ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಈದ್ಗಾ ಮೈದಾನ ಅಕ್ರಮ ಪರಭಾರೆಗೆ ಆಕ್ರೋಶ

Srinivasa Murthy VN
Updated On : 13 Nov 2013, 1:18 am

ಚನ್ನಪಟ್ಟಣ: ಇಲ್ಲಿನ ಮಂಗಳವಾರಪೇಟೆ ಈದ್ಗಾ ಮೈದಾನವನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ತನಿಖೆ ನಡೆಸಿ, ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಈದ್ಗಾ ಪ್ರೊಟೆಕ್ಷನ್ ಅಂಡ್ ವೆಲ್‌ಫೇರ್ ಅಸೋಸಿಯೇಷನ್ ಕಾರ್ಯಕರ್ತರು ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಪಟ್ಟಣದ ಸಾತನೂರು ಸರ್ಕಲ್ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ವಕ್ಫ್ ಮಂಡಳಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಪರ ಎಂದು ಶಾದಿಭಾಗ್ಯ ಯೋಜನೆ ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ಮೊದಲು ವಕ್ಫ್ ಮಂಡಳಿಯಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಅವ್ಯವಹಾರ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಅಲ್ಪಸಂಖ್ಯಾತರು ಪ್ರಾರ್ಥನೆ ಸಲ್ಲಿಸಲು ಮೀಸಲಿರಿಸಿರುವ ಈದ್ಗಾ ಮೈದಾನವನ್ನು ಕಾಂಪೌಂಡ್ ನಿರ್ಮಾಣ ಸಮಿತಿ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ದಾಖಲೆಗಳಿವೆ. ಕೂಡಲೇ ಸಮಿತಿಯವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಬೇಕಾದಷ್ಟಿದೆ. ಆದರೆ, ಮುಸ್ಲಿಂ ಸಮುದಾಯದ ಕೆಲವು ಸ್ವಾರ್ಥಿಗಳು ತಾವೇ ಮುಂದು ನಿಂತು ಈ ಜಾಗವನ್ನು ಯಾರ ಗಮನಕ್ಕೂ ತಾರದೆ ಮಾರಾಟ ಮಾಡಿದ್ದಾರೆ. ಇದರ ಹಿಂದೆ ಭಾರೀ ಅವ್ಯವಹಾರ ನಡೆದಿದ್ದು, ಸರ್ಕಾರ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.

ಶೀಘ್ರದಲ್ಲೇ ಕೇಬಲ್ ಡಿಜಿಟಲೀಕರಣ
ತುರುವೇಕೆರೆ:
ಮುಂಬರುವ ದಿನಗಳಲ್ಲಿ ಕೇಬಲ್‌ನ್ನು ಡಿಜಿಟಲೀಕರಣ ಮಾಡುತ್ತಿರುವ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಈಗಿನಿಂದಲೇ ಕೇಬಲ್ ಗ್ರಾಹಕರನ್ನು ಸೆಟ್ ಅಪ್‌ಬಾಕ್ಸ್‌ಗೆ ಬದಲಾಯಿಸಲು ಕೇಬಲ್ ಆಪರೇಟರ್‌ಗಳು ಮುಂದಾಗಬೇಕು ಎಂದು ತಾಲೂಕು ಕೇಬಲ್ ಆಪರೇಟರ್ಸ್ ಮತ್ತು ನೌಕರರ ಸಂಘದ ನೂತನ ಅಧ್ಯಕ್ಷ ರಾಜಶೇಖರ್ ಮನವಿ ಮಾಡಿದ್ದಾರೆ. ಪಟ್ಟಣದ ತಿಪಟೂರು ರಸ್ತೆಯಲ್ಲಿ ನೂತನ ಕಚೇರಿ ಪ್ರಾರಂಭಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಡಿಜಿಟಲ್ ಸೇವೆ ಒದಗಿಸುವುದು ಅಗತ್ಯವಾಗಿದೆ. ಸ್ಪಷ್ಟ ಚಿತ್ರಣದ ಪ್ರಸಾರ ಮಾಡುವಂತೆ ಕೇಂದ್ರ ಸರ್ಕಾರ ನಿರ್ಧಿಷ್ಟ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ಆದಷ್ಟು ಬೇಗನೆ ಕೇಬಲ್ ಆಪರೇಟರ್‌ಗಳು ಗ್ರಾಹಕರ ಮನವೊಲಿಸಿ ಸೆಟ್ ಅಪ್ ಬಾಕ್ಸ್ ಗಳನ್ನು ಅಳವಡಿಸಲು ಮುಂದಾಗಬೇಕು ಎಂದು ಹೇಳಿದರು. ದಿನ ಕಳೆದಂತೆ ಬಾಕ್ಸ್ ಗಳ ಬೇಡಿಕೆ ಅಧಿಕವಾಗಲಿದ್ದು ಗ್ರಾಹಕರೂ ಕೂಡ ತಮಗೆ ಅಗತ್ಯವಿರುವ ಬಾಕ್ಸ್ ನ್ನು ಕೊಳ್ಳಲು ತಮ್ಮ ಕೇಬಲ್ ಆಪರೇಟರ್‌ಗಳ ಸಹಕಾರ ಪಡೆದುಕೊಳ್ಳಬೇಕು ಎಂದು ರಾಜಶೇಖರ್ ಎಂದು ಇದೇ ವೇಳೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement