40 ಲಕ್ಷ ಅಕ್ರಮ ಒತ್ತುವರಿ ಜಮೀನು ತೆರವು
ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ, ನ.11
ನಗರದ ಅರಳುಮಲ್ಲಿಗೆ ಬಾಗಿಲು ವೃತ್ತದ ಬಳಿ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ತಾಲೂಕು ಕಚೇರಿ ಅಧಿಕಾರಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 9 ಗಂಟೆ ಜಮೀನು ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಶ್ರೀದತ್ತಾತ್ರೇಯ ಕಲ್ಯಾಣ ಮಂದಿರಕ್ಕೆ ಸಂಬಂಧಪಟ್ಟಂತೆ ಬಾಲಸುಬ್ರಹ್ಮಣ್ಯ ಎಂಬುವವರು ವೀರಭದ್ರನಪಾಳ್ಯ ಸರ್ವೇ ನಂ.5ರಲ್ಲಿ 8 ಗುಂಟೆ ಸರ್ಕಾರಿ ಧರ್ಮದ ತೋಪು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದರು.
ಪಕ್ಕದಲ್ಲೇ ರಾಜಕಾಲುವೆ ಇದ್ದು, ಈ ಪ್ರದೇಶದಲ್ಲಿ ಒಟ್ಟು 2 ಎಕರೆ 12 ಗುಂಟೆ ಸರ್ಕಾರಿ ಜಮೀನಿದೆ. ಅದರಲ್ಲಿ 1 ಎಕರೆ 22 ಗುಂಟೆ ಕರಾಬು ಜಾಗವನ್ನು ಸರ್ಕಾರಿ ಶಾಲೆಗೆ ನೀಡಲಾಗಿದೆ. ಉಳಿದ 19 ಗುಂಟೆಯಲ್ಲಿ 8 ಗುಂಟೆ ಒತ್ತುವರಿಯಾಗಿತ್ತು. ಇದೇ ಸರ್ವೇ ನಂಬರಿನಲ್ಲಿ ಕುಚ್ಚಪ್ಪನಪೇಟೆ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಹುಚ್ಚಪ್ಪ ಬಿನ್ ಮುನಿಶಾಮಪ್ಪ ಎಂಬುವವರು ಸರ್ಕಾರಿ ಶಾಲೆಗೆ ಸೇರಿದ 1 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದರು. ಕಳೆದ 15-20 ವರ್ಷಗಳಿಂದ ಅಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರು ಎನ್ನಲಾಗಿದ್ದು, ಸರ್ಕಾರಿ ದಾಖಲೆಗಳ ಪ್ರಕಾರ ಆ 1 ಗುಂಟೆ ಜಾಗವನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಸೋಮವಾರದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಭೂಮಿಯ ಸರ್ಕಾರಿ ಮಾರುಕಟ್ಟೆ ಬೆಲೆ 40 ಲಕ್ಷಕ್ಕೂ ಅಧಿಕ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಮಾಹಿತಿ ನೀಡಿ: ಸರ್ಕಾರಿ ಗುಂಡುತೋಪು, ಕೆರೆ ಅಂಗಳ, ಸ್ಮಶಾನ ಸೇರಿದಂತೆ ಸಾರ್ವಜನಿಕ ಆಸ್ತಿಯ ಒತ್ತುವರಿ ನಡೆದಿರುವ ಕುರಿತು ಸಾರ್ವಜನಿಕರ ಬಳಿ ದಾಖಲೆಗಳಿದ್ದರೆ ತಾಲೂಕು ಕಚೇರಿಗೆ ಸಲ್ಲಿಸಬಹುದು. ಒತ್ತುವರಿದಾರರು ಕೂಡ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಭೂಮಿಯನ್ನು ತೆರವು ಮಾಡಿ ಸಹಕರಿಸಬೇಕು. ತಪ್ಪಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಭೂಮಿ ಒತ್ತುವರಿ ಅಕ್ಷಮ್ಯ ಅಪರಾಧವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅವಕಾಶಗಳೂ ಇವೆ ಎಂದು ಅವರು ವಿವರಿಸಿದರು.
ಕಾರ್ಯಾಚರಣೆಯಲ್ಲಿ ಕಸಬಾ ಕಂದಾಯ ಅಧಿಕಾರಿ ರಜನಿಕಾಂತರೆಡ್‌ಡಿ ಸೇರಿದಂತೆ ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.