮರ್ಥ್ಯವಿರುವ ಈ ಅನಾಥಾಶ್ರಮದಲ್ಲಿ ಎಲ್ಲ ವ್ಯವಸ್ಥೆಯಿದ್ದು, ಪ್ರವೇಶ ಪಡೆದವರಿಗೆ ಉಚಿತ ಊಟ- ವಸತಿ ಜತೆಗೆ ಶಿಕ್ಷಣ ಕೂಡ ಉಚಿತವಾಗಿ ಲಭ್ಯ. ಆಯ್ಕೆಯಾದವರಲ್ಲಿ ಅಂಧರಿದ್ದರೆ ಅಂಥವರಿಗೆ ನೇತ್ರದಾನಿಗಳನ್ನು ಸಂಪರ್ಕಿಸಿ ದೃಷ್ಟಿ ಕಲ್ಪಿಸುವ ವ್ಯವಸ್ಥೆಯೂ ಇದೆ. ತಮ್ಮ ಇತ್ತೀಚಿನ 2 ಭಾವಚಿತ್ರ ಮತ್ತು ಸ್ವವಿವರ ಸಮೇತ ಕಚೇರಿಯನ್ನು ಸಂಪರ್ಕಿಸಬಹುದು. ವಿಳಾಸ: ಸ್ಪಂದನ ಉಚಿತ ಅನಾಥಾಶ್ರಮ ಮತ್ತು ಚಾರಿಟೆಬಲ್ ಟ್ರಸ್ಟ್, ನಂ. 43, ಸಾಯಿ ಚೇಂಬರ್ಸ್, 9ನೇ ಅಡ್ಡರಸ್ತೆ, 50 ಅಡಿ ರಸ್ತೆ, ಹನುಮಂತನಗರ. ದೂ.ಸಂಖ್ಯೆ-9482898888, 7795248815.
ಮಹಿಳೆಯರಿಗೆ ಡಿಪ್ಲೊಮಾ ತರಗತಿ
ಬೆಂಗಳೂರು: ಜಯನಗರದಲ್ಲಿರುವ ಎನ್ಎಂಕೆಆರ್ವಿ ಮಹಿಳಾ ವಿದ್ಯಾಲಯ, ಕ್ರಿಯೇಟರ್ಸ್ ಆ್ಯಂಡ್ ಡಿಸೈನರ್ಸ್ ಒಳಾಂಗಣ ವಿನ್ಯಾಸ ಸಂಸ್ಥೆಯ ಸಹಯೋಗದಲ್ಲಿ ಗೃಹಿಣಿಯರು ಮತ್ತು ವಿದ್ಯಾರ್ಥಿನಿಯರಿಗಾಗಿ 1 ವರ್ಷದ ಒಳಾಂಗಣ ವಿನ್ಯಾಸ ಡಿಪ್ಲೊಮಾ ತರಗತಿ ನಡೆಸಲಿದೆ. ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಈ ತರಗತಿಯು ಬೆಳಗ್ಗೆ 11 ರಿಂದ 1 ಹಾಗೂ ಮಧ್ಯಾಹ್ನ 3 ರಿಂದ 5ರ ಅವಧಿಯಲ್ಲಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂ. 4. ಹೆಚ್ಚಿನ ವಿವರಗಳಿಗೆ 22248254, 9035335050.
ಕಾರ್ಮಿಕರಿಗೆ ಪ್ರಮಾಣ ಪತ್ರ ಕಡ್ಡಾಯ
ಬೆಂಗಳೂರು: ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಿಬ್ಬಂದಿಗೆ ಕೇಂದ್ರ ಸರ್ಕಾರ ಸುಧಾರಿತ ಉದ್ಯೋಗಮುಖಿ ಕೌಶಲ ಪ್ರಮಾಣಪತ್ರ ಕಡ್ಡಾಯ ಮಾಡಲು ನಿರ್ಧರಿಸಿದೆ.
ಈ ಪ್ರಮಾಣಪತ್ರವನ್ನು ನೀಡುವ ಜವಾಬ್ದಾರಿಯನ್ನು ಯೋಜನಾ ಆಯೋಗವು ಕಟ್ಟಡ ನಿರ್ಮಾಣ ಅಭಿವೃದ್ಧಿ ಮಂಡಳಿಗೆ ನೀಡಿದೆ. ಕಾರ್ಮಿಕರು ಹಾಗೂ ಸಿಬ್ಬಂದಿಗೆ ತರಬೇತಿ ಹಾಗೂ ಪ್ರಮಾಣಪತ್ರ ನೀಡುವುದು ಮಂಡಳಿಯ ಕಾರ್ಯವಾಗಿರುತ್ತದೆ.
ಸರ್ಕಾರಿ ಹಾಗೂ ಬ್ಯಾಂಕ್ ಉತ್ತೇಜಿತ ಕಾಮಗಾರಿಗಳಿಗೆ ಪ್ರಮಾಣಪತ್ರ ಹೊಂದಿರುವ ಸಿಬ್ಬಂದಿಯನ್ನು ಕಡ್ಡಾಯ ಮಾಡಲಾಗಿದೆ.
ನಿರ್ಮಾಣ ಸಂಸ್ಥೆಗಳ ಗುಣಮಟ್ಟ ವೃದ್ಧಿಗೆ ಇದು ಅನಿವಾರ್ಯ ಕೂಡ. ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರಮಾಣಪತ್ರ ಒದಗಿಸುವುದು ಆಯಾ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಕಟ್ಟಡ ನಿರ್ಮಾಣ ಅಭಿವೃದ್ಧಿ ಮಂಡಳಿಗೆ ನಿರ್ಮಾಣ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವ ಪ್ರದೇಶ ಹಾಗೂ ಸಿಬ್ಬಂದಿ ಕುರಿತು ಮಾಹಿತಿ ನೀಡಿದರೆ ಸ್ಥಳ ಭೇಟಿ ಮಾಡಿ ಪ್ರಮಾಣಪತ್ರ ಒದಗಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ 9448046633 ಸಂಪರ್ಕಿಸಬಹುದು.
ಶಾಸಕರಿಂದ ಕೃತಜ್ಞತೆ
ದೇವನಹಳ್ಳಿ : ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಜೆಡಿಎಸ್ ಪಿಳ್ಳಮುನಿಶಾಮಪ್ಪಅವರು ಬುಧಾವರ ಇಲ್ಲಿನ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ತಾಲೂಕಿನ ಜೆಡಿಎಸ್ ಎಲ್ಲ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿ ತೆರೆದ ವಾಹನದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರಲ್ಲದೆ ಯಾವುದೇ ಸಂದರ್ಭದಲ್ಲಿ ತಮ್ಮನ್ನು ಪ್ರತಿ ಬುಧವಾರ ತಾಲೂಕು ಪಂಚಾಯಿತಿ ಕಚೇರಿಯಲ್ಲಿರುವ ಶಾಸಕರ ಕೊಠಡಿಯಲ್ಲಿ ಭೇಟಿ ಮಾಡಿ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ತಮ್ಮ ಸಮಸ್ಯೆ ಅಥವ ಸರ್ಕಾರದಿಂದ ಆಗಬಹುದಾದ ಕೆಲಸಗಳ ಬಗ್ಗೆ ಬಗೆಹರಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇಂದು ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಮೇ 23ರ(ನಾಳೆ) ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.
ಮಕ್ಕಳಿಗೆ ಪೆಂಟಾವಲೆಂಟ್ ಲಸಿಕೆ
ರಾಮನಗರ: ಮಕ್ಕಳಿಗೆ ಬರುವ 5 ಮಾರಕ ರೋಗಗಳ ತಡೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೂವರೆ ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪೆಂಟಾವಲೆಂಟ್ ಎಂಬ ಒಂದೇ ಲಸಿಕೆಯನ್ನು ನೀಡಲಾಗುತ್ತಿದೆ. ಮಾರಕ ರೋಗಗಳಾದ ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಪಟೆಟಿಸ್ಬಿ ಹಾಗೂ ಹೀಮೊಫಿಲಸ್ ಇನ್ ಫ್ಲೂಯೆಂಜಾ ಬಿ (ಹಿಬ್)ಎಂಬ ಬ್ಯಾಕ್ಟೀರಿಯಾದಿಂದ ಶಿಶುಗಳಿಗೆ ಬರುವ ನ್ಯೂಮೊನಿಯಾ ರೋಗಗಳಿಗೆ ಒಂದೇ ಲಸಿಕೆಯನ್ನು ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ಲಸಿಕೆಯು ಉತ್ತಮ ಗುಣಮಟ್ಟದಾಗಿದೆ. ತಯಾರಿಕೆ ಹಂತದಿಂದ ಮಗುವಿಗೆ ಲಸಿಕೆ ನೀಡುವವರೆಗೆ ಉತ್ತಮ ಶೀತಲ ಸರಪಳಿಯಿಂದ ಸಂರಕ್ಷಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಪೆಂಟಾವಲೆಂಟ್ ಲಸಿಕೆಯು ದುಬಾರಿ ವೆಚ್ಚದ ಜತೆಗೆ ಉತ್ತಮ ಶೀತಲ ಸರಪಳಿಯನ್ನು ಹೊಂದಿರುವುದಿಲ್ಲ. ಹಾಗೂ ಕಡಿಮೆ ಗುಣಮಟ್ಟದಿಂದ ಕೂಡಿದ್ದಾಗಿರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಉತ್ತಮ ಗುಣಮಟ್ಟದ ಲಸಿಕೆಯನ್ನೇ ಕೊಡಿಸುವಂತೆ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಆರ್.ರಘುನಾಥ್ ತಿಳಿಸಿದ್ದಾರೆ.
ದುಷ್ಕರ್ಮಿಗಳಿಂದ ಕಾರು ಭಸ್ಮ
ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಓರ್ವನ ಮೇಲೆ ಹಲ್ಲೆ ನಡೆಸಿ ಆತನ ಸ್ಕಾರ್ಪಿಯೋ ಕಾರನ್ನು ಸುಟ್ಟು ಹಾಕಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕಡಬಗೆರೆ ವಾಸಿ ರುದ್ರಕುಮಾರ್ ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನಿನ ವಿವಾದ ಬಗೆಹರಿಸಿಕೊಳ್ಳಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಕ್ಕೆ ಕಡಬಗೆರೆಯ ರಮೇಶ್ ಅಲಿಯಾಸ್ ಪಾಯಿಸನ್ ರಾಮ ಮತ್ತು ಇತರರು ಕುಪಿತಗೊಂಡು ಈತನ ಮೇಲೆ ಹಲ್ಲೆ ಮಾಡಿ, ಸ್ಕಾರ್ಪಿಯೋ ಕಾರನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಚಾರಣಾಧೀನ ಕೈದಿ ಪರಾರಿ
ಕೆಜಿಎಫ್: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಕೆಜಿಎಫ್ ಸಬ್ಜೈಲ್ನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ವೆಂಕಟೇಶಪ್ಪ(40) ಎಂಬುವನು ಕಳೆದ ತಿಂಗಳ ಹಿಂದೆ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ್ಯಾಯಾಧೀಶರು ವೆಂಕಟೇಶಪ್ಪಗೆ ಜೈಲು ಶಿಕ್ಷೆ ವಿಧಿಸಿದ್ದ ಹಿನ್ನೆಲೆಯಲ್ಲಿ ಕೆಜಿಎಫ್ನ ಚಾಂಪಿಯನ್ರೀಫ್ ವ್ಯಾಪ್ತಿಯಲ್ಲಿರುವ ಸಬ್ಜೈಲ್ನಲ್ಲಿದ್ದ ವೆಂಕಟೇಶಪ್ಪ ಹಾಗೂ ಮತ್ತೊಬ್ಬ ಕೈದಿ ಬೆಳಗ್ಗೆ 9.00ಕ್ಕೆ ಕೆಲಸ ಮಾಡುವ ನೆಪದಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಅದರಲ್ಲಿ ಪೊಲೀಸರು ಒಬ್ಬ ಕೈದಿಯನ್ನು ಹಿಡಿದಿದ್ದು ವೆಂಕಟೇಶಪ್ಪ ಎಂಬ ಕೈದಿ ಜೈಲ್ನಿಂದ ಪರಾರಿಯಾಗಿದ್ದಾನೆ. ಪರಾರಿಯಾದ ಕೈದಿ ವೆಂಕಟೇಶಪ್ಪನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದು ವಿಫಲವಾದ ಕಾರಣ ಕೆಜಿಎಫ್ ಸಭ್ಜೈಲರ್ ಕಾಶಿನಾಥ್ಮೌಲಿ ಈ ಕುರಿತು ಚಾಂಪಿಯನ್ರೀಫ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಧುಸೂದನ್ ಕುಶೆ ನಿಧನ
ಮಂಗಳೂರು: ಪಿವಿಎಸ್ ಬೀಡೀಸ್ ಸಂಸ್ಥೆ ಮಾಲೀಕ ಮಧುಸೂದನ್ ಡಿ.ಕುಶೆ (78) ಬುಧವಾರ ನಿಧನರಾದರು. ಅವರು ಪಿವಿಎಸ್ ಎಕ್ಸ್ಪೋರ್ಟ್ನ ನಿರ್ದೇಶಕರಾಗಿ, ಪಿವಿಎಸ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಕಾರ್ಯಕಾರಿ ನಿರ್ದೇಶಕರಾಗಿದ್ದರು. ದಿ. ಪುತ್ತು ವೈಕುಂಠ ಶೇಟ್ ಅವರು ಜಿಲ್ಲೆಯಲ್ಲಿ 100 ವರ್ಷದ ಹಿಂದೆ ಬೀಡಿ ಉದ್ದಿಮೆ ಆರಂಭಿಸಿದವರು. ಇದನ್ನು ದೇಶದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳೆಸಿದವರು ಮಧುಸೂದನ್ ಕುಶೆ. 17 ವರ್ಷ ಅಖಿಲ ಭಾರತ ಬೀಡಿ ಕಾರ್ಖಾನೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ಬೀಡಿ ಕೈಗಾರಿಕೆ ಒಕ್ಕೂಟ ಅಧ್ಯಕ್ಷ, ಇಂಡೋ ಅಮೆರಿಕನ್ ಛೇಂಬರ್ ಆಫ್ ಕಾಮರ್ಸ್, ಇಂಡೋ ಜಪಾನೀಸ್ ಅಸೋಸಿಯೇಷನ್, ಇಂಡೋ ಜರ್ಮನ್ ಅಸೋಸಿಯೇಷನ್ ಸದಸ್ಯರಾಗಿದ್ದರು. ಬೀಡಿ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯ ಮೊದಲ ಬಾರಿಗೆ ನೀಡಲು ಶುರು ಮಾಡಿದ್ದು ಇವರೇ. ಕೊಡುಗೈ ದಾನಿಯಾಗಿದ್ದ ಕುಶೆ ಅವರು ಸಾಮಾಜಿಕ ಸೇವೆ, ಶೈಕ್ಷಣಿಕ ಕಾರ್ಯ, ಸಾಹಿತ್ಯ, ಕ್ರೀಡೆಗೆ ಧನ ಸಹಾಯ ನೀಡುತ್ತಿದ್ದರು.
ಮೂಲ ಸೌಕರ್ಯಕ್ಕೆ ಆದ್ಯತೆ: ಶಾಸಕ
ಆನೇಕಲ್: ಬೆಂಗಳೂರು ದಕ್ಷಿಣ ವಿಧಾನ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಸ್ವಚ್ಛತೆ ಮತ್ತು ಅಡಿಗೆ ಅನಿಲ ಮೊದಲಾದವುಗಳ ಸಮಸ್ಯೆಯ ನಿವಾರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ನುಡಿದರು.
ತಾಲೂಕಿನ ಹೆನ್ನಾಗರದಲ್ಲಿರುವ ಯಲ್ಲಮ್ಮದೇವಿ ಹಾಗೂ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ ನೀಡಿ ಗೆಲವಿಗೆ ಕಾರಣರಾದ ಕಾರ್ಯಕರ್ತರು ಮತ್ತು ಮತಬಾಂಧವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ ಕ್ಷೇತ್ರದ ಜನತೆ ಎರಡನೇ ಬಾರಿಗೆ ಜನಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ದಕ್ಷಿಣ ರಾಜ್ಯದಲ್ಲಿಯೇ ದೊಡ್ಡ ವಿಧಾನ ಸಭಾ ಕ್ಷೇತ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಸಕಲ ರೀತಿಯಲ್ಲೂ ಪ್ರಯತ್ನಿಸಿ ಕ್ಷೇತ್ರದಲ್ಲಿ ಶಾಂತಿ ನೆಮ್ಮದಿ ವಾತಾವರಣ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಜನರ ಸಹಕಾರ ನೀಡಲು ಮನವಿ ಮಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬನ್ನೇರುಘಟ್ಟ ಜಯರಾಂ, ತಾಲ್ಲೂಕು ಪಂಚಾಯ್ಟಿ ಮಾಜಿ ಅಧ್ಯಕ್ಷ ಹರೀಶ್ ರೆಡ್ಡಿ, ಬಿಜೆಪಿ ಮುಖಂಡರಾದ ಪ್ರಶಾಂತ್, ಜಿಗಣಿ ನಾಗರಾಜು, ಜೆ.ಸಿ.ಕೃಷ್ಣಪ್ಪ, ಹಿನ್ನಕ್ಕಿ ಶಿವಣ್ಣ, ಲಕ್ಷ್ಮೀಕಾಂತ್, ಶಂಕರ್, ಮುನಿರಾಜು, ಗ್ರಾ.ಪಂ.ಸದಸ್ಯ ಗಂಗಣ್ಣ ಇದ್ದರು.
ಲಾರಿ ಚಾಲಕನ ಕೊಲೆ: ಮೂವರ ಬಂಧನ
ನೆಲಮಂಗಲ: ಲಾರಿ ಚಾಲಕನೋರ್ವನನ್ನು ಕೊಲೆಗೈದು ಆತನ ಲಾರಿಯಲ್ಲಿಯೇ ಆತನ ಮೃತ ದೇಹ ಸಾಗಿಸುತ್ತಿದ್ದ ಮೂರು ಜನ ಕೂಲಿಕಾರರನ್ನು ತಾಲೂಕಿನ ತ್ಯಾಮಗೊಂಡ್ಲು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬಂಧಿತ ಆರೋಪಿಗಳನ್ನು ವೆಂಕಟೇಶ, ಇಲಿಯಾಜ್ಪಾಷ, ಸುಬ್ರಮಣ್ಯ ಎಂದು ತಿಳಿಸಿದ್ದಾರೆ. ಕೊಲೆಯಾದ ಲಾರಿ ಚಾಲಕನನ್ನು ಗೋಪಾಲ್ (26) ಎಂದು ಗುರುತಿಸಲಾಗಿದೆ. ಈತ ಮೂಲತಃ ಕೊರಟಗೆರೆ ತಾಲೂಕಿನವನಾಗಿದ್ದು ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಈತ ಕಬ್ಬಿಣವನ್ನು ದೊಡ್ಡಬಳ್ಳಾಪುರದಲ್ಲಿ ಲಾರಿಯಲ್ಲಿ ತುಂಬಿಕೊಂಡು ತುಮಕೂರು ಕಡೆಗೆ ಬರುತ್ತಿದ್ದಾಗ ಬಂಧಿತ ಆರೋಪಿಗಳಾದ ವೆಂಕಟೇಶ್ ಇಲಿಯಾಜ್ಪಾಷ, ಸುಬ್ರಹ್ಮಣ್ಯ ಎಂಬುವರು ಆತನನ್ನು ಕೊಲೆ ಮಾಡಿ ಅದೇ ಲಾರಿಯಲ್ಲಿ ಮೃತ ದೇಹದೊಂದಿಗೆ ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಮಾರ್ಗಮಧ್ಯೆ ಮುದ್ದಲಿಂಗನ ಗೇಟ್ ಬಳಿ ಪೊಲೀಸರು ಅನುಮಾನಗೊಂಡು ಲಾರಿಯನ್ನು ತಡೆ ದರು. ನಿಲ್ಲಿಸದ್ದರಿಂದ ಲಾರಿಯನ್ನು ಬೆನ್ನಟ್ಟಿ ಕೊಲೆ ಆರೋಪಿಗಳನ್ನು ಬಂದಿಸಿದ್ದಾರೆ. ಈ ಕೊಲೆಗೆ ಲಾರಿ ಚಾಲಕ ಗೋಪಾಲ್ನ ಹೆಂಡತಿ ರಾಧಳ ಅನೈತಿಕ ಸಂಬಂಧ ಕಾರಣವಾಗಿದೆ. ಆರೋಪಿಗಳು ರಾಧಳೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದರಿಂದ ವಿಷಯ ತಿಳಿದು ರಾಧಳಿಗೆ ಎಚ್ಚರಿಸಿದ್ದರಿಂದ ಆಕೆ ಕೋಪಗೊಂಡು ಸುಪಾರಿ ನೀಡಿದ್ದರಿಂದ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ
ಆನೇಕಲ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಮಚ್ಚು ಲಾಂಗುಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ಸಮೀಪದ ಕರ್ಪೂರು ಗೇಟಿನಲ್ಲಿರುವ ಸುನಿಲ್ ಬಾರ್ ಬಳಿ ನಡೆದಿದೆ.
ಮಾದೇಶ್ ಮತ್ತು ಆತನ ಸಹೋದರ ಬಾರ್ ಬಳಿ ನಿಂತಿದ್ದಾಗ ಸಮೀಪದಲ್ಲೇ ಇದ್ದ ಮಂಜು ಎಂಬ ವ್ಯಕ್ತಿ ಮಂಜುವಿನ ಬಳಿ ಬಂದು ಸಿಗರೇಟ್ ಕೇಳಿದ್ದಾನೆ. ಸಿಗರೇಟು ನೀಡದ ಕಾರಣ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ.
ಮಂಜು ಮನೆಯಿಂದ ಲಾಂಗು ತಂದು ಮಾದೇಶನ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದಿದ್ದ ಮಾದೇಶನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೆ ಕೊನೆ ಉಸಿರೆಳೆದಿದ್ದಾನೆ.
ಈ ಘಟನೆ ಬಾರ್ ಬಳಿ ಇದ್ದ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಅಪರಾಧಿಯ ಸುಳಿವು ಸಿಕ್ಕಿದ್ದು ಸ್ಥಳಕ್ಕೆ ಡಿವೈಎಸ್ಪಿ ಜಿನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಳಿವು ಪಡೆದು ಮಂಜು ಎಂಬ ಅಪರಾಧಿಯನ್ನು ಬಂಧನಕ್ಕೆ ಆನೇಕಲ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅತಿ ಶೀಘ್ರದಲ್ಲೇ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ: ಮೂರು ಮನೆ ಭಸ್ಮ
ಮಾಗಡಿ: ಸ್ನಾನಕ್ಕೆ ನೀರು ಕಾಯಿಸಲು ಒಲೆಗೆ ಹಾಕಿದ್ದ ಬೆಂಕಿಯಿಂದ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಒಂದು ಹಸುವಿನ ಕರು ಸೇರಿದಂತೆ ಮೂರು ಮನೆಗಳು ಭಸ್ಮವಾಗಿರುವ ಘಟನೆ ತಾಲೂಕಿನ ಶ್ರೀಪತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀಪತಿಹಳ್ಳಿ ಗೋಪಾಲ್ ಅವರ ಪತ್ನಿ ಶಾರದಮ್ಮ ಅವರು ಸ್ನಾನ ಮಾಡಿಕೊಂಡು ನಂತರ ಮನೆಗೆ ಬೀಗ ಹಾಕಿಕೊಂಡು ತಮ್ಮ ಮಗಳ ಮನೆಯಾದ ಹೆಬ್ಬೂರಿಗೆ ಪ್ರಯಾಣ ಬೆಳೆಸಿದ್ದರು. ಒಲೆಯಲ್ಲಿ ಬೆಂಕಿ ಇದ್ದು, ನಂದಿಸದ ಕಾರಣ ಪಕ್ಕದಲ್ಲಿದ್ದ ಹುಲ್ಲಿಗೆ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ಹಸುವಿನ ಕರು ಸೇರಿದಂತೆ ಅಕ್ಕಪಕ್ಕದ ಮೂರು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿದ್ದ ಪಾತ್ರೆಪಗಡು, ಧವಸಧಾನ್ಯ ಸುಟ್ಟು ಕರಕಲಾಗಿದೆ. ಮನೆಯಿಂದ ಬೆಂಕಿ ಹೊರಸೂಸುತ್ತಿದ್ದಾಗ ಗ್ರಾಮಸ್ಥರು ದೂರವಾಣಿ ಮೂಲಕ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದರು. ಕೂಡಲೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.