ಶಾದಿ ಭಾಗ್ಯ ಯೋಜನೆ ಎಲ್ಲಾ ವರ್ಗಕ್ಕೂ ವಿಸ್ತರಿಸಿ
ಕ.ಪ್ರ.ವಾರ್ತೆ ರಾಮನಗರ ನ.11
ರಾಜ್ಯ ಸರ್ಕಾರವು ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಜಾರಿಗೊಳಿಸಿರುವ ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ಜನತಾ ಪಕ್ಷದ ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯಡಿ ರು.50 ಸಾವಿರ ನೀಡುವುದು ಸ್ವಾಗಾತಾರ್ಹ ವಿಚಾರ. ಆದರೆ, ಈ ಯೋಜನೆಯನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿರುವುದು ಖಂಡನಾರ್ಹವಾದುದಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ದುರದ್ದೇಶ ಈ ಯೋಜನೆಯ ಹಿಂದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬೇರೆ ಜನಾಂಗಕ್ಕೆ ಸೇರಿದ ಕಡು ಬಡವರಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಜನರಿದ್ದಾರೆ. ಬಡವರ ಕಲ್ಯಾಣವೇ ಸರ್ಕಾರದ ಉದ್ದೇಶವಾಗಿದ್ದರೆ ಜಾತಿ ತಾರತಮ್ಯ ಮಾಡದೆ ಎಲ್ಲಾ ವರ್ಗದ ಬಡವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಆಧಾರಿತ ಯೋಜನೆ ಜಾರಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಜಾತಿ ಆಧಾರಿತವಾಗಿಯೇ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಎಲ್ಲಾ ವರ್ಗದ ಜನರನ್ನೂ ಸಮಾನ ದೃಷ್ಟಿಯಲ್ಲಿ ನೋಡಬೇಕಾದ ಸರ್ಕಾರ ಕೆಲವೊಂದು ಜಾತಿಗೆ ಮಾತ್ರ ಸೀಮಿತವಾದ ಯೋಜನೆಗಳನ್ನು ಜಾರಿಗೆ ತಂದು, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಹಾಗೆಯೇ ಎಪಿಎಲ್ ಕಾರ್ಡುದಾರರಿಗೆ ನೀಡಲಾಗುತ್ತಿದ್ದ ಪಡಿತರವನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಮಧ್ಯಮ ವರ್ಗದ ಜನರು ಜೀವನ ಸಾಗಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಹಿಂದಿನಂತೆ ಎಪಿಎಲ್ ಕಾರ್ಡ್ದಾರರಿಗೂ ಪಡಿತರ ವಿತರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ನಿರ್ಮಾಣ ಕಾಮಗಾರಿ ಚಾಲನೆಗೆ ಸಚಿವರು ಕುಂಟು ನೆಪ ಹೇಳಿ, ಕಾಲ ಹರಣ ಮಾಡುತ್ತಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕೆಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ನಾಗರಾಜು, ಪದಾಧಿಕಾರಿಗಳಾದ ಶ್ರೀನಿವಾಸ, ಕೃಷ್ಣೇಗೌಡ, ರಮೇಶ, ಶಿವಲಿಂಗಯ್ಯ, ಮಹದೇವಯ್ಯ, ಫೈರೋಜ್, ಕುಮಾರಸ್ವಾಮಿ, ರುದ್ರೇಶ ಮತ್ತಿತರರು ಹಾಜರಿದ್ದರು.
ಶಾದಿ ಭಾಗ್ಯ: ರಾಜಕೀಯ ಬೇಡ...
ಸೂಲಿಬೆಲೆ: ರಾಜ್ಯದಲ್ಲಿರುವ ಎಲ್ಲ ಸಮುದಾಯದಲ್ಲಿ ಬಡವರ್ಗದವರು ಇದ್ದಾರೆ. ಒಂದು ಯೋಜನೆ ಒಂದು ವರ್ಗಕ್ಕೆ ಸಮೀತವಾಗದೇ ಎಲ್ಲ ವರ್ಗದ ಬಡವರಿಗೆ ಸಿಗುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ.
ಸೂಲಿಬೆಲೆ ಸಮೀಪದ ಅತ್ತಿಬೆಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚನ್ನಪರಮೇಶ್ವರಸ್ವಾಮಿ ದೇಗುಲಗಳ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳ ನೆಪದಲ್ಲಿ ಒಂದು ವರ್ಗಕ್ಕೆ ಅನುಕೂಲವಾಗುವಂತೆ ಆದೇಶಗಳನ್ನು ಮಾಡುವುದು ಸರಿಯಲ್ಲ. ಎಲ್ಲ ಜನಾಂಗದಲ್ಲಿ ಬಡವರಿದ್ದಾರೆ. ಇವರಿಗೆ ಈ ಸೌಲಭ್ಯ ಕಲ್ಪಿಸಲಿ. ರಾಜ್ಯದಲ್ಲಿನ ಜನತೆ ತಮ್ಮದೇ ಆಚಾರ ವಿಚಾರಗಳನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಈಗ ಇದಕ್ಕೆ ಕಡಿವಾಣ ಹಾಕಲು ಹೊರಟಿರುವುದು ಸರಿಯಲ್ಲ. ದೇವರು, ಪೂಜೆ, ಪುನಸ್ಕಾರ ಅವರವರ ನಂಬಿಕೆ ಸಂಬಂಧಪಟ್ಟ ವಿಚಾರ. ಇದಕ್ಕೆ ಗೆರೆ ಹಾಕುವುದು ಧಾರ್ಮಿಕವಾಗಿ ಕೆಲ ಸಮುದಾಯ ಭಾವನೆಗಳನ್ನು ತುಳಿದಂತಾಗುತ್ತದೆ. ಆಚಾರ-ವಿಚಾರಗಳು, ಸಂಪ್ರದಾಯಗಳು ಇಂದು, ನಿನ್ನೇ ಹುಟ್ಟಿಲ್ಲ. ಹಿಂದಿನಿಂದಲೂ ಬೆಳೆದುಕೊಂಡ ಬಂದ ಸಂಪ್ರದಾಯಗಳಿಗೆ ಈಗ ಕಡಿವಾಣ ಹಾಕಲು ಹೊರಟಿದ್ದು ಕೆಲ ಸಮುದಾಯಕ್ಕೆ ನೋವುಂಟು ಮಾಡಬಹುದು ಎಂದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿದರು.
ಸಾನಿಧ್ಯ ವಹಿಸಿದ ಕೆಂಗೇರಿ ಮಠದ ಕುಮಾರನಾಥ ಸ್ವಾಮೀಜಿ ಮಾತನಾಡಿ, ಮನುಷ್ಯನ ಒತ್ತಡ ಜೀವನದಿಂದ ಮುಕ್ತಿ ಹೊಂದಲು ಧಾರ್ಮಿಕವಾಗಿ ದೇವರ ಧ್ಯಾನದತ್ತ ಚಿತ್ತ ಹರಿಸಬೇಕು ಎಂದರು. ಜೀರ್ಣೋದ್ಧಾರಗೊಂಡ ನವಗ್ರಹ ದೇಗುಲಗಳು ಉದ್ಘಾಟನೆ, ರಾಜಗೋಪುರ, ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ್ಯಕ್ರಮಗಳ ನಡೆದವು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್. ಗೋಪಾಲಗೌಡ, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಎಂ. ನಾರಾಯಣಸ್ವಾಮಿ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ಗೌಡ, ರಾಜಶೇಖರ್ ಗೌಡ, ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ಮುಖಂಡ ನಾಗೇಶ್ ಮೊದಲಾದವರು ಭಾಗವಹಿಸಿದ್ದರು.
ಶಾದಿ ಭಾಗ್ಯ ಯೋಜನೆ ವಿಸ್ತರಿಸಿ
ಆನೇಕಲ್ಲು: ಶಾದಿ ಭಾಗ್ಯ ಯೋಜನೆ ಜಾರಿ ಮಾಡಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ ಸಮಾಜದ ಇತರ ವರ್ಗದ ಬಡ ಜನತೆಯನ್ನೂ ಈ ಯೋಜನೆಯ ವ್ಯಾಪ್ತಿಗೆ ತಂದು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ ಎಂದು ಪ್ರಜಾ ವಿಮೋಚನಾ ಚಳವಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಆಗ್ರಹಿಸಿದ್ದಾರೆ. ಅವರು ಸಂಘಟನೆಯು ಆನೇಕಲ್ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಾಟನಾ ವೇದಿಕೆಯಲ್ಲಿ ನೂರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ ಎಲ್ಲ ವರ್ಗದವರಿಗೂ ತಲುಪುತ್ತಿದೆ. ಶಾದಿ ಭಾಗ್ಯ ಯೋಜನೆಯನ್ನು ನಿರ್ದಿಷ್ಠ ಕೋಮಿಗೆ ಜಾರಿ ಮಾಡಿದ ಮುಖ್ಯ ಮಂತ್ರಿಯವರು ಇತರ ವರ್ಗದ ಬಗ್ಗೆ ಮಲತಾಯಿ ಧೋರಣೆ ನೀತಿ ತಳೆದಿದ್ದಾರೆ. ಶಾದಿ ಭಾಗ್ಯ ಮುಸ್ಲಿಂ ಬಂಧುಗಳಿಗೂ ಮುಜುಗರ ತರುವ ವಿಷಯವಾಗಿದೆ. ಸಮಾಜದ ಮುಂದೆ ಹಲವಾರು ಹೊತ್ತಿ ಉರಿಯುತ್ತಿರುವ ಸಮಸ್ಯೆಗಳಿದ್ದು ಸಮಾನತೆಯ ಹೋರಾಟಗಾರರಾದ ಸಿದ್ದರಾಮಯ್ಯನವರು ದಲಿತ ಬಂಧುಗಳ ಬಗ್ಗೆ ವಿಶೇಷ ಕಾಳಜಿ ಮರೆಯಬೇಕಿದೆ ಎಂದರು.
ಕಂಕಣ ಭಾಗ್ಯ: ಸಂಘಟನೆಯ ರಾಜ್ಯಾಧ್ಯಕ್ಷ ಛಲವಾದಿ ನಾಗರಾಜ್ ಮಾತನಾಡಿ ಶಾದಿ ಭಾಗ್ಯ ಯೋಜನೆಯನ್ನು ಕಂಕಣ ಭಾಗ್ಯ ಎಂಬುದಾಗಿ ಮರುನಾಮಕರಣ ಮಾಡಿ ಎಲ್ಲ ವರ್ಗದ ಬಡ ಜನತೆಗೂ ವಿಸ್ತರಿಸಬೇಕು. ಯೋಜನೆಯ ಫಲಾನುಭವಿಗೆ ನೇರ ತಲುಪುವಂತೆ ಕನಿಷ್ಠ ರು. 1 ಲಕ್ಷ ಮೊತ್ತ ನಿಗದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಮುನಿಯಲ್ಲಪ್ಪ, ಮುನಿರಾಜ್, ಕೆ.ಸಿ. ನಾಗರಾಜು, ರವಿ ಮಾತನಾಡಿದರು.