ಅವಮಾನದ 'ಹೊರೆ' ಇಳಿಸಿಕೊಂಡ ಜೆಡಿಎಸ್!
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ನ.12
ಇಲ್ಲಿನ ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರ ಸಾಮೂಹಿಕ ಗೈರು ಹಾಜರಿಯಿಂದಾಗಿ, ಒಂದೆಡೆ ಪಕ್ಷಕ್ಕೆ ಸೋಲು, ಮತ್ತೊಂದೆಡೆ ಸ್ವಕ್ಷೇತ್ರದಲ್ಲಿ ವಿಧಾನಸಭೆ ವಿರೋಧ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖಭಂಗ ತಪ್ಪಿದಂತಾಗಿದೆ.
ರಾಮನಗರ ತಾಪಂನಲ್ಲಿ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲಾಗದ ಸ್ಥಿತಿಗೆ ಜೆಡಿಎಸ್ ತಲುಪಿದೆ. ಖುದ್ದು ಕುಮಾರಸ್ವಾಮಿ ಅವರೇ ರಂಗ ಪ್ರವೇಶಿಸಿ, ಸಂಧಾನ ನಡೆಸಿದ್ದರೂ, ಜೆಡಿಎಸ್ನ ಬೇಗುದಿ ಹೆಚ್ಚುತ್ತಲೇ ಇದೆ.
ನಿಗದಿಯಂತೆ ಮಂಗಳವಾರವೇ ಚುನಾವಣೆ ನಡೆದಿದ್ದರೆ ಕಾಂಗ್ರೆಸ್ ಗೆಲುವಿನ ನಗೆ ಬೀರುವ ಸಾಧ್ಯತೆ ನಿಚ್ಚಳವಾಗಿತ್ತು. ಜೆಡಿಎಸ್ ಮುಖಂಡರು ತಮ್ಮ ಸದಸ್ಯರನ್ನು ಸಾಮೂಹಿಕ ಗೈರಾಗುವಂತೆ ತಂತ್ರ ರೂಪಿಸಿ, ಮಾನ ಉಳಿಸಿಕೊಂಡಿದ್ದಾರೆ.
ನಿರ್ಲಕ್ಷಿಸಿದ್ದೇ ಮುಳುವಾಯ್ತು: ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲೇ ಜೆಡಿಎಸ್ ಭಿನ್ನಮತ ಸ್ಫೋಟಗೊಂಡಿತ್ತು. ಇದು ಎರಡು ಗುಂಪಿನ ಸದಸ್ಯರ ಕಚ್ಚಾಟವಾಗಷ್ಟೇ ಉಳಿಯದೆ ನಾಯಕ ಮಟ್ಟದಲ್ಲೂ ಇರುವ ಆಂತರಿಕ ಕಚ್ಚಾಟ ಅನಾವರಣಗೊಳಿಸಿತ್ತು.
16 ಸದಸ್ಯ ಬಲದ ತಾಪಂನಲ್ಲಿ ಜೆಡಿಎಸ್ 9 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿದೆ. ಈ ಪೈಕಿ ಆರು ಸದಸ್ಯರು ಒಂದು ಗುಂಪಿನಲ್ಲಿದ್ದರೆ, 3 ಸದಸ್ಯರು ಬಂಡಾಯದ ಬಾವುಟ ಹಾರಿಸಿದ್ದರು. ಕಾಂಗ್ರೆಸ್ನ ರವಿನೊಂದಿಗೆ ಬಂಡಾಯ ಜೆಡಿಎಸ್ ಅಭ್ಯರ್ಥಿ ಶಂಕರಪ್ಪ ಉಪಾಧ್ಯಕ್ಷರಾಗಿದ್ದರು.
ಒಪ್ಪಂದ ಮಾಡಿಕೊಂಡಿತ್ತು: ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲೇ ಜೆಡಿಎಸ್ ಬಂಡುಕೋರರ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲು ಜೆಡಿಎಸ್ ಬಂಡಾಯ ಸದಸ್ಯರು ವಾಗ್ದಾನ ಮಾಡಿದ್ದರು.
ಉಪಾಧ್ಯಕ್ಷ ಸ್ಥಾನದ ಚುನಾವಣೆ ಗೊಂದಲದಲ್ಲಿ ಜೆಡಿಎಸ್ ನಾಯಕರ ಪಾಲೂ ಇದೆ. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ದಿಟ್ಟ ನಿಲುವು ಪ್ರದರ್ಶಿಸದೆ, ಹಾವೂ ಸಾಯಬಾರದು ಕೋಲೂ ಮುರಿಯಬಾರದೆನ್ನುವಂತೆ ಅವರು ವರ್ತಿಸಿದ್ದೇ ಇಂದಿನ ಅವಾಂತರಕ್ಕೆ ಕಾರಣವಾಗಿದೆ.
ರಾಜಿನಾಮೆಗೂ ಹಗ್ಗಜಗ್ಗಾಟ: ಹಿಂದಿನ ಅಧ್ಯಕ್ಷೆ ಭಾನುಮತಿ ಚಿಕ್ಕಬೋರೇಗೌಡ ಅವರು ಒಮ್ಮೆ ರಾಜಿನಾಮೆ ಸಲ್ಲಿಸಿ ಹಿಂಪಡೆದಿದ್ದರು. ಮತ್ತೆ ಒತ್ತಡ ಹೇರಿ ಅವರಿಂದ ರಾಜಿನಾಮೆ ಕೊಡಿಸಲಾಯಿತು. ಅದನ್ನೂ ವಾಪಸ್ ತೆಗೆದುದುಕೊಳ್ಳಲು ಪೊಲೀಸ್ ರಕ್ಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹರ ಸಾಹಸ ನಡೆಸಿದ್ದರು.
ಸ್ವತಃ ಕುಮಾರಸ್ವಾಮಿ ಅವರೇ ದೂರವಾಣಿಯಲ್ಲಿ ಮಾತುಕತೆ ನಡೆಸಿ ಭಾನುಮತಿ ಚಿಕ್ಕಬೋರೇಗೌಡ ಅವರನ್ನು ಮನವೊಲಿಸಿದ್ದರು. ಹಾಗೂ ಹೀಗೂ ಅಧ್ಯಕ್ಷರ ರಾಜಿನಾಮೆ ಅಂಗೀಕಾರಗೊಂಡು, ತೆರವಾದ ಸ್ಥಾನಕ್ಕೆ ನ.12ರಂದು ಚುನಾವಣೆ ನಡೆಸುವುದೂ ನಿಗದಿಗೊಂಡಿತ್ತು.
ಗಂಭೀರವಾಗಿ ಪರಿಗಣಿಸಲೇ ಇಲ್ಲ: ಪಕ್ಷದಲ್ಲಿನ ಆಂತರಿಕ ಕಚ್ಚಾಟದ ಅರಿವಿದ್ದರೂ ಕುಮಾರಸ್ವಾಮಿ ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಜಿಲ್ಲಾಧ್ಯಕ್ಷ ಕೆ.ರಾಜು ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ಹೆಗಲಿಗೆ ಜವಾಬ್ದಾರಿ ವಹಿಸಿದ್ದರು.
ಕಾಂಗ್ರೆಸ್ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಂಕರಪ್ಪ ಮೇಲೆ ಜೆಡಿಎಸ್ ನಾಯಕರಿಗೆ ಅನುಮಾನ ಮೂಡಿತ್ತು. ಹೀಗಾಗಿ ಚುನಾವಣೆಗೆ ಗೈರಾಗುವಂತೆ ಮುಖಂಡರೇ ಅವರಿಗೆ ಸೂಚಿಸಿದ್ದರು. ಆದರೆ, ನಂಬಿಕಸ್ಥ ಸದಸ್ಯೆ ಭಾನುಮತಿ ಚಿಕ್ಕಬೋರೇಗೌಡ ವರಿಷ್ಠರ ಸಂಪರ್ಕಕ್ಕೆ ಸಿಗದಾದರು.
ಭಾನುಮತಿ ತಪ್ಪಿಸಿದ್ದು ಯಾರು?: ತಾಪಂ ಮೊದಲ 30 ತಿಂಗಳ ಅವಧಿಯೂ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆಗ ಮೊದಲಿಗೆ ಸುಜಾತ ಶಿವಲಿಂಗಪ್ಪ, ನಂತರ ಭಾನುಮತಿ ಅಧ್ಯಕ್ಷರಾಗಿದ್ದರು. ಆದರೆ, ಈ ಬಾರಿ ಮೊದಲ ಅವಕಾಶ ಪಡೆದ ಭಾನುಮತಿ ಕುರ್ಚಿ ಬಿಡುವ ವಿಷಯದಲ್ಲಿ ವರಿಷ್ಠರಿಗೇ ತಿರುಮಂತ್ರ ಹೇಳಿದ್ದರು.
ಇಷ್ಟು ಮಾತ್ರವಲ್ಲ, ಚುನಾವಣೆ ದಿನ ಮುಖಂಡರು ಮತ್ತು ಸದಸ್ಯರ ಸಂಪರ್ಕಕ್ಕೆ ಸಿಗದೆ, ಪಕ್ಷಕ್ಕೆ ಶಾಕ್ ನೀಡಿದರು. ಅತ್ತ ಶಂಕರಪ್ಪಗೆ ಗೈರಾಗುವಂತೆ ಮುಖಂಡರೇ ಸೂಚಿಸಿದ್ದರು. ಇತ್ತ ಭಾನುಮತಿ ತಾವಾಗಿಯೇ ಗೈರು ನಿರ್ಧಾರ ಕೈಗೊಂಡರು. ಇದರಿಂದ ಜೆಡಿಎಸ್ ಮುಖಂಡರು ಪೇಚಿಗೆ ಸಿಲುಕಿದರು. ಭಾನುಮತಿ ಗೈರುವಿನ ಹಿಂದೆ ಜೆಡಿಎಸ್ ಪ್ರಭಾವಿ ಸದಸ್ಯ ಮತ್ತು ಮುಖಂಡರ ಕೈವಾಡವಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಉಪಾಧ್ಯಕ್ಷರ ಚುನಾವಣೆಯಲ್ಲಿ ಆದ ಅಪಮಾನಕ್ಕೆ ಶಿವಪ್ರಸಾದ್ ಈ ಷಡ್ಯಂತ್ರ ರೂಪಿಸಿರಬಹುದೇ ಎನ್ನುವ ಅನುಮಾನ ವಿರೋಧಿ ಪಾಳಯವನ್ನು ಕಾಡುತ್ತಿದೆ.
ಕುದುರಿತ್ತು ಕುದುರೆ ವ್ಯಾಪಾರ: ಕಾಂಗ್ರೆಸ್ನ 7 ಸದಸ್ಯರ ಪೈಕಿ ಶೀಲಮ್ಮ ಜೆಡಿಎಸ್ ಪಾಳಯದಲ್ಲಿ ಗುರ್ತಿಸಿಕೊಂಡಿದ್ದರು. ವಿಪ್ ಜಾರಿಗೊಳಿಸುವ ಮೂಲಕ ಅವರನ್ನು ಬಲವಂತವಾಗಿ ಪಕ್ಷ ನಿಷ್ಠೆ ತೋರುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು.
ಒಂದೊಮ್ಮೆ ಶಂಕರಪ್ಪ ಹಾಜರಾದರೆ ಅವರ ಮತ ತಮಗೇ ಎಂದು ಕಾಂಗ್ರೆಸಿಗರು ನಂಬಿದ್ದರು. ಜೆಡಿಎಸ್ ಕಡೆ ಗಳಿಗೆಯಲ್ಲಿ ಸಾಮೂಹಿಕ ಗೈರುವಿನ ಪ್ರತಿತಂತ್ರ ರೂಪಿಸಿ, ಕಾಂಗ್ರೆಸ್ ತಂತ್ರ ಫಲಿಸದಂತೆ ಮಾಡಿದೆ.
ಕೋರಂ ಅಭಾವ; ತಾಪಂ ಅಧ್ಯಕ್ಷ ಚುನಾವಣೆ 26ಕ್ಕೆ ಮುಂದೂಡಿಕೆ
ರಾಮನಗರ: ಜೆಡಿಎಸ್ ಸದಸ್ಯರ ಸಾಮೂಹಿಕ ಗೈರು ಹಾಜರಿಯಿಂದಾಗಿ ಎದುರಾದ ಕೋರಂ ಅಭಾವದ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ರಾಮನಗರ ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ನ.26ಕ್ಕೆ ಮುಂದೂಡಲಾಯಿತು.
16 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್ 9 ಮತ್ತು ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಭಾನುಮತಿ ಚಿಕ್ಕಬೋರೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿತ್ತು.
ಜೆಡಿಎಸ್ ಅಭ್ಯರ್ಥಿಯಾಗಿ ಸುಜಾತ ಶಿವಲಿಂಗಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಮಂಜುನಾಥ್ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದರು. ಮಧ್ಯಾಹ್ನ 1ಕ್ಕೆ ಚುನಾವಣೆ ನಡೆಯಬೇಕಿತ್ತು. ಸಭೆ ನಡೆಸಲು ಒಟ್ಟು ಸದಸ್ಯ ಬಲದಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಹಾಜರಿರಬೇಕಿತ್ತು.
ಜೆಡಿಎಸ್ನ ಎಲ್ಲ 9 ಸದಸ್ಯರು ಸಾಮೂಹಿಕ ಗೈರಾದರು. ಕಾಂಗ್ರೆಸ್ನ 7 ಸದಸ್ಯ ಸಭಾಂಗಣದಲ್ಲಿ ಹಾಜರಿದ್ದರು. ಪಂಚಾಯತ್ ರಾಜ್ ಅಧಿನಿಯಮದಂತೆ ಕೋರಂ ಇಲ್ಲದ ಕಾರಣ ಚುನಾವಣೆ ಮುಂದೂಡಿರುವುದಾಗಿ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಡಾ.ಸ್ನೇಹ ಘೋಷಿಸಿದರು.
ಕಾಂಗ್ರೆಸ್ ಸದಸ್ಯರ ಪಟ್ಟು: ಜೆಡಿಎಸ್ನಿಂದ ಸುಜಾತ ಶಿವಲಿಂಗಪ್ಪ ನಾಮಪತ್ರ ಸಲ್ಲಿಸಿದ್ದು, ಅವರ ಪರ ಸೂಚಕರಾಗಿ ಭದ್ರಯ್ಯ ಸಹಿ ಹಾಕಿದ್ದಾರೆ. ಹೀಗಾಗಿ ಅವರಿಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಂತಾಗಿದ್ದು, ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಸಹಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಪಂಚಾಯತ್ ಅಧಿನಿಯಮದ ಪ್ರಕಾರ ಚುನಾವಣಾ ಸಭೆ ನಡೆಸುವುದಕ್ಕೆ ಸಂಸ್ಥೆಯ ಒಟ್ಟು ಸದಸ್ಯ ಬಲದಲ್ಲಿ ಅರ್ಧಕ್ಕಿಂತ ಕಮ್ಮಿಯಿಲ್ಲದಷ್ಟು ಸದಸ್ಯರು ಹಾಜರಿರುವುದು ಕಡ್ಡಾಯ ಎಂದು ಸ್ಪಷ್ಟನೆ ನೀಡಿದ ಚುನಾವಣಾಧಿಕಾರಿಯು ಪಂಚಾಯತ್ ರಾಜ್ ಅಧಿನಿಯಮ ಪ್ರತಿ ಪ್ರದರ್ಶಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಜೆಡಿಎಸ್ ಒಡಕಿನ ಲಾಭದಿಂದ ತಾಪಂ ಆಡಳಿತವನ್ನು ಕೈವಶ ಮಾಡಿಕೊಳ್ಳಲು ಸಕಲ ತಯಾರಿ ನಡೆಸಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವಕ್ಕೆ ಸಜ್ಜಾಗಿಯೇ ಚುನಾವಣಾ ಸ್ಥಳಕ್ಕೆ ಆಗಮಿಸಿದ್ದರು.
ಜೆಡಿಎಸ್ ನಿಗೂಢ ನಡೆಯಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಹಜವಾಗಿಯೇ ನಿರಾಸೆಯಾಯಿತು. ಚುನಾವಣೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಿ, ಫಲಿತಾಂಶ ಪ್ರಕಟಿಸಬೇಕೆಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಪ್ರತಿಭಟನಾನಿರತ ಕಾರ್ಯಕರ್ತರನ್ನು ಅಡ್ಡಗಟ್ಟಿ, ಹೊರಗೆ ಸಾಗ ಹಾಕುವಲ್ಲಿ ಯಶಸ್ವಿಯಾದರು.
ಜೆಡಿಎಸ್ ನಿಯೋಗ ಭೇಟಿ: ಕಾಂಗ್ರೆಸ್ ಕಾರ್ಯಕರ್ತರ ನಿರ್ಗಮನದ ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದ ನಿಯೋಗ ಉಪ ವಿಭಾಗಾಧಿಕಾರಿ ಡಾ.ಸ್ನೇಹ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಕುಮಾರಸ್ವಾಮಿ ಅಸಮಾಧಾನ
ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ವಪಕ್ಷೀ. ಸದಸ್ಯರು ನಡೆಸಿದ ಹೈಡ್ರಾಮಾಕ್ಕೆ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಸದಸ್ಯರು ಮತ್ತು ಮುಖಂಡರ ಜತೆ ಸಮಾಲೋಚನೆಗೆ ನಿರಾಕರಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಶ್ಯಾನುಭೋಗನಹಳ್ಳಿಯ ಬೆಂಬಲಿಗರೊಬ್ಬರ ನಿವಾಸದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ತಾಪಂ ಸದಸ್ಯರ ಕುರಿತು ಮಾತನಾಡುವುದಕ್ಕೂ ಇಚ್ಛಿಸಲಿಲ್ಲ.
ಹಾರ, ಪಟಾಕಿ ತಂದಿದ್ದ ಕಾಂಗ್ರೆಸಿಗರು!
ತಾಪಂ ಅಧ್ಯಕ್ಷ ಸ್ಥಾನದಲ್ಲಿ ಗೆದ್ದೇ ತೀರುವ ಅತಿಯಾದ ಆತ್ಮವಿಶ್ವಾಸದೊಂದಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಲು ಹಾರ-ತುರಾಯಿ, ಪಟಾಕಿಗಳನ್ನು ತಂದಿಟ್ಟುಕೊಂಡಿದ್ದರು. ಕೋರಂ ಅಭಾವದಿಂದ ಚುನಾವಣೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸಿಗರು ಕೊಂಚ ಪ್ರತಿಭಟನೆ ವ್ಯಕ್ತಪಡಿಸಿ,
ಪೆಚ್ಚು ಮೋರೆಯೊಂದಿಗೆ ನಿರ್ಗಮಿಸಿದರು.
ಎತ್ತು ಏರಿಗೆ, ಕೋಣ ನೀರಿಗೆ
ಜೆಡಿಎಸ್ ಪಾಳಯದಲ್ಲಿ ಸದ್ಯದ ಸ್ಥಿತಿ ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ನಾಣ್ಣುಡಿಯಂತಾಗಿದೆ. ಮಾಗಡಿ ಶಾಸಕ ಬಾಲಕೃಷ್ಣ ತಾವಾಯಿತು, ತಮ್ಮ ಸ್ವಕ್ಷೇತ್ರ ಮಾಗಡಿಯಾಯಿತು ಎನ್ನುತ್ತಿದ್ದಾರೆ. ಪಕ್ಷದ ಆಗುಹೋಗುಗಳ ಬಗ್ಗೆ ಅವರಿಗೆ ಮೊದಲಿದ್ದ ಕಾಳಜಿ ಉಳಿದಿಲ್ಲ. ರಾಮನಗರದಲ್ಲಿ ಕುಮಾರಸ್ವಾಮಿ ನಂಬಿಕಸ್ಥ ದಳಪತಿ ಮಾಜಿ ಶಾಸಕ ಕೆ.ರಾಜು ತಾಪಂ ವಿಷಯದಲ್ಲಿ ಗುಂಪುಗಾರಿಕೆಯ ಸಸಿಯನ್ನು ನೀರು, ಗೊಬ್ಬರ ಎರೆದು ಪೋಷಿಸುತ್ತಿದ್ದಾರೆನ್ನುವ ಆರೋಪಕ್ಕೆ ಒಳಗಾಗಿದ್ದಾರೆ.