ರಾಜಕೀಯದಿಂದ ನಿವೃತಿ ಬಯಸಿಲ್ಲ: ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ
ಹೊಸಕೋಟೆ: ತಾವು ರಾಜಕೀಯದಿಂದ ನಿವೃತಿ ಬಯಸಿಲ್ಲ ಹಾಗೂ ಬಿಜೆಪಿ ಪಕ್ಷದಲ್ಲೇ ಇರುವುದಾಗಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ಹೊಸಕೋಟೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಆತ್ಮಾವಲೋಕನಾ ಹಾಗೂ ಬೆಂಗಳೂನಲ್ಲಿ ನಡೆಯುವ ನರೇಂದ್ರ ಮೋದಿ ಸಮಾವೇಶದ ಬಗ್ಗೆ ಕಾರ್ಯಕರ್ತರ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವಂತೆ ಕಾರ್ಯಕರ್ತರ ಒತ್ತಡಕ್ಕೆ ಪ್ರತಿಕ್ರಿಯಿಸಿದ ಬಚ್ಚೇಗೌಡ ಪಕ್ಷದ ಹೈಕಮಾಂಡ್ ಅಯ್ಕೆ ಸಮಿತಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಹಲವಾರು ಹಗರಣಗಳಿಂದ ದೇಶವನ್ನು ಲೂಟಿ ಮಾಡಿದ್ದೇ ದೊಡ್ಡ ಸಾಧನೆ ಎಂದು ಹೇಳಿದರು.
ಚುನಾವಣೆಗೆ ಈಗಿನಿಂದಲೆ ಕಾರ್ಯಕರ್ತರು ಸನ್ನದ್ಧರಾಗುವಂತೆ ತಿಳಿಸಿದರು. ಮುಖಂಡ ಚಿ.ನಾ.ರಾಮು ಮಾತನಾಡಿ ಕೇಂದ್ರದಲ್ಲಿನ ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ದೇಶಕ್ಕೆ ಆಪತ್ತು ತಂದಿದೆ ಎಂದು ಹೇಳಿದರು.
ಜಿ.ಪಂ.ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ ಮಾತನಾಡಿ ಸುಭದ್ರ, ಸದೃಡ ದೇಶ ಕಟ್ಟುವಲ್ಲಿ ಪ್ರತಿಯೊಬ್ಬರು ಸಂಘಟಿತರಾಗಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡುವಲ್ಲಿ ಮುಂದಾಗುವಂತೆ ತಿಳಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ , ಮುಖಂಡರಾದ ಬಿ.ಎಂ.ನಾರಾಯಣಸ್ವಾಮಿ, ಎ.ರವಿ, ಕಾಂತರಾಜ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್, ಬಿ.ಎನ್. ಗೋಪಾಲಗೌಡ ಮತ್ತಿತರರು ಮಾತನಾಡಿದರು.