ಕಬ್ಬು ಬೆಳೆಗಾರರ ರಕ್ಷಣೆಗೆ ಉತ್ತೇಜನ ಮಂಡಳಿ ಸ್ಥಾಪನೆ
ಕ.ಪ್ರ. ವಾರ್ತೆ ಬೆಂಗಳೂರು ಮೇ 25
ಕಬ್ಬು ಬೆಳೆಗಾರರ ರಕ್ಷಣೆಗಾಗಿ ಕಬ್ಬು ಉತ್ತೇಜನ ಮಂಡಳಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿ ವರ್ಷ ಕಬ್ಬು ಬೆಳೆ ಸಕ್ಕರೆ ಕಾರ್ಖಾನೆಗೆ ಬರುವಾಗ ಹಾಗೂ ಆ ಬಳಿಕ ಸಕ್ಕರೆ ಬೆಲೆ ನಿಗದಿಯಾಗುವಾಗ ಗೊಂದಲಗಳಾಗುತ್ತಿವೆ. ರೈತರಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಕ್ಕರೆ ಸಚಿವರ ನೇತೃತ್ವದಲ್ಲಿ ರಾಜ್ಯ ಕಬ್ಬು ಉತ್ತೇಜನ ಮಂಡಳಿ ಪ್ರಾರಂಭಿಸಲಾಗುವುದು ಎಂದು ಸೋಮವಾರ ಅವರು ನಗರದಲ್ಲಿ ನಡೆದ ಕಬ್ಬು ಬೆಳೆಗಾರರ ಸಮಾವೇಶ ಉದ್ಘಾಟಿಸಿ ತಿಳಿಸಿದರು.
ಸಕ್ಕರೆ ಸಚಿವರ ಅಧ್ಯಕ್ಷತೆ ಮಂಡಳಿಯಲ್ಲಿ ಕೃಷಿ ಸಚಿವರು, ರೈತ ಮುಖಂಡರು ಹಾಗೂ ಸಕ್ಕರೆ ಉದ್ಯಮಿಗಳಿರುತ್ತಾರೆ. ರೈತರು ಹಾಗೂ ಉದ್ಯಮಿಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ ಈ ಮಂಡಳಿ ಬೆಲೆ ನಿಗದಿ ಮಾಡುತ್ತದೆ. ಈ ಮೂಲಕ ಕಬ್ಬು ಬೆಳೆಗಾರರ ಸಮಸ್ಯೆಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಅಂತ್ಯಹಾಡಲಿದೆ ಎಂದು ಅವರು ಹೇಳಿದರು.
ಸಿ.ರಂಗರಾಜನ್ ವರದಿ ಅನುಷ್ಠಾನ: ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿ ಸಿ.ರಂಗರಾಜನ್ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಪ್ರಕಾರ ಸಕ್ಕರೆ ಬೆಲೆಯಲ್ಲಿ ಶೇ.75ರಷ್ಟನ್ನು ಹಣವನ್ನು ಬೆಳೆಗಾರರಿಗೆ ನೀಡಬೇಕಾಗುತ್ತದೆ. ವರದಿಯಲ್ಲಿನ ಈ ಶಿಫಾರಸಿಗೆ ಉದ್ದಿಮೆಗಳು ಒಪ್ಪಿವೆ. ರೈತ ಮುಖಂಡರು ಹಾಗೂ ಸಕ್ಕರೆ ಉದ್ಯಮಿಗಳ ಜತೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಸಕ್ಕರೆ ಉದ್ಯಮಕ್ಕೆ 550 ಲಕ್ಷ ಮೆಟ್ರಿಕ್ ಟನ್ ಕಬ್ಬಿನ ಬೇಡಿಕೆಯಿದೆ. ಆದರೆ ರಾಜ್ಯದಲ್ಲಿ 450 ಲಕ್ಷ ಮೆಟ್ರಿಕ್ ಟನ್ ಕಬ್ಬು ಬೆಳೆಯಲಾಗುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆ ನೀಗಿಸಿದರೆ ಈ ಅಭಾವವನ್ನು ತುಂಬಲು ಸಾಧ್ಯವಿದೆ. ಕಬ್ಬು ಬೆಲೆ ನಿಗದಿ ಹಾಗೂ ಬೆಳೆಗೆ ನೀರು ಒದಗಿಸಿವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯೋಗ ಖಾತರಿಯಿಂದ ಕೃಷಿ ಕಾರ್ಮಿಕರ ಕೊರತೆ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ದೊರೆತಿದೆ. ಆದರೆ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗಿದೆ. ಮತ್ತೊಂದೆಡೆ ಕೂಲಿ ಬೆಲೆಯೂ ಏರಿಕೆಯಾಗಿದೆ. ಆದರೆ ಇದನ್ನು ನೆಪವಾಗಿರಿಸಿಕೊಂಡು ರೈತರು ಸುಮ್ಮನಿರಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ರಾಜ್ಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರೈತರು ಸ್ವಾವಲಂಬಿಯಾಗಲೇಬೇಕು. ಆದರೆ ಸರ್ಕಾರದ ಮೇಲೆ ಅವಲಂಬಿತವಾಗಿರುವಂತೆ ಆಡಳಿತಶಾಹಿಗಳ ನೀತಿ ರೂಪವಾಗುತ್ತಿದೆ. ಬದಲಾಗಿ ರೈತರು ಬೆಳೆಯುವ ಬೆಲೆಗೆ ವೈಜ್ಞಾನಿಕ ಹಾಗೂ ಉತ್ತಮ ಬೆಲೆ ನೀಡುವ ವ್ಯವಸ್ಥೆ ಜಾರಿಗೆ ತಂದರೆ, ಯಾವುದೇ ರೈತ ಸರ್ಕಾರದ ಬಿಡಿಗಾಸಿಗೆ ಕೈಚಾಚುವ ಪರಿಸ್ಥಿತಿ ಎದುರಾಗುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನವಹಿಸಲಿದೆ ಎಂದರು.
ಬೆಲೆ ಏರಿಕೆಗೆ ಮಾನಸಿಕವಾಗಿ ತಯಾರಾಗಿ
ಸಾಮಾನ್ಯ ಗ್ರಾಹಕನಂತೆ ರೈತನ ಜೀವನಶೈಲಿಯೂ ಬದಲಾಗಿದೆ. ಕೃಷಿ ಚಟುವಟಿಕೆಗೆ ಬೇಕಾಗುವ ಸಾಮಗ್ರಿಗಳ ಬೆಲೆಯೂ ಏರಿದೆ. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ ಬೆಲೆ ಏರಿಕೆಯ ಬಗ್ಗೆ ಹಿನ್ನೆಲೆ ತಿಳಿಯದೇ ವಿರೋಧಿಸುವುದು ತರವಲ್ಲ. ರೈತರು ಈ ದೇಶದಲ್ಲಿ ಬದುಕಬೇಕು, ಗೌರವಯುತ ಜೀವನ ನಡೆಸಬೇಕೆಂಬ ಕಾಳಜಿಯನ್ನು ಪ್ರತಿಯೊಬ್ಬರೂ ಹೊಂದಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮತ್ತೆ ಸಂಪುಟ ವಿಸ್ತರಣೆಯಿಲ್ಲ!
ವಿಧಾನ ಪರಿಷತ್ನಲ್ಲಿ ಸಭಾನಾಯಕರ ಅಗತ್ಯವಿರುತ್ತದೆ. ಇದಕ್ಕಾಗಿ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕಿತ್ತು. ಇದೇ ಕಾರಣದಿಂದ ಎಸ್.ಆರ್.ಪಾಟೀಲ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡುವ ಇರಾದೆ ನನಗಿಲ್ಲ. ಇಂತಹ ಯಾವುದೇ ಪ್ರಮೇಯ ಸದ್ಯ ಬರುವುದೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.