ನೀರು ಪೂರೈಕೆ ಪಂಪ್ ಹೌಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ
ಕ.ಪ್ರ ವಾರ್ತೆಸೂಲಿಬೆಲೆ ಮೇ 22
ಇಲ್ಲಿನ ಸಿದ್ದೇನಹಳ್ಳಿ ಕೆರೆಯಿಂದ ಸೂಲಿಬೆಲೆ ಪಟ್ಟಣಕ್ಕೆ ಸರಬರಾಜಾಗುವ ಕುಡಿಯವ ನೀರು ಸಂಪರ್ಕದ ಪಂಪ್ ಹೌಸ್ ಒಳಗಿರುವ ವಿದ್ಯುತ್ ಉಪಕರಣಗಳಿಗೆ ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಹಾಕಿ ಬೆಂಕಿ ಸುಟ್ಟಿರುವ ಘಟನೆ ಬುಧವಾರ ನಡೆದಿದ್ದು, ಬೆಂಕಿಯಿಂದ ಪ್ಯಾನಲ್ ಬೋರ್ಡು ಹಾಗೂ ಇನ್ನಿತರೇ ಉಪಕರಣಗಳು ಬೆಂಕಿಗೆ ಅಹುತಿಯಾಗಿವೆ.
ಸೂಲಿಬೆಲೆ ಪಟ್ಟಣಕ್ಕೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಕಳೆದ ಕೆಲ ತಿಂಗಳಿಂದೆ ಸಿದ್ದೇನಹಳ್ಳಿ ಕೆರೆ ಅಂಗಳದಲ್ಲಿ ಪ್ರತ್ಯೇಕವಾಗಿ ಮೂರು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿತ್ತು.
ಕೊಳವೆ ಬಾವಿಯಿಂದ ಸಿಕ್ಕ ನೀರನ್ನು ಸುಮಾರು 1 ಕಿ.ಮಿ ದೂರದ ಸೂಲಿಬೆಲೆ ಪಟ್ಟಣಕ್ಕೆ ಪೈಪ್ ಲೈನ್ ಮೂಲಕ ಸಂಪರ್ಕ ಕಲ್ಪಿಸಿ ಪ್ರತಿ ನಿತ್ಯ ನೀರು ಪಂಪ್ ಮಾಡಿ ಓವರ್ ಹೆಡ್ ಟ್ಯಾಂಕಿಗೆ ತುಂಬಿಸಿ ಅಲ್ಲಿಂದ ಪ್ರತಿದಿನ ಒಂದೊಂದು ವಾರ್ಡಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು.
ಕೆರೆಯ ಕೊಳವೆ ಬಾವಿ ಪಕ್ಕದಲ್ಲಿಯೇ ಪಂಪ್‌ಹೌಸ್ ನಿರ್ಮಿಸಿ ಪ್ಯಾನಲ್ ಬೋರ್ಡು ಇನ್ನಿತರ ಉಪಕರಣಗಳನ್ನು ಇಡಲಾಗಿತ್ತು.
ಬೆಳಗ್ಗೆ ಗ್ರಾಪಂ ಸಿಬ್ಬಂದಿಗಳು ಹೋಗಿ ಪಂಪ್ ಹೌಸ್‌ನ ನೀರು ಸರಬರಾಜು ಸ್ವಿಚ್ ಆನ್ ಮಾಡಿಕೊಂಡು ಬಂದಿದ್ದಾರೆ.
ಮಧ್ಯಾಹ್ನ ಹೋಗಿ ನೋಡಲಾಗಿ ಯಾರೋ ದುಷ್ಕರ್ಮಿಗಳು ಪಂಪ್ ಹೌಸ್ ಬಾಗಿಲು ಕಿತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ.ಬೆಂಕಿಯಿಂದ ಸುಮಾರು 20 ಸಾವಿರಕ್ಕೂ ಅಧಿಕ ಬೆಲೆಯ ವಸ್ತುಗಳು ಸುಟ್ಟಿವೆ.
ವಿಷಯ ತಿಳಿದ ಗ್ರಾಪಂ ಅಧ್ಯಕ್ಷ ನಾರಾಯಣಪ್ಪ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಜರ್ ನಡೆಸಿ ತನಿಖೆ ಕೈಗೊಂಡಿದ್ದಾರೆ.