ಹಾಡಹಗಲೇ ಇಬ್ಬರ ಬರ್ಬರ ಕೊಲೆ
ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಹಾಡಹಗಲೇ ನಡೆದಿರುವ 2 ಭೀಕರ ಕೊಲೆಗಳು ನಾಗರಿಕರಲ್ಲಿ ಭೀತಿ ಹುಟ್ಟಿಸಿವೆ. ಕತ್ತು ಸೀಳಿ ಮತ್ತು ಕೊಚ್ಚಿ ಕೊಲೆಗೈದಿರುವ ಧಾರುಣ ಘಟನೆಗಳು ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿ ಮಧ್ಯಾಹ್ನ 3.30 ವೇಳೆಯಲ್ಲಿ ದೇವರಾಜನಗರದ ಚಿನ್ನಪ್ಪ(45) ಎಂಬಾತನ ಕತ್ತು ಸೀಳಿ ಕೊಲೆ ಮಾಡಲಾಗಿದೆ. ತಾಲೂಕಿನ ಮೆಳೇಕೋಟೆ ಕ್ರಾಸ್ಬಳಿ ನಡೆದಿರುವ ಮತ್ತೊಂದು ದುಷ್ಕೃತ್ಯದಲ್ಲಿ ವಾಸುದೇವನಹಳ್ಳಿ ನಿವಾಸಿ ಹನುಮಂತರಾಯಪ್ಪ(40) ಎಂಬಾತನನ್ನು ಕೈ-ಕಾಲು-ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಕೊಲ್ಲಲಾಗಿದೆ.
ಘಟನೆ 1: ಇಲ್ಲಿನ ನಗರ ಬಸ್ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನೂರಾರು ಜನ ನೋಡ ನೋಡುತ್ತಿದ್ದಂತೆ ಜಗಳ ಆರಂಭಿಸಿದ ಇಬ್ಬರು ವ್ಯಕ್ತಿಗಳು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಮಾರಕಾಸ್ತ್ರಗಳನ್ನು ಹಿಡಿದು ಬಡಿದಾಡಿದ್ದಾರೆ. ಹರಿತವಾದ ಚಾಕು ಹಿಡಿದೇ ಮೃತಪಟ್ಟಿರುವ ಚಿನ್ನಪ್ಪನ ಮೃತದೇಹ ಜಗಳ-ಬಡಿದಾಟಕ್ಕೆ ಸಾಕ್ಷಿಯಾಗಿದೆ. ಈತನನ್ನು ಇಲ್ಲಿನ ದೇವರಾಜನಗರದ ನಿವಾಸಿ ಎನ್ನಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕೊಲೆಗಾರ ಹತ್ತಾರು ಜನರ ಕಣ್ಣ ಮುಂದೆಯೇ ಪರಾರಿಯಾಗಿದ್ದಾನೆ. ಕತ್ತು ಕೊಯ್ದು ಹೋದ ಪರಿಣಾಮ ತೀವ್ರ ರಸ್ತಸ್ರಾವದ ಮಡುವಿನಲ್ಲಿ ಬಿದ್ದ ಚಿನ್ನಪ್ಪ ಜನರ ಕಣ್ಣಮುಂದೆಯೇ ಒದ್ದಾಡಿ ಅಸುನೀಗಿದ್ದಾನೆ. ಮೃತಪಟ್ಟಿರುವ ವ್ಯಕ್ತಿ ನೇಕಾರಿಕೆ ಕೆಲಸ ಮಾಡಿಕೊಂಡಿದ್ದ. ಆತನಿಗೆ ಮನೆ ಇರಲಿಲ್ಲ. ಹೊರಗೇ ಅಲೆದಾಡಿಕೊಂಡೇ ಜೀವನ ಸಾಗಿಸುತ್ತಿದ್ದ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಈತನ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ, ನಗರ ಠಾಣೆ ಆರಕ್ಷಕ ನಿರೀಕ್ಷಕರು, ಅಪರಾಧ ವಿಭಾಗದ ಎಸೈ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆ 2: ತಾಲೂಕಿನ ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಮೆಳೇಕೋಟೆ ಕ್ರಾಸ್ ಬಳಿ ಸಂಜೆ 4 ಗಂಟೆ ವೇಳೆಯಲ್ಲಿ ನಡೆದಿರುವ ಘಟನೆಯಲ್ಲಿ ವಾಸುದೇವನಹಳ್ಳಿ ನಿವಾಸಿ ಹನುಮಂತಪ್ಪ(42) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಈತ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ವಾಸುದೇವನಹಳ್ಳಿಯಿಂದ ಮೆಳೇಕೋಟೆ ಕಡೆಗೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ವ್ಯಕ್ತಿಯ ತಲೆ, ಕೈ-ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಕೊಂದಿದ್ದಾರೆ. ಸ್ಥಳೀಯರು ಹೇಳುವಂತೆ ಈಗ ಕೊಲೆಯಾಗಿರುವ ಹನುಮಂತಪ್ಪ ತಂದೆ-ತಾಯಿಯರನ್ನು ಕೂಡ ಇದೇ ಸ್ಥಳದ ಸುತ್ತಮುತ್ತ ಕೊಲ್ಲಲಾಗಿತ್ತು ಎನ್ನುತ್ತಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಶಾಲೆ ಬಿಟ್ಟ ನಂತರ ದಾರಿಯಲ್ಲಿ ಬರುತ್ತಿದ್ದ ಮಕ್ಕಳು ಅನಾಥವಾಗಿ ಬಿದ್ದಿದ್ದ ಶವ ನೋಡಿ ಮೆಳೇಕೋಟೆ ಕ್ರಾಸ್ ಬಳಿ ಬಂದು ಜನರಿಗೆ ವಿಷಯ ಮುಟ್ಟಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡೂ ಘಟನೆಗಳಿಗೆ ಸಂಬಂಧಪಟ್ಟಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತುರ್ತು ಕ್ರಮ ಕೈಗೊಳ್ಳಬೇಕಿದೆ. ಒಂದೇ ದಿನ ನಡೆದಿರುವ 2 ಘಟನೆಗಳು ದೊಡ್ಡಬಳ್ಳಾಪುರವನ್ನು ತಲ್ಲಣಗೊಳಿಸಿದ್ದು ಜನತೆ ತೀವ್ರ ಆತಂಕದಲ್ಲಿದ್ದಾರೆ. ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೂಡ ಪೊಲೀಸರು ಈವರೆಗೆ ಆರೋಪಿಗಳ ಪತ್ತೆಕಾರ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎಂಬುದು ಜನರ ಆರೋಪ.