ಪಪಂ ನೌಕರ, ಸದಸ್ಯನ ಚಪ್ಪಲಿ ಹೊಡೆದಾಟ
ಕೊಳ್ಳೇಗಾಲ/ಹನೂರು: ಸಮಸ್ಯೆಗಳನ್ನು ನೀಗಿಸಬೇಕಾದ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ನೌಕರರೊಬ್ಬರು ಸಾರ್ವಜನಿಕವಾಗಿಯೇ ಒಬ್ಬರನ್ನೊಬ್ಬರು ನಿಂದಿಸಿಕೊಂಡು, ಚಪ್ಪಲಿಯಲ್ಲಿ ಹೊಡೆದುಕೊಂಡ ಘಟನೆ ಮಂಗಳವಾರ ಸಂಜೆ ಹನೂರಿನಲ್ಲಿ ನಡೆದಿದೆ.
1ನೇ ವಾರ್ಡ್ನ ಪಪಂ ಸದಸ್ಯ ಬಸವರಾಜು ಹಾಗೂ ಪೌರ ಕಾರ್ಮಿಕರ ಸೇವಾಸಂಘದ ಅಧ್ಯಕ್ಷ, ಪಪಂ ಹನೂರಿನ ಸ್ಥಳೀಯ ದಿನಗೂಲಿ ಸಮಾನ ವೇತನ ನೌಕರ ಪ್ರಕಾಶ್ ಚಪ್ಪಲಿಯಲ್ಲಿ ಹೊಡೆದುಕೊಂಡು, ಇಬ್ಬರೂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಚಾಮರಾಜನಗರ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಶಿವಾನಂದ್ ನೀರಿನ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಂಗಳವಾರ ಆಗಮಿಸಿದ್ದರು. ಆಗ ಬಸವರಾಜು ಅವರು 1ನೇ ವಾರ್ಡ್ ವ್ಯಾಪ್ತಿಯ ತೊಂಬೆಗಳಿಗೆ ಪ್ರಕಾಶ್ ಅಕ್ರಮ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿ ಎಂಜಿನಿಯರ್ ತೆರಳಿದ್ದರು.
ಎಂಜಿನಿಯರ್ ಹೋದ ಬಳಿಕ ಬಸವರಾಜು ಹಾಗೂ ಪ್ರಕಾಶ್ ನಡುವೆ ಮಾತಿಗೆ ಮಾತು ಬೆಳೆದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಪರಸ್ಪರ ಚಪ್ಪಲಿಯಲ್ಲೂ ಹೊಡೆದಾಡಿಕೊಂಡರು.
ಪರಸ್ಪರ ನಿಂದಿಸಿಕೊಂಡು ಬಸವರಾಜು ಹಾಗೂ ಪ್ರಕಾಶ್ ಇಬ್ಬರೂ ಹನೂರು ಠಾಣೆಗೆ ದೂರು ನೀಡಿದ್ದಾರೆ.
ನಮ್ಮೊಳಗಿನ ಭವನದೊಳಗೆ ರಾಮನಿರಲಿ: ರಾಘವೇಶ್ವರ ಶ್ರೀ
ಕ.ಪ್ರ. ವಾರ್ತೆ ವಿಟ್ಲ ಮೇ 22
ರಾಮ ಕೊಟ್ಟ ಭವನದೊಳಗೆ ನಾವಿರುವುದು. ಅದೇ ರೀತಿ ನಮ್ಮೊಳಗಿನ ಭವನದೊಳಗೆ ರಾಮನಿರಲಿ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಮಂಗಳವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ವಠಾರದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಸಭಾಭವನ 'ಜನಭವನ' ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಮಂಗಳೂರು ಹೋಬಳಿಯ ಸಕಲ ಶಿಷ್ಯರ ಹೃದಯ, ಸಮಯ, ಮನಸ್ಸು, ಹಣ ಎಲ್ಲವೂ ಸಮರ್ಪಣೆಗೊಂಡಿರುವುದರಿಂದ ಈ ಕಟ್ಟಡ ಜಡವಲ್ಲ, ಜೀವಂತ. ಈ ಜನಭವನದ ನೆಪದಲ್ಲಿ ಸಮಾಜದ ಸಂಘಟನೆಯಾಗಿದೆ. ಶಿಷ್ಯಕೋಟಿಯು ಅತ್ಯಂತ ಪ್ರೀತಿಯಿಂದ ಶ್ರೀಮಠಕ್ಕರ್ಪಿಸಿದ ಸಭಾಭವನವನ್ನು ಜನಭವನವೆಂದೇ ನಾಮಕರಣ ಮಾಡುತ್ತಿದ್ದು, ಇದು ಸಾವಿರಾರು ಜನರ ಭಾವನೆಯ ಕೇಂದ್ರವಾಗಿದೆ ಎಂದು ಸ್ವಾಮೀಜಿ ವ್ಯಾಖ್ಯಾನಿಸಿದರು.