ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪರಭಾಷೆ ನಾಮಫಲಕಗಳನ್ನು ಕಿತ್ತೆಸೆದು ಪ್ರತಿಭಟನೆ

Srinivasa Murthy VN
Updated On : 12 Nov 2013, 1:25 am

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ, ನ.11
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಕ್ಕೆ ಎಲ್ಲ ಹಂತಗಳಲ್ಲೂ ಅಗ್ರ ಪ್ರಾಶಸ್ತ್ಯ ದೊರೆಯಬೇಕು. ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಭಾಷೆ-ಸಂಸ್ಕೃತಿ ಮತ್ತು ಭಾವನೆಗಳಿಗೆ ಬೆಲೆ ಕೊಡುವುದು ಕಡ್ಡಾಯ. ತಪ್ಪಿದಲ್ಲಿ ಕನ್ನಡಿಗದ ಸ್ವಾಭಿಮಾನಿ ದನಿ ಕಿಚ್ಚಾಗಿ ಪರಿಣಮಿಸುತ್ತದೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇಲ್ಲಿನ ಶ್ರೀಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ದೊಡ್ಡಬಳ್ಳಾಪುರ ನಗರಾದ್ಯಂತ ಕನ್ನಡ ನಾಮಫಲಕ ಅಭಿಯಾನ(ಪರಭಾಷೆ ನಾಮಫಲಕಗಳಿಗೆ ಮಸಿ ಬಳಿಯವ ಮತ್ತು ಕಿತ್ತೊಗೆಯುವ ಚಳವಳಿ) ನಡೆಯಿತು.
ಕಾರ್ಯಕರ್ತರ ಆಕ್ರೋಶ: ಕೊಂಗಾಡಿಯಪ್ಪ ಕೇಂದ್ರ ಬಸ್‌ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತದಿಂದ ಆರಂಭವಾದ ಜಾಗೃತಿ ಅಭಿಯಾನದಲ್ಲಿ ಹತ್ತಾರು ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ವಾಣಿಜ್ಯ ಮಳಿಗೆಗಳ ಮೇಲೆ ಪ್ರದರ್ಶಿಸಿದ್ದ ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಬರೆಯಲಾಗಿದ್ದ ನೂರಾರು ನಾಮಫಲಕಗಳನ್ನು ಕಿತ್ತೊಗೆದು ತಂದು ತಾಲೂಕು ಕಚೇರಿ ಮುಂದೆ ಸುರಿದು ಪ್ರತಿಭಟಿಸಲಾಯಿತು. ಪ್ರತಿಭಟನಾಕಾರರು ಅಂಗಡಿ ಮಳಿಗೆಗಳ ಮೇಲೇರಿ ಅನ್ಯಭಾಷೆ ನಾಮಫಲಕಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಕೋಟೆರಸ್ತೆ, ಸಿನಿಮಾ ರಸ್ತೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ಮುಕ್ತಾಂಭಿಕಾ ರಸ್ತೆ, ಸೌಂದರ್ಯಮಹಲ್ ವೃತ್ತ, ಬಸ್‌ನಿಲ್ದಾಣ, ಡಿಕ್ರಾಸ್, ಪ್ರವಾಸಿ ಮಂದಿರ ವೃತ್ತ ಸೇರಿದಂತೆ ಇಡೀ ನಗರದ ಮುಖ್ಯಬೀದಿಗಳಲ್ಲಿ ನೂರಾರು ನಾಮಫಲಕಗಳಿಗೆ ಮಸಿ ಬಳಿಯಲಾಯಿತು. ಬಹುರಾಷ್ಟ್ರೀಯ ಕಂಪನಿಗಳು, ಮೊಬೈಲ್ ಕಂಪನಿಗಳ ನೂರಾರು ನಾಮಫಲಕಗಳನ್ನು ಕಿತ್ತು ತಂದು ನಾಶಪಡಿಸಿಲಾಯಿತು.
ಎಚ್ಚರಿಕೆ: ಇದೇ ವೇಳೆ ಜಾಗೃತಿ ಅಭಿಯಾನ ನಡೆದು ಬಂದ ಹಾದಿಯಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳ ಮಾಲೀಕರುಗಳಿಗೆ ಕನ್ನಡ ಭಾಷೆ ನಾಮಫಲಕಗಳನ್ನು ಹಾಕುವಂತೆ ಮನವರಿಕೆ ಮಾಡಲಾಯಿತು. ಕನ್ನಡವನ್ನು ನಿರ್ಲಕ್ಷಿಸಿ ಅನ್ಯಭಾಷೆಗಳನ್ನು ಮೆರೆಸಲು ಪ್ರಯತ್ನಿಸಿದರೆ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಈ ನೆಲದ ಸ್ವಾಭಿಮಾನಿ ಕನ್ನಡತನವನ್ನು ಉಳಿಸಿ-ಬೆಳೆಸುವಂತೆ ಕೋರಲಾಯಿತು. ತಪ್ಪಿದಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆ: ಬೆಳಗ್ಗೆ 11 ಗಂಟೆಗೆ ಸಿದ್ಧಲಿಂಗಯ್ಯ ವೃತ್ತದಿಂದ ಆರಂಭವಾದ ಕನ್ನಡ ನಾಮಫಲಕ ಅಭಿಯಾನ ಮಧ್ಯಾಹ್ನ 3 ಗಂಟೆ ವೇಳೆಗೆ ತಾಲೂಕು ಕಚೇರಿ ಸೇರಿತು. ಊರಿನ ಹಲವೆಡೆಗಳಲ್ಲಿ ಪ್ರದರ್ಶಿಸಿದ್ದ ಪರಭಾಷೆ ನಾಮಫಲಕಗಳನ್ನು ಕಿತ್ತು ತಂದಿದ್ದ ಪ್ರತಿಭಟನಾಕಾರರು ತಾಲೂಕು ಕಚೇರಿಯ ಮುಂದೆ ಅವುಗಳನ್ನಿಟ್ಟು ತಹಸೀಲ್ದಾರ್ ವಶಕ್ಕೆ ನೀಡಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್, ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಕನ್ನಡ ನಾಮಫಲಕಗಳನ್ನು ಪ್ರದರ್ಶಿಸುವುದು ಕಡ್‌ಡಾಯ. ಆದರೆ ನಿಯಮ ಮೀರಿ ಹಲವೆಡೆ ಇತರ ಭಾಷೆಗಳ ನಾಮಫಲಕಗಳು ರಾರಾಜಿಸುತ್ತಿದ್ದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಸಂಘಟನೆಗಳು ಇಂದು ಬೀದಿಗಿಳಿದು ಜಾಗೃತಿ ಮೂಡಿಸಿವೆ. ಸರ್ಕಾರದ ಆದೇಶಾನ್ವಯ ಎಲ್ಲ ವಾಣಿಜ್ಯ ಮಳಿಗೆ-ಸಂಕೀರ್ಣಗಳು ಸೇರಿದಂತೆ ಸಾರ್ವಜನಿಕವಾಗಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಪ್ರಾದೇಶಿಕ ಭಾಷೆಗೇ ಆಗ್ರಸ್ಥಾನ ಇರಬೇಕು. ಇದನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಕನ್ನಡ ಬಳಸದಿರುವವರಿಗೆ ನೋಟೀಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಮುಖಂಡ ಡಿ.ಸಿ.ಚೌಡರಾಜು, ಭುವನೇಶ್ವರಿ ಕನ್ನಡ ಸಂಘದ ಜಿ.ಪುಟ್ಟಪ್ಪ, ನಗರಸಭಾ ಸದಸ್ಯ ಆರ್.ಕೆಂಪರಾಜು, ಡಿ.ಎನ್.ತಿಮ್ಮರಾಜು, ಮುಖಂಡರಾದ ಸು.ನರಸಿಂಹಮೂರ್ತಿ, ವೆಂಕಟೇಶ್, ನರಸಿಂಹಮೂರ್ತಿ, ಮಹದೇವ್, ಸುರೇಶ್, ನಟರಾಜ್ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ನಾಮಫಲಕ ಕಡ್ಡಾಯ
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ವ್ಯವಹಾರದ ಭಾಷೆಯಾಗಿಯೂ ಕನ್ನಡವನ್ನೇ ಬಳಕೆ ಮಾಡಬೇಕು. ವಾಣಿಜ್ಯ-ವ್ಯವಹಾರಗಳು ಈ ನೆಲದ ಭಾಷೆಯಲ್ಲೇ ನಡೆಯಬೇಕು. ಹಾಗಾಗಿ ಕನ್ನಡ ನಾಮಫಲಕಗಳನ್ನು ಹಾಕುವುದು ಕಡ್ಡಾಯ. ಇತರ ಭಾಷೆಗಳನ್ನು ವೈಭವೀಕರಿಸಿ ಕನ್ನಡವನ್ನು ನಿರ್ಲಕ್ಷಿಸುವ ಧೋರಣೆ ಖಂಡನೀಯ. ಭುವನೇಶ್ವರಿ ಕನ್ನಡ ಸಂಘ ಕಳೆದ 4 ದಶಕಗಳಿಂದ ದೊಡ್ಡಬಳ್ಳಾಪುರದಲ್ಲಿ ಹೋರಾಟಗಳನ್ನು ರೂಪಿಸಿದೆ. ಈಗ ಪರಭಾಷೆ ನಾಮಫಲಕಗಳಿಗೆ ಮಸಿ ಬಳಿಯುವ ಮತ್ತು ಕಿತ್ತೊಗೆಯುವ ಕೆಲಸಕ್ಕೆ ಕೈಹಾಕಿದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಹೋರಾಟ ಅನಿವಾರ್ಯವಾದೀತು.
-ತ.ನ.ಪ್ರಭುದೇವ್, ಅಧ್ಯಕ್ಷರು, ಭುವನೇಶ್ವರಿ ಕನ್ನಡ ಸಂಘ
ಗಂಭೀರ ಹೋರಾಟ
ಕನ್ನಡ ವಿರೋಧಿ ಧೋರಣೆ ವಿರುದ್ಧ ಗಂಭೀರ ಹೋರಾಟವನ್ನು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಇತರ ಕನ್ನಡ ಸಂಘಟನೆಗಳ ಸಹಕಾರದಲ್ಲಿ ಮಾಡಲಿದೆ. ಈ ನೆಲದ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ಬೆಳೆಯುವ ಜನ ಇಲ್ಲಿನ ಭಾಷೆಯನ್ನು ಕಡೆಗಣಿಸಿದರೆ ಪರಿಣಾಮ ನೆಟ್ಟಗಿರದು. ಕನ್ನಡ ನಾಮಫಲಕಗಳನ್ನು ಹಾಕಬೇಕಾದ್ದು ಕಡ್ಡಾಯ ಮತ್ತು ಕರ್ತವ್ಯ.
-ಹ.ರಾಮಕೃಷ್ಣ , ಅಧ್ಯಕ್ಷರು, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement