ಹದಗೆಟ್ಟ ನಗರಸಭೆ ಆಡಳಿತ ವ್ಯವಸ್ಥೆ
-ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.12
ದೊಡ್ಡಬಳ್ಳಾಪುರ ನಗರ ಅಕ್ಷರಶಃ ಹೇಳೋರಿಲ್ಲ-ಕೇಳೋರಿಲ್ಲದ ಪರಿಸ್ಥಿತಿಯಲ್ಲಿದೆ. ನಗರಸಭೆಗೆ ಚುನಾವಣೆ ನಡೆದು 9 ತಿಂಗಳಾಗುತ್ತಾ ಬಂದರೂ ಇನ್ನೂ ನಗರಸಭೆ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಗೊಂದಲ ಮತ್ತು ಕೋರ್ಟಿನಲ್ಲಿ ಇತ್ಯರ್ಥವಾಗದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿಚಾರದಿಂದಾಗಿ ಚುನಾಯಿತರಾದರೂ ಅಧಿಕಾರವಿಲ್ಲದೆ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ.
ಇದಕ್ಕೆ ಪೂರಕವಾಗಿ ನಗರದಲ್ಲಿ ನೈರ್ಮಲ್ಯ, ಮೂಲಸೌಕರ್ಯಗಳ ಕೊರತೆ ಮತ್ತು ಸಮಸ್ಯೆ ಬಿಗಡಾಯಿಸಿದೆ. ನೀರಿನ ಸಮಸ್ಯೆ ತಾರಕಕ್ಕೇರಿದೆ. ರಸ್ತೆ, ಬೀದಿದೀಪ, ಸ್ವಚ್ಛತೆ, ಚರಂಡಿಗಳ ಅವ್ಯವಸ್ಥೆ, ನಿರ್ವಹಣೆ ಕಾಣದೆ ಸೊರಗುತ್ತಿರುವ ನಾಗರಿಕ ಸವಲತ್ತುಗಳು ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ಇದಾವುದಕ್ಕೂ ಜನ ಯಾರನ್ನು ಕೇಳಬೇಕು ಎಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ. ನಗರಸಭಾ ಸದಸ್ಯರು ನಗರಸಭೆಯಲ್ಲಿ ಏನೂ ಮಾಡುವಂತಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಒಟ್ಟಾರೆ ಜನ ನಗರಸಭೆ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.
ಅಕ್ರಮಗಳ ಸ್ವರ್ಗ: ಕೆಲ ನಗರಸಭಾ ಸದಸ್ಯರೇ ಆರೋಪಿಸುವಂತೆ ನಗರಸಭೆಯಲ್ಲಿ ಬೋಗಸ್ ಖಾತೆಗಳು ಅವ್ಯಾಹತ ನಡೆಯುತ್ತಿವೆ. ಚುನಾಯಿತ ವರ್ಗ ಆಡಳಿತದಲ್ಲಿ ಇಲ್ಲದೇ ಇರುವುದು ಅಕ್ರಮಗಳು ಅವ್ಯಾಹತ ನಡೆಯಲು ಕಾರಣವಾಗಿವೆ. ಸಾರ್ವಜನಿಕರ ಕೆಲಸಗಳು ನಗರಸಭೆಯಲ್ಲಿ ಸರಿಯಾಗಿ ನಡೆಯುತ್ತಿಲ್ಲ. ದಲ್ಲಾಳಿಗಳು ಆಡಳಿತ ನಿಯಂತ್ರಿಸುತ್ತಿದ್ದಾರೆ. ಸಣ್ಣ ಕೆಲಸವಾಗಬೇಕಿದ್ದರೂ ನೇರವಾಗಿ ಹೋಗಿ ಕಾರ್ಯಸಾಧಿಸಿ ಬರುವುದು ಸಾಧ್ಯವಾಗುತ್ತಿಲ್ಲ. ಎಲ್ಲ ಹಂತಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ನಗರದ ರಸ್ತೆಗಳು ಡಾಂಬರು ಕಂಡು ವರ್ಷಗಳೇ ಉರುಳಿವೆ. ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಾಗಿ ಇಡೀ ನಗರವನ್ನು ಮಾರಕವಾಗಿ ಕಾಡುತ್ತಿದೆ. ನಗರದ ಅಂದಗೆಡಿಸಿರುವ ಒಳಚರಂಡಿ ಕಾಮಗಾರಿ ಈಗಾಗಲೇ ಪೂರ್ಣಗೊಂಡು ನಾಗರೀಕರ ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಈಗ ಆ ಬಗ್ಗೆ ದನಿಯೆತ್ತುವವರೂ ಇಲ್ಲದಾಗಿದೆ.
ರಸ್ತೆಗಳು ಧೂಳುಮಯವಾಗಿವೆ. ಚರಂಡಿಗಳ ನಿರ್ವಹಣೆ ಸರಿಯಿಲ್ಲ. ಕೆಲ ಬಡಾವಣೆಗಳಲ್ಲಿ ಬೀದಿದೀಪಗಳೇ ಇಲ್ಲ. ಮತ್ತೆ ಕೆಲವೆಡೆ ಇದ್ದರೂ ಪ್ರಯೋಜನವಾಗುತ್ತಿಲ್ಲ. ಸೊಳ್ಳೆಗಳ ಕಾಟ ಮಿತಿಮೀರಿದ್ದು ಔಷಧಿ ಸಿಂಪಡಿಸುವ ಗೋಜಿಗೂ ಹೋಗದ ನಿರ್ಲಕ್ಷ್ಯ ಕಂಡುಬರುತ್ತಿದೆ. ಹೀಗಿರುವಾಗ ಅಧಿಕಾರಿಗಳು ಮಾತ್ರ ಜನರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸುವ ಕೆಲಸ ಗಂಭೀರವಾಗಿ ಮಾಡದಿರುವುದು ಚರ್ಚಾ ವಿಷಯ.
ಸಭೆ ಕರೆಯಿರಿ: ಈ ಮಧ್ಯೆ ಮಂಗಳವಾರ ತುರ್ತು ಸಭೆ ನಡೆಸಿರುವ ದೊಡ್ಡಬಳ್ಳಾಪುರ ನಗರಸಭೆಯ ಬಹುತೇಕ ಚುನಾಯಿತ ಪ್ರತಿನಿಧಿಗಳು ನಗರದ ಸಮಸ್ಯೆಗಳು ಮತ್ತು ಗೊಂದಲಗಳ ಕುರಿತು ಕೂಡಲೇ ಅಧಿಕಾರಿಗಳು ಎಲ್ಲ 31 ಚುನಾಯಿತ ನಗರಸಭಾ ಸದಸ್ಯರ ಸಭೆ ಕರೆದು ಮೌಖಿಕವಾಗಿ ಚರ್ಚಿಸಬೇಕು. ನ್ಯಾಯಾಲಯದಲ್ಲಿರುವ ಮೀಸಲಾತಿ ಪ್ರಕರಣ ಇತ್ಯರ್ಥವಾಗುವುದರೊಳಗೆ ಕನಿಷ್ಠ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸಂಬಂಧ ಸೇತುವಾಗಿ ಮತ್ತು ನಗರದ ಹಿತದೃಷ್ಟಿಯಿಂದ ಸದಸ್ಯರ ಸಭೆ ಕರೆದು ಅಹವಾಲುಗಳನ್ನು ಕೇಳುವ ಸೌಜನ್ಯ ತೋರಬೇಕು. ನಗರಸಭೆ ಆಡಳಿತದ ಎಲ್ಲ ವಿಭಾಗಗಳನ್ನು ಚುರುಕುಗೊಳಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕನಿಷ್ಠ ಪ್ರಯತ್ನವಾದರೂ ಆಗಬೇಕು ಎಂದು 20ಕ್ಕೂ ಹೆಚ್ಚು ನಗರಸಭಾ ಸದಸ್ಯರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಆಡಳಿತ ಹದಗೆಟ್ಟಿದೆ
ದೊಡ್ಡಬಳ್ಳಾಪುರದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸದಸ್ಯರು ಆಯ್ಕೆಯಾಗಿ 8 ತಿಂಗಳು ಕಳೆದರೂ ಅಧಿಕಾರ ಸಿಕ್ಕಿಲ್ಲ. ಆದರೆ ಅಧಿಕಾರಿಗಳೂ ಜನರ ಆಹವಾಲು ಕೇಳುವ ದೊಡ್ಡತನ ತೋರಿಲ್ಲ. ನಗರದಲ್ಲಿ ಸಮಸ್ಯೆಗಳು ಬೆಟ್ಟದೆತ್ತರ ಬೆಳೆದಿವೆ. ಕೂಡಲೇ ಅಧಿಕಾರಿಗಳೊಂದಿಗೆ ಸದಸ್ಯರ ಮೌಖಿಕ ಸಭೆ ನಡೆಸಲು ಅವಕಾಶ ಕೊಡಬೇಕು.
-ವಿ.ಎಸ್.ರವಿಕುಮಾರ್, ನಗರಸಭೆ ಸದಸ್ಯ.
ಜನರ ಕೆಲಸ ಆಗುತ್ತಿಲ್ಲ
ನಗರಸಭೆಯಲ್ಲಿ ಜನರ ಕೆಲಸ ಸುಲಭವಾಗಿ ಆಗುತ್ತಿಲ್ಲ. ನಗರದಲ್ಲಿ ನೈರ್ಮಲ್ಯ, ಬೀದಿದೀಪ, ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕುಡಿಯುವ ನೀರು ಮತ್ತು ದಿನಬಳಕೆ ನೀರಿನ ಸಮಸ್ಯೆಯಂತೂ ಕೇಳುವವರಿಲ್ಲದಾಗಿದೆ. ಜನರ ಸಮಸ್ಯೆಗೆ ದನಿಯಾಗದ ಆಡಳಿತ ವ್ಯವಸ್ಥೆಯಿಂದ ಪ್ರಯೋಜನವೇನು ಕೂಡಲೇ ಸಭೆ ಕರೆದು ಜನರ ಸಂಕಷ್ಟ ಬಗೆಹರಿಸಿ.
-ತ.ನ.ಪ್ರಭುದೇವ್, ನಗರಸಭೆ ಹಿರಿಯ ಸದಸ್ಯ.
ಅಕ್ರಮಗಳು ನಿಲ್ಲಲಿ
ನಗರಸಭೆಯಲ್ಲಿ ಅಕ್ರಮ ಖಾತೆಗಳು ನಡೆಯುತ್ತಿವೆ ಎಂಬ ಮಾಹಿತಿ ಇದೆ. ಕೂಡಲೇ ವ್ಯವಸ್ಥೆ ಬದಲಾಗಬೇಕು. ಜನ ಸದಸ್ಯರನ್ನು ಕೇಳುತ್ತಾರೆ. ಆದರೆ ನಮಗಿನ್ನೂ ಅಧಿಕಾರವೇ ಸಿಕ್ಕಿಲ್ಲ. ಅಧಿಕಾರಿಗಳೇ ಸಮಸ್ಯೆಗೆ ಪರಿಹಾರ ಒದಗಿಸಿ.
-ಎಂ.ಮಲ್ಲೇಶ್, ನಗರಸಭೆ ಸದಸ್ಯ.