ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಜ್ಜು
ಕ.ಪ್ರ.ವಾರ್ತೆ ರಾಮನಗರ ಮೇ 26
ಜಿಲ್ಲೆಯಲ್ಲಿ ಡೆಂಘೀ, ಚಿಕೂನ್ ಗುನ್ಯಾ ಸೇರಿದಂತೆ ಎಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯು ಸರ್ವ ಸನ್ನದ್ಧವಾಗಿದೆ. ಸಾಂಕ್ರಾಮಿಕ ರೋಗಗಳ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಸಿಕೊಂಡು, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 21 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಚನ್ನಪಟ್ಟಣದಲ್ಲಿ ಅತೀ ಹೆಚ್ಚು 10 ಪ್ರಕರಣಗಳು, ಕನಕಪುರದಲ್ಲಿ 6, ಮಾಗಡಿಯಲ್ಲಿ 4 ಹಾಗೂ ರಾಮನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಈ ಸಂಬಂಧ ಜನತೆ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದ್ದಾರೆ. ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯು ಅಂತಹ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುತ್ತಿದೆ. ಸೋಂಕಿರುವುದು ಕಂಡು ಬಂದಲ್ಲಿ ಸರ್ಕಾರವೇ ಉಚಿತ ಚಿಕಿತ್ಸೆ ನೀಡಲಿದೆ. ಈ ಸಾಂಕ್ರಾಮಿಕ ರೋಗಗಳು ಬಹುಪಾಲು ಸೊಳ್ಳೆ ಕಡಿತದಿಂದ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಘುನಾಥ್ ತಿಳಿಸಿದ್ದಾರೆ.
ಸಾಮೂಹಿಕ ಉಪನಯನ
ಆನೇಕಲ್: ತಾಲೂಕಿನ ಚಂದಾಪುರದ ಸಹೃದಯ ವಿಪ್ರ ವೃಂದ ಹಾಗೂ ಆತ್ತಿಬೆಲೆಯ ಶ್ರೀ ಗಾಯತ್ರಿ ವಿಪ್ರ ವೃಂದ ವತಿಯಿಂದ ಅತ್ತಿಬೆಲೆಯ ಕೋಟೆ ಬೀದಿಯಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಸನ್ನಿದಿಯಲ್ಲಿ ಮೇ 29 ಬುಧವಾರ ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಆಸಕ್ತ ವಿಪ್ರ ಬಾಂಧವರು ಸಮಿತಿಯ ಎನ್.ಎಸ್ ನಾಗರಾಜ್- 98802 04064 ಸಂಪರ್ಕಿಸಿ.