ಚಿಕೂನ್ಗುನ್ಯ ಶಂಕೆ: ಶಾಸಕ ಪಿಳ್ಳಮುನಿಶಾಮಪ್ಪ ಭೇಟಿ, ಪರಿಶೀಲನೆ
ದೇವನಹಳ್ಳಿ:ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ತಾಲೂಕಿನ ಗಡಿ ಭಾಗದ ವೆಂಕಟಗಿರಿಕೋಟೆ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ನೂರಾರು ಮಂದಿ ಚಿಕೂನ್ಗುನ್ಯ ರೋಗದಿಂದ ಬಳಲುತ್ತಿದ್ದು, ಸರ್ಕಾರದ ಆರೋಗ್ಯ ಇಲಾಖೆಯಿಂದ ಸರಿಯಾದ ಚಿಕಿತ್ಸೆ ದೊರೆಯದೆ ವಿಧಿ ಇಲ್ಲದೆ ಖಾಸಗಿ ವೈದ್ಯರ ಬಳಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ವೈದ್ಯಾಧಿಕಾರಿ ಡಾ.ಚನ್ನಮಲ್ಲಯ್ಯ ಹಾಗೂ ವೈದ್ಯಕೀಯ ಸಿಬ್ಬಂದಿ ವೆಂಕಟಗಿರಿಕೋಟೆ ಗ್ರಾಮದ ಕಾಲೋನಿಗೆ ಭೇಟಿ ನೀಡಿ ಚಿಕೂನ್ಗುನ್ಯದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಪಡೆದು, ಅಗತ್ಯವಾದ ವೈದ್ಯಕೀಯ ಸಿಬ್ಬಂದಿ ಆಯೋಜಿಸಲಾಗಿದ್ದು ಸೂಕ್ತ ಚಿಕಿತ್ಸೆ ದೊರೆಯಲಿದೆ ಎಂದು ಡಿಎಚ್ಒ ತಿಳಿಸಿ ಈಗಾಗಲೇ 1.5 ಲಕ್ಷ ರೂಗಳ ಔಷಧಗಳು ದಾಸ್ತಾನಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಿಳ್ಳಮುನಿಶಾಮಪ್ಪ, ಚಿಕೂನ್ಗುನ್ಯ ಹರಡಲು ಮುಖ್ಯ ಕಾರಣ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿಯವರು ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದೇ ಆಗಿದ್ದು, ಈ ಭಾಗದ ಜನರು ಸಹ ಕಾಳಜಿ ವಹಿಸಬೇಕು ಎಂದರಲ್ಲದೆ ಈ ಭಾಗದಲ್ಲಿ ಎಷ್ಟು ಮಂದಿಗೆ ರೋಗ ಹಬ್ಬಿದೆ ಮತ್ತು ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಜೆಡಿಎಸ್ ಮುಖಂಡರಾದ ಶ್ರೀನಿವಾಸ್, ಮುನಿಶಾಮಯ್ಯ ಉಪಸ್ಥಿತರಿದ್ದರು.