'ಬುದ್ಧ, ಬಸವಣ್ಣರನ್ನು ಮರೆತರೆ ಉಳಿಗಾಲವಿಲ್ಲ'
ಕ.ಪ್ರ.ವಾರ್ತೆರಾಮನಗರ ಮೇ25
ಬುದ್ಧನ ಚಿಂತನೆಗಳು ಮತ್ತು ಬಸವಣ್ಣನ ಆಲೋಚನೆಗಳನ್ನು ಕ್ರೋಢೀಕರಿಸಿ ಮನುಸ್ಮೃತಿಗೆ ಪರ್ಯಾಯವಾಗಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಸಮರ್ಪಕವಾಗಿ ಜಾರಿಯಾಗದಿದ್ದರೆ ದೇಶದಲ್ಲಿ ಸಾಮಾಜಿಕ ಸಮಾನತೆ ನೆಲಸಲು ಸಾಧ್ಯವಿಲ್ಲ.
ಮಾತ್ರವಲ್ಲ, ಬುದ್ಧ, ಬಸವಣ್ಣನನ್ನು ಮರೆತ ಭಾರತೀಯರಿಗೆ ಉಳಿಗಾಲವಿಲ್ಲ ಎಂದರು.ಎಂದು ಗುಲ್ಬರ್ಗ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಜಾನಪದಲೋಕದ ಬಯಲು ರಂಗಮಂದಿರದಲ್ಲಿ ಪ್ರಬುದ್ಧ ಬಳಗದಿಂದ ಶನಿವಾರ ನಡೆದ 'ಬುದ್ಧ ಪ್ರಜ್ಞೆಯೆಡೆಗೆ ನಮ್ಮ ನಡಿಗೆ' ಎಂಬ ವಿಚಾರ ಸಂಕಿರಣ ಮತ್ತು ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನವನ್ನು ಸರ್ವ ಧರ್ಮಗಳ ಶ್ರೇಯೋಭಿವೃದ್ಧಿಗೆ ರಚಿಸಿರುವ ಸಾಮಾನ್ಯ ನಿಯಮಗಳು ಎಂದು ಅನುಷ್ಠಾನಗೊಳಿಸದಿದ್ದಲ್ಲಿ ದೇಶದ ಭವಿಷ್ಯ ದುರಂತ ಸನ್ನಿವೇಶ ಮುಟ್ಟಲಿದೆ ಎಂದು ಎಚ್ಚರಿಸಿದರು.
ಬುದ್ಧ ಹಾಗೂ ಬಸವಣ್ಣನ ತತ್ವ ಸಿದ್ಧಾಂತಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಜಾತ್ಯಾತೀತ ಸಮಾಜಕ್ಕೆ ಶ್ರಮ: ವಚನ ಸಾಹಿತ್ಯದ ಮೇಲೆ ಬುದ್ಧನ ತತ್ವ ಸಿದ್ಧಾಂತಗಳ ಪ್ರಭಾವವಿದೆ. ಬುದ್ಧನು ಆ ಶತಮಾನದಲ್ಲಿಯೆ ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಜಾತ್ಯಾತೀತ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದರು ಎಂದು ಜಾನಪದ ಲೋಕದ ಕ್ಯುರೇಟರ್ ಡಾ.ಕುರುವ ಬಸವರಾಜ್ ತಿಳಿಸಿದರು. ವೈಜ್ಞಾನಿಕ ತಳಹದಿಯ ಮೇಲೆ ಮೂಢನಂಬಿಕೆ ವಿರೋಧಿಸಿ ದೇವಸ್ಥಾನ ಕಟ್ಟದೆ ದೀನ-ದಲಿತರ ಬದುಕನ್ನು ಕಟ್ಟಿಕೊಡಿ. ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟುವುದರಿಂದ ಪ್ರಯೋಜನವಾಗದು. ಜಗತ್ತಿನಲ್ಲಿ ವಿಶ್ವ ಸಮಾಜವನ್ನು ನಿರ್ಮಿಸಿದ ಬಹು ಅಪರೂಪದ ವ್ಯಕ್ತಿ ಬುದ್ಧ ಆಗಿದ್ದಾರೆ ಎಂದು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಅಪ್ಪಗೆರೆ ವೆಂಕಟಯ್ಯ, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಪ್ರಕಾಶ್, ಪಿ.ಜೆ.ಗೋವಿಂದರಾಜು, ರಾ.ಶಿ.ದೇವರಾಜು, ಚಕ್ಕಲೂರು ಚೌಡಯ್ಯ, ಚಾಂದ್‌ಪಾಷಾ, ವಿ.ಆನಂದ್, ಕೆ.ಎಲ್.ಕಿರಣ್, ಕೆ.ಸುದೀಪ್ ಮತ್ತಿತರರು ಭಾಗವಹಿಸಿದ್ದರು.