'ಸರ್ವರ್' ಇಲ್ಲದೆ ಜನರ ಪರದಾಟ
ಕ.ಪ್ರ. ವಾರ್ತೆ ಸೂಲಿಬೆಲೆ ಮೇ 26
ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ ಕಣ್ಣಾಮುಚ್ಚಲೇ ಆಟವಾಡುತ್ತಿದ್ದು, ಪಡಿತರ ಚೀಟಿಗಾಗಿ ಜನರು ಹೆಸರು ನೋಂದಾಯಿಸಿಕೊಳ್ಳಲು ಗ್ರಾಪಂಗಳ ಮುಂದೆ ಗಂಟೆಗಟ್ಟಲೇ ನಿಂತು ನೆಟ್ ವರ್ಕ್ ಇಲ್ಲದೆ ಪರದಾಡಬೇಕಾಗಿದೆ. ಅಲ್ಲದೇ ಬಿಎಸ್‌ಎನ್‌ಎಲ್‌ನ ಈ ಅವ್ಯವಸ್ಥೆಯಿಂದ ಗ್ರಾಪಂ ಸಿಬ್ಬಂದಿ ಜನರಿಂದ ಬೈಗುಳ ಕೇಳುವಂತಾಗಿದೆ.
ಸೂಲಿಬೆಲೆ ಹೋಬಳಿ ಸೇರಿದಂತೆ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್
ಎಲ್ ನೆಟ್ ಸಮಸ್ಯೆ ಉದ್ಭವಿಸಿದ್ದು, ಇದರಿಂದ ನಾನಾ ಗ್ರಾಪಂಗಳಲ್ಲಿ ಪಡಿತರ ಚೀಟಿ ನೋಂದಣಿಯ ಆನ್ ಲೈನ್ ಪ್ರಕ್ರಿಯೆಗೆ ತೀವ್ರ ಆಡಚಣೆಯಾಗಿ ತೊಂದರೆ ಅನುಭವಿಸುವಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಡಿತರ ಚೀಟಿ ಭದ್ರತೆಗೆ ಕುಟುಂಬ ಸದಸ್ಯರು ಸರ್ಕಾರ ಕೇಳಿರುವ ದಾಖಲೆಗಳನ್ನು ಒದಗಿಸಿ ಅದನ್ನು ಗ್ರಾಪಂ ಕಚೇರಿಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಅಪ್ ಲೋಡ್ ಮಾಡಿಸಬೇಕಿದೆ. ಹಾಗೊಂದು ವೇಳೆ ಇದನ್ನು ಮಾಡಿಸದ ಪಕ್ಷದಲ್ಲಿ ಪಡಿತರ ಚೀಟಿಗಳಿಗೆ ಕುತ್ತು ಬರುವ ಸಂಭವ ಇರುವ ಕಾರಣ ಜನ ಕೂಲಿ ಕೆಲಸ ಬಿಟ್ಟು ನಿತ್ಯ ಗ್ರಾಪಂ ಮುಂದೆ ಕಾಯುವಂತಾಗಿದೆ.
ನೆಟ್‌ವರ್ಕ್ ಸರಿಯಾಗಿದ್ದರೇ ಕೆಲಸ ಸುಗಮವಾಗುತ್ತದೆ. ಆದರೆ, ಬಿಎಸ್‌ಎನ್‌ಎಲ್ ಸಂಸ್ಥೆಯವ ಕಠೋರ ನಿರ್ಲಕ್ಷ್ಯದಿಂದ ತೊಂದರೆಯಾಗಿರುವ ನೆಟ್ ವರ್ಕ್ ಸಮಸ್ಯೆ ಸರಿಯಾಗದೇ ಜನರು, ಇತ್ತ ಗ್ರಾಹಕರು ನಾನಾ ಅವಸ್ಥೆ ಪಡುವಂತಾಗಿದೆ. ಈಗ ಬರುತ್ತೋ, ಈಗೋ ಬಂದೇ ಬಿಡ್ತು ಎಂದು ಗಂಟೆ ಗಟ್ಟಲೇ ಕಾಯುವ ಜನರು ತಾಳ್ಮೆ ಕೆಟ್ಟು ಗ್ರಾಪಂ ಸಿಬ್ಬಂದಿ ಮೇಲೆ ತಮ್ಮ ಕೋಪವನ್ನು ಕಾರುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ.
ಈ ಸಮಸ್ಯೆ ಯಾವಾಗ ಪರಿಹಾರವಾಗುತ್ತೋ ಎಂದು ಜನ ಬಿಎಸ್‌ಎನ್‌ಎಲ್ ಕಚೇರಿಯತ್ತ ಎದುರು ನೋಡುವಂತಾಗಿದೆ.
ನಂಜುಂಡೇಶ್ವರ ರಥೋತ್ಸವ
ಆನೇಕಲ್: ತಾಲೂಕಿನ ಅತ್ತಿಬೆಲೆಯ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಅದ್ಧೂರಿಯಾಗಿ ನೆರವೇರಿತು. ಪ್ರಾತಃಕಾಲದಲ್ಲಿ ಸ್ವಾಮಿಗೆ, ಏಕವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮಹಾ ಗಣಪತಿ ಹೋಮ ಮತ್ತು ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ನಂತರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಥ ಯಾತ್ರೆ ನಡೆಸಲಾಯಿತು. ಭಕ್ತಾದಿಗಳು ಬಾಳೆ ಹಣ್ಣಿಗೆ ದವನವನ್ನು ಕುಚ್ಚಿ ರಥದ ಶಿಖರದ ಮೇಲೆ ಎಸೆಯುವ ಮೂಲಕ ಭಕ್ತಿಯನ್ನು ಮೆರೆದರು.