ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅರ್ಕಾವತಿ ಇಕ್ಕೆಲಗಳಲ್ಲಿ ಉದ್ಯಾನವನಕ್ಕೆ ವಿರೋಧ

Srinivasa Murthy VN
Updated On : 27 May 2013, 12:44 pm

ಕ.ಪ್ರ.ವಾರ್ತೆ ರಾಮನಗರ  ಮೇ 26
ಜಿಲ್ಲಾ ಕೇಂದ್ರ ರಾಮನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಅರ್ಕಾವತಿ ನದಿಯ ಇಕ್ಕೆಲಗಳಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ಸಲುವಾಗಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ರು.9.5 ಕೋಟಿ ವೆಚ್ಚದ ಯೋಜನೆಗೆ ರಾ-ಚ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರಸಭೆ, ಜಿಲ್ಲಾಡಳಿತವೂ ಸೇರಿದಂತೆ 4 ಬಾರಿ ನದಿ ಪಾತ್ರದ ಶುದ್ಧೀಕರಣಕ್ಕೆಂದು ಲಕ್ಷಾಂತರ ರು.ಖರ್ಚು ಮಾಡಲಾಗಿದೆ. ಇತ್ತೀಚೆಗಷ್ಟೇ ರಾ-ಚ ಪ್ರಾಧಿಕಾರದಿಂದ ರು.38 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ 3 ತಿಂಗಳು ಕಳೆಯುವಷ್ಟರಲ್ಲೇ ಮತ್ತೆ ಗಿಡ-ಗಂಟಿಗಳು ಬೆಳೆದವು. ಶುದ್ಧೀಕರಣಕ್ಕೆಂದು ಖರ್ಚು ಮಾಡಿದ ಹಣವು ವೃಥಾ ವ್ಯರ್ಥವಾಗಿದೆ ಎಂದು ಅವರು ವಿಷಾದಿಸಿದರು.
ಕೊಚ್ಚಿ ಹೋಗಲಿದೆ: ಅರ್ಕಾವತಿ ನದಿಯು ನಗರ ವ್ಯಾಪ್ತಿಯಲ್ಲಿ 2.5 ಕಿ.ಮೀ. ಹರಿಯುತ್ತಿದೆ. ಸುಮಾರು 60 ರಿಂದ 65 ಮೀಟರ್ ಅಗಲವಿರುವ ನದಿಯ ಮಧ್ಯ ಭಾಗದಲ್ಲಿ 15 ಮೀಟರ್ ಅಗಲದ ಕಾಲುವೆ ನಿರ್ಮಿಸಿ ನೀರು ಹರಿಯಲು ವ್ಯವಸ್ಥೆಕಲ್ಪಿಸಿ, ಇಕ್ಕೆಲಗಳಲ್ಲಿ ಕಲ್ಲು ಹಾಸು ಅಳವಡಿಸಿ ವಾಕ್‌ಪತ್ ನಿರ್ಮಿಸಲಾಗುವುದು. ಸಣ್ಣ ಸಣ್ಣ ಸೇತುವೆಗಳನ್ನು ನಿರ್ಮಿಸುವ ಮೂಲಕ ವಾಯು ವಿಹಾರಕ್ಕೆ ಯೋಗ್ಯವಾದ ತಾಣವನ್ನಾಗಿ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಒಂದು ವೇಳೆ ನದಿಯಲ್ಲಿ ಪ್ರವಾಹ ಬಂದಿದ್ದೇ ಆದರೆ ಯೋಜನೆಗೆ ವೆಚ್ಚ ಮಾಡಿದ ರು.9.5 ಕೋಟಿ ನೀರಿನಲ್ಲಿ ಕೊಚ್ಚಿ ಹೋಗಲಿದೆ ಎಂದು ಟೀಕಿಸಿದರು.
ಅರ್ಥವಾಗದ ಸಂಗತಿ: ಅರ್ಕಾವತಿ ನದಿ ಉಗಮ ಸ್ಥಾನದಿಂದ ಸಂಗಮದವರೆಗೂ ಶುದ್ಧಿಗೊಳಿಸಲು ಸರ್ಕಾರವೇ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ಹಲವಾರು ಸಭೆಗಳನ್ನು ನಡೆಸಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಿರುವಾಗರಾ-ಚ ಪ್ರಾಧಿಕಾರ ಏಕೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂಬುದು ಅರ್ಥವಾಗದ ಸಂಗತಿ ಎಂದರು.
ಪ್ರಾಧಿಕಾರದ ಯೋಜನೆಗಳಿಂದ ಸಾರ್ವಜನಿಕರಿಗೆ ಉಪಯೋಗ ಆಗಬೇಕು ಹಾಗೂ ನಗರದ ಅಭಿವೃದ್ಧಿಯಾಗಬೇಕು. ಹಣ ವ್ಯರ್ಥವಾಗದೆ ಸದುಪಯೋಗವಾಗಿ ಮತ್ತೆ ಹಣ ಕ್ರೋಢೀಕರಣವಾಗಬೇಕು. ಪ್ರಾಧಿಕಾರ ಇಂತಹ ಯೋಜನೆಗಳನ್ನು ಮಾತ್ರ ಕೈಗೊಳ್ಳಬೇಕು. ಅದನ್ನು ಬಿಟ್ಟು ವ್ಯರ್ಥ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಹಣವನ್ನು ವೃಥಾ ಪೋಲು ಮಾಡಬಾರದು ಎಂದು ಅವರ ಆಗ್ರಹಿಸಿದರು.
ಈ ಯೋಜನೆಯ ಹಿಂದೆ ಭಾರಿ ಭ್ರಷ್ಟಾಚಾರ ನಡೆಯುವ ಸಂಭವವಿದೆ. ಸಾರ್ವಜನಿಕರ ಹಣದಲ್ಲಿ ಇಂತಹ ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿ, ಕಾಣದ ಕೈಗಳು ಅಧಿಕಾರಿಗಳ ಜತೆ ಸೇರಿ ಹಣ ಲೂಟಿ ಮಾಡುವ ಹುನ್ನಾರ ಅಡಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯು ಅನುಷ್ಠಾನಗೊಳ್ಳಲು ಬಿಡುವುದಿಲ್ಲ.
ಈ ಸಂಬಂಧ ಯಾವುದೇ ರೀತಿಯ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಎಂದು ನಾಗರಾಜು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement