ಜೈನ ಸಮುದಾಯದ ಅಭಿವೃದ್ಧಿಗೆ ಯುವಜನ ಶ್ರಮಿಸಲಿ: ಭಟ್ಟಾರಕ ಶ್ರೀ
ಕ.ಪ್ರ. ವಾರ್ತೆ ಬೆಂಗಳೂರು ಮೇ 24
ಜೈನ ಸಮುದಾಯದ ಅಭಿವೃದ್ಧಿಗೆ ಸಮುದಾಯದ ಯುವಜನತೆ ಶ್ರಮಿಸಬೇಕು. ಸಮುದಾಯದ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಶ್ರೀಕ್ಷೇತ್ರ ಕಂಬದಹಳ್ಳಿಯ ಭಾನು ಭಟ್ಟಾರಕ ಸ್ವಾಮೀಜಿ ಕರೆ ನೀಡಿದ್ದಾರೆ.
ಆದಿನಾಥ್ ಎಂಟರ್‌ಪ್ರೈಸ್‌ನಿಂದ ಸುಕುಮಾರ್, ಸುನೈ ರಚಿತ ಕರ್ನಾಟಕ ಜೈನ ತೀರ್ಥ ಕ್ಷೇತ್ರಗಳಿಗೆ ಸಂಬಂಧಿಸಿದ 'ಕರ್ನಾಟಕ ಜೈನ ವೈಭವ' ಎಂಬ 5 ಡಿವಿಡಿಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಡಿವಿಡಿಗಳು ಜೈನಪರಂಪರೆಯನ್ನು ಬಿಂಬಿಸುತ್ತವೆ. ಕನ್ನಡ ಭಾಷೆಯಲ್ಲಿರುವ ಈ ಸಾಕ್ಷ್ಯಚಿತ್ರಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗೂ ಭಾಷಾಂತರಗೊಳ್ಳಬೇಕು ಎಂದರು.
ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರದ ಬೀಜ ಬಿತ್ತಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ನಂತರ ಫಲಾಫಲಗಳು ಉತ್ತಮವಾಗಿಯೇ ಇರುತ್ತವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲೆಂದು ಉತ್ತರಪ್ರದೇಶಕ್ಕೆ ಹೋಗಬೇಕಿತ್ತು. ಆಗ ಭಟ್ಟಾರಕ ಸ್ವಾಮೀಜಿ ಇಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದರು. ಜೈನ ಧರ್ಮಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಮನೆಮನೆಗೆ ಹಂಚಿದ್ದರು ಎಂದರು.
ಹಂಪ ನಾಗರಾಜಯ್ಯ ಮಾತನಾಡಿ, ಜೈನ ಧರ್ಮಕ್ಕೆ ಸುದೀರ್ಘ ಇತಿಹಾಸ ಮತ್ತು ಪರಂಪರೆ ಇದೆ. ಜಿನಾಲಯ ಮತ್ತು ಬಸದಿ ರಾಜ್ಯದ ಉದ್ದಗಲಕ್ಕೂ ಇದೆ. ಇದರಲ್ಲಿ ಕೆಲವು ಹಾಳಾಗಿವೆ. ಕೆಲವು ಸುಸ್ಥಿತಿಯಲ್ಲಿವೆ. ಕಂಬದಹಳ್ಳಿ ಕ್ಷೇತ್ರಕ್ಕೆ 1200 ವರ್ಷದ ಇತಿಹಾಸವಿದೆ. ಬಸದಿಯ ಶಿಲ್ಪ ವೈಭವ ಅನನ್ಯ. ಈ ಡಿವಿಡಿಗಳು ಬಸದಿಯ ಹಿನ್ನೆಲೆ, ಕಟ್ಟಿದ ಕಾಲ, ಇತಿಹಾಸ, ಪರಂಪರೆಯ ಬಗ್ಗೆ ಮಾಹಿತಿ ನೀಡುತ್ತಿವೆ ಎಂದರು. ಈ ಡಿವಿಡಿಗಳು ಪ್ರಾಚೀನ ಕಾಲವನ್ನು ವರ್ತಮಾನಕ್ಕೆ ದಾಟಿಸುವ ಮಹತ್ವದ ಪ್ರಕ್ರಿಯೆಯಾಗಿದೆ. ಇಂದಿನ ಜೈನ ಪರಂಪರೆಯನ್ನು ಜೀವಂತಗೊಳಿಸುವ ಪ್ರಯತ್ನ ಇದಾಗಿದೆ ಎಂದರು.
ಕಮಲಾ ಹಂಪನ ಮಾತನಾಡಿ, ರಾಜ್ಯದಲ್ಲಿನ ಅನೇಕ ಜೈನ ಕ್ಷೇತ್ರಗಳು ಅನಾಥವಾಗಿದೆ. ಸ್ಥಳೀಯ ಜೈನ ಸಮುದಾಯದವರು ಆ ಕ್ಷೇತ್ರ ಅಭಿವೃದ್ಧಿಗೊಳಿಸಬೇಕು ಎಂದರು.