ಅರಣ್ಯ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ
ಚನ್ನಪಟ್ಟಣ: ಕಾಡುಪ್ರಾಣಿಗಳ ದಾಳಿಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈತರೊಂದಿಗೆ ಅರಣ್ಯ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಆನೆ, ಚಿರತೆಗಳ ಹಾವಳಿ ಹೆಚ್ಚಾಗಿದೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದ ಬಾಳೆ, ತೆಂಗು, ಮಾವು, ಬತ್ತ, ರಾಗಿ ಸೇರಿದಂತೆ ರೈತರು ಬೆಳೆದ ವಿವಿಧ ಬೆಳೆಗಳು ಆನೆಗಳ ಪಾಲಾಗಿವೆ. ಆನೆಗಳನ್ನು ಕಾಡಿಗೆ ಓಡಿಸುವಂತೆ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದೆಯಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಿಂದ ಆನೆಗಳು ಪದೇ ಪದೇ ಬರುತ್ತಲೇ ಇವೆ. ಶ್ಯಾನುಬೋಗನಹಳ್ಳಿಯ ಸುತ್ತಮುತ್ತಲ ಗ್ರಾಮಗಳ ರೈತರ ಬೆಳೆಗಳು ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಲೇ ಇವೆ. ಎರಡು ಮೂರು ವರ್ಷದಿಂದಲೂ ಹಾನಿ ನಡೆಯುತ್ತಿದ್ದರೂ ಇಲಾಖೆ ಪರಿಹಾರವನ್ನೂ ನೀಡುತ್ತಿಲ್ಲ ಇತ್ತ ದಾಳಿಯನ್ನೂ ತಪ್ಪಿಸುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಚಿರತೆಗಳು ರೈತರ ಕುರಿ, ಮೇಕೆ, ಕರುಗಳನ್ನು ಹೊತ್ತೊಯ್ಯುತ್ತಿದ್ದು, ದಿನೇ ದಿನೇ ಉಪಟಳ ಹೆಚ್ಚಾಗುತ್ತಲೇ ಇದೆ. ಇವುಗಳನ್ನು ಸೆರೆಹಿಡಿದು ದೂರದ ಕಾಡಿಗೆ ಬಿಡಲು ಇಲಾಖೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲಾಖೆ ಅಧಿಕಾರಿಗಳು ಸಮಸ್ಯೆ ಸರಿಪಡಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಇಂದಿನಿಂದಲೇ ಅರಣ್ಯಕ್ಕೆ ಓಡಿಸುವ ಕಾರ್ಯ ಆರಂಭಿಸಲಾಗುವುದು. ಹಾಗೆಯೇ ಸೋಲಾರ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸಾಗರ್, ರೈತ ಘಟಕದ ಅಧ್ಯಕ್ಷ ಎನ್.ಎಂ.ಶಂಭೂಗೌಡ, ಕೋಡಂಬಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ರವಿ, ಪದಾಧಿಕಾರಿಗಳಾದ ನಿತಿನ್, ಮಂಜೇಶ್, ವಿನಯ್ಕುಮಾರ್, ಶಶಿಕುಮಾರ್, ಚಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ, ಮನವಿ
ತಿಪಟೂರು: ತಾಲೂಕು ಅಕ್ಷರ ದಾಸೋಹ ನೌಕರರ ಸಂಘ, ಸಿಐಟಿಯು ಕಾರ್ಯಕರ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕಾರ್ಯಕರ್ತರು ಅಕ್ಷರ ದಾಸೋಹ ನೌಕರರನ್ನು ಕಾಯಂಗೊಳಿಸಬೇಕು. ಕನಿಷ್ಠ ರು. 10ಸಾವಿರ ವೇತನ ನೀಡಬೇಕು. ಪ್ರತಿ ವರ್ಷ ಅಕ್ಷರ ದಾಸೋಹ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದನ್ನು ಕೂಡಲೇ ಕೈಬಿಡಬೇಕು. ಎಲ್ಲಾ ನೌಕರರಿಗೂ ಜೀವವಿಮೆ ಕೊಡಬೇಕು. ದಸರಾ ಹಾಗೂ ಬೇಸಿಗೆ ರಜೆಯ ವೇತನ ನೀಡಬೇಕು. ಟಿಎ-ಡಿಎ ಮತ್ತು ಪ್ರತಿವರ್ಷ ಬೋನಸ್ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾ. ಅಧ್ಯಕ್ಷೆ ನಾಗರತ್ನ, ಕಾರ್ಯಕರ್ತರಾದ ರಾಧಮ್ಮ, ಕಲಾವತಿ ಮತ್ತಿತರರಿದ್ದರು.