ಶಕ್ತಿಶಾಲಿ ಭಾರತದ ಆಶಾಕಿರಣ ಮೋದಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.11
ಶಕ್ತಿಶಾಲಿ ಭಾರತ ನಿರ್ಮಾಣದ ಆಶಾಕಿರಣವಾಗಿ ನರೇಂದ್ರಮೋದಿ ಕಂಡುಬರುತ್ತಿದ್ದಾರೆ. ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ ಎಂಬ ಘೋಷಣೆಯಲ್ಲಿ ನಾವೆಲ್ಲರೂ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕಿದೆ ಎಂದು ಹಿರಿಯ ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಸೋಮವಾರ ನಡೆದ ಭಾರತ ಗೆಲ್ಲಿಸಿ- ನರೇಂದ್ರ ಮೋದಿ ಅವರ ಬೆಂಗಳೂರಿನ ಬೃಹತ್ ಸಮಾವೇಶದ ಪಾಸುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ನ.17ರಂದು ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ದೇಶವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜನತೆಯೊಂದಿಗೆ ಬಹಿರಂಗ ಸಂವಾದ, ಭ್ರಷ್ಟ ಮತ್ತು ಅದಕ್ಷ ಯುಪಿಎ ಸರ್ಕಾರ ಕಿತ್ತೊಗೆಯುವ ಸಂಕಲ್ಪ, ನಗರ ಮತ್ತು ಗ್ರಾಮೀಣ ಜನತೆ, ಯುವಕರು, ವೃತ್ತಿಪರರು, ಮಹಿಳೆಯರು, ಕೃಷಿಕರ ಆಶೋತ್ತರಗಳಿಗೆ ಸ್ಪಂದನೆ ಸೇರಿದಂತೆ ಮಹತ್ವಾಕಾಂಕ್ಷೆಯ ಹಲವು ಕಾರ್ಯಕ್ರಮಗಳಿಗೆ ಬೆಂಗಳೂರು ಸಮಾವೇಶ ಸಾಕ್ಷಿಯಾಗಲಿದೆ ಎಂದ ಅವರು, ಮೋದಿ ಸಮಾವೇಶಕ್ಕೆ ಜನ ಪ್ರತಿನಿಧಿ ಶುಲ್ಕಕೊಟ್ಟು ಬರುತ್ತಿರುವುದು ಮಹತ್ವದ ವಿಚಾರ ಎಂದರು.
ಮಾಹಿತಿ ನೀಡಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪುಷ್ಪಾಶಿವಶಂಕರ್, ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ರಾಜ್ಯದ ಬಹುತೇಕ ತಾಲೂಕು ಘಟಕಗಳ ನೇತೃತ್ವದಲ್ಲಿ ಈಗಾಗಲೇ ಈ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ದೊಡ್ಡಬಳ್ಳಾಪುರ ತಾಲೂಕು ಬಿಜೆಪಿ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದೆ. ನರೇಂದ್ರಮೋದಿ ನಾಯಕತ್ವಕ್ಕೆ ಜಯವಾಗಲಿದೆ. ಅಭಿವೃದ್ಧಿಯ ಹಿತಾಸಕ್ತಿಯಲ್ಲಿ ನರೇಂದ್ರಮೋದಿ ಆಡಳಿತ ಅನಿವಾರ್ಯವಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಎಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋಪಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೆ.ಮೋಹನಕುಮಾರ್, ಮುಖಂಡರಾದ ಡಿ.ವಿ.ನಾರಾಯಣಶರ್ಮ, ಎಂ.ವಿ.ರಾಜಲಕ್ಷ್ಮಿ, ಉಮಾಮಹೇಶ್ವರಿ, ನಾಗರಾಜ್, ಡಿ.ಎಲ್.ಸತ್ಯನಾರಾಯಣ್, ಸದಾಶಿವು, ಆವಲಕೊಂಡಪ್ಪ, ಗುರುರಾಜ್, ಮಹದೇವಯ್ಯ ಮತ್ತಿತರರು ಭಾಗವಹಿಸಿದ್ದರು.