ವರದಕ್ಷಿಣೆ ದಾಹಕ್ಕೆ ಗರ್ಭಿಣಿ ಬಲಿ
ಕುಣಿಗಲ್: ವರದಕ್ಷಿಣೆ ದಾಹಕ್ಕೆ ಗರ್ಭಿಣಿ ಬಲಿಯಾಗಿರುವ ಘಟನೆ, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಇಪ್ಪಾಡಿ ಗ್ರಾಮದ ಬಸವರಾಜು ಎಂಬುವರ ಮಗಳಾದ ನಾಗರತ್ನ(23) ಎಂದು ಗುರುತಿಸಲಾಗಿದ್ದು, ಈಕೆಯನ್ನು ಕಳೆದ ಎರಡು ವರ್ಷದ ಹಿಂದೆ ನಾಗನಹಳ್ಳಿ ಗ್ರಾಮದ ಪುಟ್ಟಯ್ಯ ಎಂಬುವರ ಮಗ ರಮೇಶ್‌ಗೆ ವಿವಾಹ ಮಾಡಿಕೊಟ್ಟಿದ್ದು, ನಾಗರತ್ನ ಐದು ತಿಂಗಳ ಗರ್ಭಿಣಿಯಾಗಿದ್ದಳು, ಇತ್ತೀಚೆಗೆ ಪತಿ, ಸೇರಿದಂತೆ ಅತ್ತೆ, ಮಾವ, ನಾದಿನಿ ಹಾಗೂ ನಾದಿನಿ ಗಂಡ, ನಾಗನಹಳ್ಳಿಯಲ್ಲಿ ಮನೆ ನಿರ್ಮಿಸುವ ಸಲುವಾಗಿ ವರದಕ್ಷಿಣೆ ತರುವಂತೆ ತೀವೃವಾಗಿ ಕಿರುಕುಳ ನೀಡುತ್ತಿದ್ದು, ಶನಿವಾರ ಬೆಳಗ್ಗೆ ಇದರಿಂದ ತೀವ್ರ ಘಾಸಿಗೊಂಡ ನಾಗರತ್ನ ನಾಗನಹಳ್ಳಿಯ ಹೊಲದ ಬಳಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತಮೃತಳ ತಂದೆ ಬಸವರಾಜು ಕುಣಿಗಲ್ ಠಾಣೆಗೆ ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಆಕೆ ಸತ್ತಿದ್ದಾಳೆಂದು ಮಾವ ಪುಟ್ಟಯ್ಯ, ಅತ್ತೆ ಜಯಮ್ಮ, ಗಂಡ ರಮೇಶ್ ಹಾಗೂ ನಾದಿನಿ, ನಾದಿನಿಯ ಗಂಡನ ಮೇಲೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಕುಣಿಗಲ್ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಭೂ ವಂಚನೆ: ವ್ಯಕ್ತಿ ಬಂಧನ
ನೆಲಮಂಗಲ: ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ ವಂಚಕನೊಬ್ಬನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ಶನಿವಾರ ನಡೆದಿದೆ.
ಬೆಂಗಳೂರು ಕೆ.ಆರ್.ಪುರಂ ತಾಲೂಕಿನ ವರ್ತೂರು ಹೋಬಳಿ ದೇವರದೀಚನಹಳ್ಳಿ ಈರಾಚಾರಿ.ಎಂ.(41) ಎಂದು ಗುರುತಿಸಲಾಗಿದೆ.
ಈತ ಮೂಲತಃ ಮಂಡ್ಯ ತಾಲೂಕು ಬಸರಾಳು ಗ್ರಾಮದವನಾಗಿದ್ದು, ತನ್ನ ಮೂಲ ಗ್ರಾಮದ ಗ್ರಾಮಸ್ಥರಿಗೆ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ, ಹುಣ್ಣಿಗೆರೆ ಗ್ರಾಮದಲ್ಲಿ ಜಮೀನು ಖರೀದಿಸಿದ್ದೇನೆ. ಅದರಲ್ಲಿ ನಿಮಗೆ ನಿವೇಶನ ನೀಡುವುದಾಗಿ ನಂಬಿಸಿ ತಲಾ ಒಬ್ಬರಿಂದ 1 ಲಕ್ಷದಿಂದ 1 ಲಕ್ಷ 50 ಸಾವಿರ ರು.ಗಳಂತೆ ಸುಮಾರು 40 ಜನರನ್ನು ವಂಚಿಸಿ ಹಣ ಪಡೆದು ಹುಣ್ಣಿಗೆರೆ ಗ್ರಾಮದ ಸರ್ಕಾರಿ ಗೋಮಾಳದ ಸ.ನಂ.34 ಮತ್ತು 35ರ ಜಮೀನನ್ನು ಆಶ್ರಯ ಯೋಜನೆ ನಕಲು ಹಕ್ಕುಪತ್ರ ಸೃಷ್ಟಿಸಿ ದಾಸನಪುರ ಸಬ್ ರಿಜಿಸ್ಟರ್ 2009 ಡಿಸೆಂಬರ್ ತಿಂಗಳಲ್ಲಿ ನೋಂದಣಿ ಮಾಡಿಸಿದ್ದಾನೆ.
ನಂತರ ವಂಚಿತರು ನಿವೇಶನ ನೋಡಿ ಸಂಬಂದಪಟ್ಟ ಸೊಂಡೆಕೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ.
ಈ ಬಗ್ಗೆ ಆತನಿಂದ ವಂಚಿತರಾದ ಮಂಡ್ಯ ತಾಲೂಕು ಬಸರಾಳು ಗ್ರಾಮದ ಕುಳ್ಳೇಗೌಡ, ರಿಜ್ವಾನ್‌ಪಾಷಾ, ಸುಬ್ರಹ್ಮಣ್ಯ, ಆನಂದ, ಕೃಷ್ಣೇಗೌಡ ಮತ್ತಿತರರು ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನೆ ಬಾಗಿಲು ಮುರಿದು ನಗದು ಕಳವು
ನೆಲಮಂಗಲ: ಬೀಗ ಹಾಕಿದ್ದ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ 50 ಸಾವಿರ ನಗದು, 20 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾದನಾಯಕನಹಳ್ಳಿಯ ಕಂಠಪುರ ನಿವಾಸಿಯಾದ ಮೊಜಿದ್ ರೆಹಮಾನ್ ಎಂಬುವವರ ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಜಿದ್ ರೆಹಮಾನ್ ಮನೆಯಲ್ಲಿ ನಿನ್ನೆ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗ ಒಡೆದು ಮನೆಯಲ್ಲಿದ್ದ 50 ಸಾವಿರ ನಗದು, 20 ಗ್ರಾಂ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣೆ ಪೊಲೀಸ್ ಅಧಿಕಾರಿ ಬಿ.ಎನ್.ರೆಡ್ಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.