ಸಮುದಾಯಭವನ ನಿರ್ವಹಣೆ ಇಲ್ಲದೆ ಈಗ ಭೂತ ಬಂಗಲೆ
ಚನ್ನಪಟ್ಟಣ: 12ವರ್ಷಗಳ ಹಿಂದೆ ಲೋಕಸಭಾ ಸದಸ್ಯರ ಅನುದಾನದಡಿ ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಬಳಿ ನಿರ್ಮಾಣಗೊಂಡ ಸಮುದಾಯಭವನ ಸಮರ್ಪಕ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಾಗಿ ಮಾರ್ಪಟ್ಟಿದೆ.
2001ರಲ್ಲಿ ಲೋಕಸಭಾ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಮಹದೇಶ್ವರ ದೇವಾಲಯದ ಬಳಿ 14 ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಸಂಸದರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿದ್ದರು.
ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡು ಸುಸಜ್ಜಿತ ಸಮುದಾಯ ಭವನ ತಲೆ ಎತ್ತಿತಾದರೂ 12 ವರ್ಷಗಳಿಂದ ಇದಕ್ಕೆ ಉದ್ಘಾಟನೆ ಭಾಗ್ಯ ದೊರೆಯದೆ ಭವನ ಪಾಳು ಬಂಗಲೆಯಂತಾಗಿದೆ. ಸಮುದಾಯ ಭವನ ನಿರ್ಮಾಣ ಗೊಂಡ ಕೆಲವೇ ತಿಂಗಳಲ್ಲಿ ಮಹದೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾರ್ಯಕೈಗೊಂಡು ದೇವಾಲಯವನ್ನು ಕೆಡವಿಹಾಕಿದ್ದರಿಂದ ಈ ಸಮುದಾಯ ಭವನದ ಬಗ್ಗೆ ಯಾರೂ ಗಮನಹರಿಸದೆ ಸಮುದಾಯ ಭವನದ ಸುತ್ತಾ ಗಿಡಗಂಟೆಗಳು ಬೆಳೆದು ಲಕ್ಷಾಂತರ ರು. ಸುರಿದು ನಿರ್ಮಾಣ ಮಾಡಿದ ಕಟ್ಟಡ ನಿಷ್ಪ್ರಯೋಜಕವಾಗಿ ಶಿಥಿಲ ಗೊಳ್ಳುತ್ತಿದೆ.
ಸುಸಜ್ಜಿತ ಕಟ್ಟಡ: ಹಿಂದೆ ಮಹದೇಶ್ವರ ದೇವಾಲಯದಬಳಿ ಕಡುಬಡ ಕುಟುಂಬಗಳ ವಿವಾಹ ನಡೆಯುತ್ತಿದ್ದರಿಂದ ಈ ಮದುವೆ ಕಾರ್ಯಗಳಿಗೆ ಅನುಕೂಲವಾಗುವಂತೆ ಸಮುದಾಯಭವನವು ವಿಶಾಲವಾದ ಹಾಲ್, ಅಡುಗೆ ಮನೆ, ವಧು-ವರರ ಕೊಠಡಿಗಳನ್ನು ಹೊಂದಿದ್ದು, ಮದುವೆಯ ಜತೆಗೆ ಇತರೆ ಧಾರ್ಮಿಕ ಕಾರ್ಯಗಳಿಗೂ ಅನುಕೂಲವಾಗಲಿತ್ತಾದರೂ ಸಂಬಂಧಿಸಿದ ಮಂದಿಯ ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರುಪಯುಕ್ತವಾಗಿದೆ.
ಕಿಟಕಿಬಾಗಿಲು ಮಾಯ: ಕಟ್ಟಡದ ಉಸ್ತುವಾರಿಯನ್ನು ಜಿ.ಪಂ ನೋಡಿ ಕೊಳ್ಳ ಬೇಕಿತ್ತಾದರೂ ಅಧಿಕಾರಿಗಳು ಇತ್ತ ಗಮನಹರಿಸದ ಪರಿಣಾಮ ಕಟ್ಟಡಕ್ಕೆ ಅಳವಡಿಸಲಾಗಿದ್ದ ಕಿಟಕಿಬಾಗಿಲುಗಳನ್ನು ಕಳ್ಳರು ಕಳವು ಮಾಡಿದ್ದು, ನಿರ್ಜನ ಪ್ರದೇಶವಾಗಿರುವುದರಿಂದ ಇಲ್ಲಿ ಯಾರೂ ಸುಳಿಯದಿರುವುದನ್ನು ಮನಗಂಡು ದೇವಾಲಯದ ಆವರಣದಲ್ಲಿರುವ ಬೋರ್‌ವೆಲ್ ಲಾರಿ ಕೆಲಸಗಾರರು ಕಟ್ಟಡದ ಒಂದು ಭಾಗವನ್ನು ಅಡುಗೆ ಮನೆಯನ್ನಾಗಿ ಬಳಸಿಕೊಂಡಿದ್ದಾರೆ.
ಸಾತನೂರು- ಚನ್ನಪಟ್ಟಣ ಮುಖ್ಯರಸ್ತೆಯಲ್ಲೇ ಇರುವ ಈ ಸಮುದಾಯ ಭವನದ ಆಸುಪಾಸಿನಲ್ಲಿರುವ ಎರಡು ಕಲ್ಯಾಣ ಮಂಟಪಗಳಿಗೆ ಸಾವಿರಾರು ರು. ಹಣ ತೆತ್ತು ಮದುವೆ ಮತ್ತಿತರ ಶುಭ ಸಮಾರಂಭಕ್ಕೆ ಬಾಡಿಗೆಗೆ ಪಡೆಯುತ್ತಿದ್ದು, ಈ ಸಮುದಾಯ ಭವನವನ್ನು ಸಮರ್ಪಕವಾಗಿ ಬಳಸಿ ಕೊಂಡಿದ್ದೇ ಆದಲ್ಲಿ ಕಡುಬಡವರಿಗೆ ಅನುಕೂಲವಾಗಲಿದೆ.
ಈ ಕಟ್ಟಡ ಸಮೀಪ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಕನಿಷ್ಠ ಅಂಗನವಾಡಿ ಕೇಂದ್ರಕ್ಕೆ ನೀಡಿದರೂ ಪ್ರತಿತಿಂಗಳು ಸರ್ಕಾರದಿಂದ ಸಂದಾಯವಾಗುವ ಸಾವಿರಾರು ರು. ಬಾಡಿಗೆ ಹಣ ಉಳಿಯುತ್ತದೆ. ಗೃಹ ಮಂಡಳಿ ಬಡಾವಣೆಗೆ ಹೊಂದಿಕೊಂಡಂತೆಯೇ ಇರುವ ಈ ಭವನ ಅಂಗನವಾಡಿಗಾಗಲೀ ಅಥವಾ ಸರ್ಕಾರಿ ಇಲಾಖೆಗಳ ಉಪಯೋಗಕ್ಕಾಗಲೀ ಬಳಸಿಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗ ಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.