ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮನಗರ ಜನತೆಗೆ ಇನ್ನು ದಿನಪೂರ್ತಿ ನಂದಿನಿ!

Srinivasa Murthy VN
Updated On : 13 Nov 2013, 1:22 am

ಕ.ಪ್ರ.ವಾರ್ತೆ ರಾಮನಗರ  ನ.12
ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳ ಗ್ರಾಹಕರಿಗೆ ದಿನ ಪೂರ್ತಿ ನಂದಿನಿ ಹಾಲು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಶೀಥಲ ಸಂಗ್ರಹಣಾ ಘಟಕ  
ಸ್ಥಾಪಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್ ತಿಳಿಸಿದರು.
ನಗರದ ವಿವೇಕಾನಂದನಗರ ಬಡಾವಣೆಯಲ್ಲಿ ಶೀಥಲ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗಿರುವ ಈ ಘಟಕದಿಂದ ಆರಂಭದಲ್ಲಿ ರಾಮನಗರ ಪಟ್ಟಣ ಮತ್ತು ಇತರ ತಾಲೂಕು ಕೇಂದ್ರಗಳಲ್ಲಿ ದಿನ ಪೂರ್ತಿ ನಂದಿನಿ ಹಾಲು ಲಭ್ಯವಾಗಲಿದೆ ಎಂದರು.
ಇದೇ ಮೊದಲ ಬಾರಿಗೆ: ಇದೇ ಮೊದಲ ಬಾರಿಗೆ ಬೆಂಗಳೂರು-ಮೈಸೂರ ಹೆದ್ದಾರಿಯಲ್ಲಿ ಮಿನಿ ಶೀತಲ ಶೇಖರಣಾ ಘಟಕ ಆರಂಭಗೊಂಡಿದೆ. ಇಲ್ಲಿ 4 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಹಾಲು ಶೇಖರಣೆಯಾಗಲಿದ್ದು, ಗುಣಮಟ್ಟ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಘಟಕವು ಸುಮಾರು 5 ಸಾವಿರ ಲೀಟರ್ ಹಾಲು ಶೇಖರಣಾ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಹೈಟೆಕ್ ನಂದಿನಿ ಪಾರ್ಲರ್: ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರ ಮತ್ತು ಬಿಡದಿ ಅಕ್ಕಪಕ್ಕ ಹೈಟೆಕ್ ನಂದಿನಿ ಪಾರ್ಲರ್‌ಗಳನ್ನು ಸ್ಥಾಪಿಸಲು ಕೆಎಂಎಫ್ ಉದ್ದೇಶಸಿದೆ. ಕಾಫಿ ಡೇ ಮಾದರಿಯ ಹೈಟೆಕ್ ಪಾರ್ಲರ್‌ಗಳಲ್ಲಿ ಐಸ್ ಕ್ರೀಂ, ವಿವಿಧ ಸ್ವಾದಗಳ ಹಾಲು ಸೇರಿದಂತೆ 60 ವಿಧದ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು.
ಮಂಡ್ಯದಿಂದ ಪೂರೈಕೆ: ಮಂಡ್ಯ ಹಾಲು ಒಕ್ಕೂಟದಿಂದ ರಾಮನಗರ ಜಿಲ್ಲೆಗೆ ದಿನನಿತ್ಯ 5 ಸಾವಿರ ಲೀಟರ್ ನಂದಿನಿ ಹಾಲು ಪೂರೈಕೆಯಾಗುತ್ತಿದೆ. ಇದು ಬೆಳಗ್ಗೆ ವೇಳೆ ಹಾಲು ಪೂರೈಕೆಯಾಗುತ್ತಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆ ನಂದಿನಿ ಹಾಲು ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ನಂದಿನಿ ಹಾಲನ್ನು ದಿನಪೂರ್ತಿ ಪೂರೈಸುವ ಸಲುವಾಗಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರು.5.5 ಲಕ್ಷ ವೆಚ್ಚದಲ್ಲಿ ಶೀತಲ ಘಟಕ ಆರಂಭಿಸಲಾಗಿದೆ ಎಂದು ಮಂಡ್ಯಾ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಂ.ವಿ.ಹರೀಶ್ ತಿಳಿಸಿದರು.
ಅಗತ್ಯಕ್ಕೆ ತಕ್ಕಂತೆ ಪೂರೈಕೆ: ಚಿಲ್ಲರೆ ಮಾರಾಟಗಾರರಿಗೆ ನಾಲ್ಕು ಮಿನಿ ಸರಕು ಸಾಗಣೆ ವಾಹನಗಳಲ್ಲಿ ಹಾಲು ಸರಬರಾಜು ಮಾಡಲಾಗುವುದು. ಮಧ್ಯಾಹ್ನದ ವೇಳೆ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುವುದು. ನಂದಿನಿ ಬ್ರಾಂಡ್‌ನ ಇತರ ಉತ್ಪನ್ನಗಳು ನಗರದಲ್ಲಿ ಲಭ್ಯವಾಗಲಿವೆ ಎಂದು ಹೇಳಿದರು.
ಕೆಎಂಎಫ್ ನಿರ್ದೇಶಕರಾದ ಪಿ.ನಾಗರಾಜ್, ಎಚ್.ಜೆ.ಚಂದ್ರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಪಿ.ರಾಮೇಗೌಡ, ನರಸಿಂಹಮೂರ್ತಿ, ಎಸ್.ಪಿ.ಮಹೇಶ್, ಬಿ.ಚಂದ್ರು, ಬೆಟ್ಟಸ್ವಾಮಿಗೌಡ, ರಾಮಕೃಷ್ಣೇಗೌಡ, ಡಾ.ಕೆ.ಸ್ವಾಮಿ, ಲಿಯೋ ಕಾಫಿ ಪುಡಿಯ ಜಿಲ್ಲಾ ಸಂಘಟಕ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement