ವಿಜೃಂಭಣೆಯ ರೇವಣಸಿದ್ದೇಶ್ವರ ರಥೋತ್ಸವ
ರಾಮನಗರ: ತಾಲೂಕಿನ ಅವ್ವೇರಹಳ್ಳಿ ಸಮೀಪವಿರುವ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇತಿಹಾಸ ಪ್ರಸಿದ್ಧ ರೇವಣಸಿದ್ದೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕ್ಷೇತ್ರವು ದಕ್ಷಿಣ ಕಾಶಿ ಎಂದೆ ಹೆಸರು ಪಡೆದಿದೆ. ಪ್ರತಿ ವರ್ಷ ನಡೆಯುವ ಈ ಬ್ರಹ್ಮ ರಥೋತ್ಸವಕ್ಕೆ ಹೊರ ರಾಜ್ಯಗಗಳೂ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತಮ್ಮ ಭಕ್ತಿ ಭಾವ ಸಮರ್ಪಿಸಿದರು. ದೇವರಿಗೆ ಬಾಳೆಹಣ್ಣು ಮತ್ತು ಜವನವನ್ನು ಎಸೆದು ಪುನೀತರಾದೆವು ಎಂದು ಸಂಪ್ರೀತರಾದರು.
ರಥೋತ್ಸವದ ಅಂಗವಾಗಿ ಹಲವಾರು ಸಂಘಟನೆಗಳು ಅರವಂಟಿಗೆಗಳನ್ನು ಸ್ಥಾಪಿಸಿ ಹೆಸರು ಬೇಳೆ, ಮಜ್ಜಿಗೆ, ಪಾನಕ ವಿತರಣೆ ಮಾಡಿದರು. ರಥೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ದೇವಾಲಯ ಸೇವಾ ಟ್ರಸ್ಟ್ನಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಾಲಯದ ಸೇವಾ ಟ್ರಸ್ಟ್ನಿಂದ ಭಕ್ತಾಧಿಗಳಿಗೆ ಆಯೋಜಿಸಲಾಗುವ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮಕ್ಕೆ ಹತ್ತು ವರ್ಷಗಳು ತುಂಬಿರುವುದರಿಂದ ಈ ಬಾರಿ ಮೈಸೂರು ಪಾಕ್ ಸಿಹಿಯೂಟದೊಂದಿಗೆ ದಶಮಾನೋತ್ಸವ ಆಚರಿಸಲಾಗುತ್ತಿದೆ ಎಂದು ಟ್ರಸ್ಟ್ನ ವ್ಯವಸ್ಥಾಪಕ ಧರ್ಮದರ್ಶಿ ಎಲ್.ರೇವಣಸಿದ್ದಯ್ಯ ತಿಳಿಸಿದರು.
ಜಾತ್ರಾ ಮಹೋತ್ಸವಕ್ಕೆ ವ್ಯವಸ್ಥೆ: ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ವಸತಿ ಸೌಕರ್ಯ, ಅನ್ನ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದೆ.
ಈ ಬಾರಿ ಬೆಟ್ಟಕ್ಕೆ ಹತ್ತುವ ಮೆಟ್ಟಿಲುಗಳಿಗೆ ಅಳವಡಿಸಿರುವ ಮೇಲ್ಚಾವಣೆಯಿಂದ ಭಕ್ತಾಧಿಗಳಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ಅಭಯಚೌಡೇಶ್ವರಿ ಉತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ಸಮೀಪವಿರುವ ಅಭಯ ಚೌಡೇಶ್ವರಿ ದೇವಾಲಯದಲ್ಲಿ ದ್ಘೊಜ್ಘಬಳ್ಳಾಪುರದ ಸಪ್ತಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ಅಂಗವಾಗಿ ಮಾತೆಯ ಜ್ಯೋತಿ ಉತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ತೊಗಟವೀರ ಕ್ಷತ್ರಿಯ ಸಮಾಜ ಸೇವಾ ಸಂಘ ಟ್ರಸ್ಟ್ ನೇತೃತ್ವದಲ್ಲಿ ಅಭಯ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ತೊಗಟವೀರ ಕುಲಗುರು ದಿವ್ಯಜ್ಞಾನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಲವು ಕಾರ್ಯಕ್ರಮ ಟ್ರಸ್ಟ್ ಆಯೋಜಿಸಿದ್ದರು. ಬೆಳಗ್ಗೆ ಗಂಗಾ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮಗಳು ರಾತ್ರಿ ಮೆರವಣಿಗೆಯೊಂದಿಗೆ ಗಮನ ಸೆಳೆದವು. ರಾತ್ರಿ 8 ಗಂಟೆ ನಂತರ ದೇವಾಲಯದಿಂದ ಹೊರಟ ಜ್ಯೋತಿ ಮೆರವಣಿಗೆ ನಗರದ ವಿವಿಧ ಬೀದಿಗಳಲ್ಲಿ ರಾತ್ರಿಯಿಡೀ ಸಂಚರಿಸಲಿದೆ. ಜೊತೆಗೆ ಅಭಯಚೌಡೇಶ್ವರಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಕೂಡ ಈ ಬಾರಿ ಸಂಭ್ರಮದಿಂದ ನಡೆಯಲಿದೆ. ಆಂಧ್ರಪ್ರದೇಶದಿಂದ ವಿಶೇಷವಾಗಿ ಕರೆತರಲಾಗಿರುವ ಜ್ಯೋತಿ ಯಾತ್ರೆ ದೊಡ್ಡಬಳ್ಳಾಪುರ ಕರಗದ ಅಂಗವಾಗಿ ಪ್ರತಿವರ್ಷ ನಡೆಯುತ್ತದೆ.
ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಮಾತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತಾದಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಅವಿಮುಕ್ತೇಶ್ವರಸ್ವಾಮಿ ರಥೋತ್ಸವ
ಹೊಸಕೋಟೆ: ಪಟ್ಟಣದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಂ.ಟಿ.ಬಿ.ನಾಗರಾಜ್ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಜೊತೆಗೂಡಿ ಮಧ್ಯಾಹ್ನ 12.40ಕ್ಕೆ ರಥಕ್ಕೆ ಪೂಜೆ ಸಲ್ಲಿಸುವುದರ ಮಾಲಕ ಚಾಲನೆ ನೀಡಿದರು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಮತ್ತು ರಥೋತ್ಸವ ಸಮಿತಿ ಸಂಚಾಲಕ ಶ್ರೀನಿವಾಸ್, ತಾಲೂಕಿನ ನಾನಾ ಮೂಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ನೆರೆದಿದ್ದರು. ಮತ್ತು ರಥದ ಮುಂದೆ ಹಲಾವರು ಜಾನಪದ ಕಲಾ ತಂಡಗಳಾದ.
ವೀರಗಾಸೆ ಡೊಳ್ಳು ಕುಣಿತ ಹುಲಿವೇಷದಾರಿಗಳು ರಥದ ಜೊತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾ ತಂಡ ಮತ್ತು ಭಕ್ತರಿಗೆ ಅಲ್ಲಲ್ಲಿ ಪಾನಕ ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಲಾಯಿತು.
ಕರಗ: ಸ್ವಾಮಿ ವಿವೇಕಾನಂದ ದರ್ಶನ...
ದೇವನಹಳ್ಳಿ: ಇಲ್ಲಿನ ಮೌಕ್ತಿಕಾಂಬ ಅಮ್ಮನ ಕರಗ ಮಹೋತ್ಸವ ಅಂಗವಾಗಿ ದೇವಾಲಯದ ಪಕ್ಕದಲ್ಲೇ ಇರುವ ದೇಶದ ಪೇಟೆ ಧರ್ಮರಾಯಸ್ವಾಮಿ ಗರಡಿಮನೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ವಿವೇಕಾನಂದರ ದರ್ಶನ ಅಲ್ಲದೆ, ಗರಡಿ ಮನೆಯಲ್ಲಿ ಶನಿವಾರ ಸಂಜೆ ಉಪಯೋಗಿಸುವ ಸಾಧನಗಳನ್ನಿಟ್ಟು ಪೂಜಾ ಕಾರ್ಯವನ್ನು ಗರಡಿ ಮನೆಯ ಮುಖ್ಯಸ್ಥರು ಪೂಜೆ ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರಲ್ಲದೆ ಗರಡಿ ಮನೆಗೂ ಭೇಟಿ ನೀಡುತ್ತಿದ್ದರು.