ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಣ್ಣುಗಳ ರಾಜನ ವಾಸನೆಯೇ ಇಲ್ಲ!

Srinivasa Murthy VN
Updated On : 23 May 2013, 12:28 pm

- ವಿಶೇಷ ವರದಿ
ಬೆಂಗಳೂರು: ನಾಲ್ಕು ತಿಂಗಳ ಕಾಲ ಹಣ್ಣುಗಳ ರಾಜ ಮಾವಿನದ್ದೇ ಚಕ್ರಾಧಿಪತ್ಯ. ಪರಿಮಳದಿಂದಲೇ ಗ್ರಾಹಕರನ್ನು ಸೆಳೆಯುವ ಶಕ್ತಿ ಇದಕ್ಕಿದೆ. ಈ ಬಾರಿ ಮಾತ್ರ ಅರಸಿ ಹೋದರೂ ಮಾವಿನ ಪರಿಮಳ ಮೂಗಿಗೆ ಬಡಿಯದು! ಕಾರಣ ಈ ಬಾರಿ ಮಾವಿನ ಹಣ್ಣಿನ ಇಳುವರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ಜನರಿಂದ ಬೇಡಿಕೆ ಅಧಿಕವಾದ ಕಾರಣ ಬೆಲೆ ಕೂಡ ಏರಿದೆ.
ಕಳೆದ ಸಾಲಿನಲ್ಲಿ ಆರಂಭಿಕ ತಿಂಗಳಲ್ಲಿ ಮಾರುಕಟ್ಟೆಗೆ ಮಾವಿನ ಹಣ್ಣಿನ ಆಗಮನ ಕಡಿಮೆ ಪ್ರಮಾಣದಲ್ಲಿದ್ದು ನಂತರದ ತಿಂಗಳಲ್ಲಿ ಪ್ರಮಾಣದಲ್ಲಿ ಹೆಚ್ಚಳವಾಯಿತು. ಆದರೆ ಈ ಬಾರಿ ಆರಂಭಿಕವಾಗಿ ಸ್ವಲ್ಪ ಅಧಿಕವಾಗಿಯೇ ಮಾರುಕಟ್ಟೆಗೆ ದೊರಕಿದ ಮಾವಿನ ಹಣ್ಣು ಈಗ ಇಳಿಮುಖವಾಗುತ್ತಿದೆ.  ಕಳೆದ ಸಾಲಿನಲ್ಲಿ ಹಣ್ಣಿನ ಅಂಗಡಿಗಳಲ್ಲಿ, ರಸ್ತೆ ಬದಿಯ ತಳ್ಳುಗಾಡಿಗಳಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡುವವರು ಅಧಿಕವಾಗಿ ಕಂಡುಬರುತ್ತಿದ್ದರು. ಈ ಬಾರಿ ಇಳುವರಿಯೇ ಕಡಿಮೆಯಾಗಿರುವುದರಿಂದ ಈ ರೀತಿ ಮಾರಾಟವೂ ಕಡಿಮೆ. ಮಾವು 4 ತಿಂಗಳ ಕಾಲ ಹೇರಳವಾಗಿ ಇಳುವರಿ ಕೊಟ್ಟು ನಂತರ ಖಾಲಿಯಾಗುವ ಬೆಳೆ. ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ಮಾವು ಹೇರಳವಾಗಿ ದೊರಕುತ್ತದೆ. ಏಪ್ರಿಲ್, ಮೇ ತಿಂಗಳಲ್ಲಿ 9ರಿಂದ 10 ವಿಧದ ಮಾವಿನ ಹಣ್ಣಿನ ಬೆಳೆ ಅಧಿಕವಾಗಿರುತ್ತದೆ. ಬಾದಾಮಿ, ಅಲ್ಫೋನ್ಸಾ, ಮಲ್ಲಿಕಾ, ಸೇಂದು, ರಸಪೂರಿ, ಮಲಗೋವಾ, ಕಾಲಪಡು ಇವೆಲ್ಲಾ ಅಧಿಕವಾಗಿ ಈ ಸಮಯದಲ್ಲಿ ದೊರಕುವ ಹಣ್ಣುಗಳು. ಜೂನ್- ಜುಲೈ ತಿಂಗಳಲ್ಲಿ ಈ ಎಲ್ಲಾ ಹಣ್ಣುಗಳ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ. ದಶೇರಿ, ಆಮ್ರಪಾಲಿ, ಚೂಸಾ, ನವಾಬ್, ರತ್ನಗಿರಿ ಮುಂತಾದ ಉತ್ತರಪ್ರದೇಶದಲ್ಲಿ ಬೆಳೆಯುವ ಹಣ್ಣುಗಳು ಈ ತಿಂಗಳಲ್ಲಿ ಅಧಿಕವಾಗಿರುತ್ತದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನೀಲಂ ಕೂಡ ಅಧಿಕವಾಗಿ ದೊರಕುತ್ತವೆ. ನೀಲಂನಲ್ಲಿ ಪೆರಿಕ್ಯುಲಮ್ ಎಂಬ ವಿಶೇಷ ವಿಧದ ಹಣ್ಣು ಈ ಸಂದರ್ಭದಲ್ಲಿ ಅಧಿಕವಾಗಿರುತ್ತದೆ. ಮಾವಿನ ಹಣ್ಣಿನ ಇಳುವರಿ ಕಡಿಮೆ ಇರುವ ಕಾರಣ ಬೆಲೆ ಕಳೆದ ಬಾರಿಗಿಂತ ಈ ಬಾರಿ ಶೇ. 5ರಿಂದ 10ರಷ್ಟು ಹೆಚ್ಚಳವಾಗಿದೆ. ಆದರೆ ಗುಣಮಟ್ಟಕ್ಕೆ ಹೋಲಿಸಿದರೆ ಈ ಬಾರಿಯ ಹಣ್ಣುಗಳೇ ಉತ್ತಮವಾಗಿದೆ. ಕಳೆದ ವರ್ಷಕ್ಕಿಂತ ಶೇ.30ರಷ್ಟು ಇಳುವರಿ ಪ್ರಮಾಣ ಕಡಿಮೆಯಾಗಿದೆ. ಕಳೆದ ಸಾಲಿನ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇತ್ತು. ಈ ಸಾಲಿನ ಏಪ್ರಿಲ್‌ನಲ್ಲಿ ಸೇಂದೂರ 22 ಟನ್, ರಸಪೂರಿ 30 ಟನ್‌ನಷ್ಟು ಮಾರುಕಟ್ಟೆಗೆ ಬಂದಿದೆ.
ಮಳೆ ಬಂದರೆ ತೊಂದರೆ: ಮಳೆಗೂ ಮಾವಿನ ಹಣ್ಣಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಮಳೆ ಬಂತೆಂದರೆ ಮಾವಿನ ಹಣ್ಣನ್ನು ತುಂಬಾ ಸಮಯದವರೆಗೆ ಸಂಸ್ಕರಿಸಿಡುವುದು ಅಸಾಧ್ಯ. ಕೊಳೆತು ಹೋಗುತ್ತದೆ. ಜತೆಗೆ ಆಲಿಕಲ್ಲು ಮಳೆ ಬಂದರೆ ಮಾವಿನಕಾಯಿಗಳಿಗೆಲ್ಲ ಗಾಯವಾಗಿ ಹಾಳಾಗುತ್ತವೆ ಇಲ್ಲವೇ ಬಿದ್ದುಹೋಗುತ್ತವೆ. ಆದರೆ ಈ ಬಾರಿ ಮಳೆಯಿಂದ ಮಾವು ಬೆಳೆಗೆ ತೊಂದರೆಯಾಗಿಲ್ಲ. ಆದರೆ ಬಂದಿರುವ ಫಸಲೇ ಕಡಿಮೆ.

ಮಾವಿನ ಹಣ್ಣು ವರ್ಷ ಬಿಟ್ಟು ವರ್ಷ ದೊರಕುವ ಬೆಳೆ. ಹಾಗೆ ನೋಡಿದರೆ ಈ ಬಾರಿಯ ಬೆಳೆ ಅಧಿಕ ಪ್ರಮಾಣದಲ್ಲಿ ಇರಬೇಕಿತ್ತು. ಆದರೆ ಇಳುವರಿ ಕಡಿಮೆ ಆಗಿದೆ. ಸಹಜವಾಗಿ ಜನರಿಂದ ಅಧಿಕ ಬೇಡಿಕೆ ಇದ್ದು ಹಣ್ಣಿನ ಬೆಲೆ ಸ್ವಲ್ಪಮಟ್ಟಿಗೆ ಅಧಿಕವಾಗಿದೆ.
-ಗೋಪಾಲಗೌಡ,  ಮ್ಯಾನೇಜರ್. ಹಾಪ್‌ಕಾಮ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement