ಹೇಳದೆ ಮಾಡುವವ ರೂಢಿಯೊಳಗುತ್ತಮ!
ಕ.ಪ್ರ.ವಾರ್ತೆ ರಾಮನಗರ ನ.12
ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ತಡೆ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸಮರ ಸಾರಿದ್ದು, ನಾನು ಏನು ಮಾಡುತ್ತೇನೆ ಎನ್ನುವುದನ್ನು ಹೇಳದೆ ಮಾಡಿ ತೋರುತ್ತೇನೆ ಎನ್ನುವ ಸವಾಲಿನ ಮಾತನಾಡಿದ್ದಾರೆ.
ಈ ಜಿಲ್ಲೆಗೆ ವರ್ಗವಾಗಿ ಬಂದ ಎಲ್ಲ ಜಿಲ್ಲಾಧಿಕಾರಿಗಳೂ ಅಕ್ರಮ ಮರಳು ದಂಧೆಕೋರರಿಗೆ ಕಡಿವಾಣ ಹಾಕುವುದಾಗಿ ಹೇಳಿಕೆ ನೀಡುವುದರಲ್ಲೇ ಕಾಲ ಕಳೆದಿದ್ದಾರೆ. ಆದರೆ, ವಿಶ್ವನಾಥ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
7 ವರ್ಷದಲ್ಲಿ 12 ಜಿಲ್ಲಾಧಿಕಾರಿ: ಜಿಲ್ಲೆಯಾಗಿ 7 ವರ್ಷ ತುಂಬಿರುವ ರಾಮನಗರದ ಜಿಲ್ಲಾಧಿಕಾರಿಗಳ ಫಲಕದಲ್ಲಿ 14 ಹೆಸರು ಮೂಡಿವೆ. ಈ ಪೈಕಿ ಆರು ಮಂದಿ ಅಧಿಕಾರಿಗಳು ಎಗ್ಗಿಲ್ಲದೆ ಸಾಗಿರುವ ಮರಳು ದಂಧೆ ಬಗ್ಗೆ ಹೇಳಿಕೆಗೆ ಸೀಮಿತರಾದರು. ಕಡೆಗೆ, ಕೃಪಾಶೀರ್ವಾದ ನೀಡಿ ಕಳಂಕ ಹಚ್ಚಿಕೊಂಡರು. ಅಧಿಕಾರ ವಹಿಸಿಕೊಂಡ ಮಾರನೆ ದಿನವೇ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವುದು ಹೇಗೆನ್ನುವುದನ್ನು ಬಾಯಿ ಮಾತಿನಲ್ಲಿ ಹೇಳದೆ ಕೃತಿಯಲ್ಲಿ ಮಾಡಿ ತೋರಿಸುವ ಮಾತುಗಳನ್ನಾಡಿ ಭರವಸೆ ಮೂಡಿಸಿದ್ದಾರೆ.
ಸವಾಲಿನ ಕಾಯಕ: ಈ ಜಿಲ್ಲೆಯಲ್ಲಿ ಮರಳು ಮಾಫಿಯಾ ಜತೆಗೆ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪಕ್ಷಾತೀತವಾಗಿ ರಾಜಕಾರಣಿಗಳು ಪಾಲುದಾರರು. ಪ್ರತಿಯೊಂದು ಪ್ರಕರಣದಲ್ಲೂ ಅಧಿಕಾರಸ್ಥ ರಾಜಕಾರಣಿಗಳೇ ಲಾಬಿ, ಶಿಫಾರಸ್ಸಿಗೆ ಇಳಿಯುತ್ತಿದ್ದಾರೆ.
ಇಷ್ಟು ಸಾಲದೆನ್ನುವಂತೆ ಮರಳು ದಂಧೆಕೋರರು ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಮಟ್ಟದ ಅಧಿಕಾರಿಗಳನ್ನೇ ಅಡ್ಡಗಟ್ಟಿ, ಅಟ್ಟಾಡಿಸಿರುವ ನಿದರ್ಶನವಿದೆ. ಇಷ್ಟೆಲ್ಲ ಸವಾಲುಗಳ ನಡುವೆ ವಿಶ್ವನಾಥರ ವೀರಾವೇಶ ಎಷ್ಟರ ಮಟ್ಟಿಗೆ ನಡೆಯಲಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಅಧಿಕಾರಿಗಳಿಗೆ ಲಗಾಮು: ಅಕ್ರಮ ಮರಳುಗಾರಿಕೆಯಿಂದ ಪ್ರಾಕೃತಿಕ ಸಂಪತ್ತಿನ ಲೂಟಿ ಮಾತ್ರವಲ್ಲದೆ ಅದೆಷ್ಟೋ ರೈತರು, ಕೂಲಿ ಕೆಲಸಗಾರರ ಬಲಿಯೂ ಆಗಿದೆ. ಇಂತಹ ಪ್ರಕರಣಗಳನ್ನೂ ಮುಚ್ಚಿ ಹಾಕಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ನೂತನ ಜಿಲ್ಲಾಧಿಕಾರಿ ಮೊದಲು ಅಧಿಕಾರಿಗಳಿಗೆ ಕಡಿವಾಣ ಹಾಕುವುದು ಸೂಕ್ತ.
ಜಾರಿಗೆ ಬಾರದ ನಿಯಮ: ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿದವರು, ಮರಳುಗಾರಿಕೆಗೆ ಕಂದಾಯ ಜಮೀನು ಬಿಟ್ಟುಕೊಟ್ಟವರು, ಮರಳುಗಾರಿಕೆಯಲ್ಲಿ ತೊಡಗಿಸಿದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಿಂದಿನ ಜಿಲ್ಲಾಧಿಕಾರಿ ರೂಪಿಸಿದ ನಿಯಮವಿನ್ನೂ ಜಾರಿಗೆ ಬಂದಿಲ್ಲ.
ಮರಳುಗಾರಿಕೆಗೆ ಬಳಕೆಯಾಗುತ್ತಿರುವ ಕಂದಾಯ ಜಮೀನನ್ನು ಪಡಾ ಎಂದು ಘೋಷಿಸಿ, ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಘೋಷಣೆಯೂ ಕಾರ್ಯರೂಪಕ್ಕೆ ಬಂದಿಲ್ಲ. ದಂಧೆಕೋರರು ಅಧಿಕಾರಿಗಳ ಖಾಸಾ ದೋಸ್ತಿಗಳಾಗಿದ್ದಾರೆ.
ಲಂಚ, ರುಷುವತ್ತು ನೀಡುತ್ತಾ ಸರ್ಕಾರಿ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡಿದ್ದಾರೆ. ಎಂಜಿಲು ಕಾಸಿನ ಆಸೆಗೆ ಬಿದ್ದ ಅಧಿಕಾರಿಗಳು ಜಿಲ್ಲೆ ಹಿತ ಬಲಿಕೊಡುತ್ತಿದ್ದಾರೆ.
ಎತ್ತಂಗಡಿ ಮಟ್ಟಕ್ಕೂ ಲಾಬಿ: ಮರಳು ದಂಧೆಕೋರರು ರಾಜಾರೋಷವಾಗಿಯೇ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಮ್ಮ ದಂಧೆಗೆ ಕಡಿವಾಣ ಹಾಕಲು ಮುಂದಾಗುವ ಅಧಿಕಾರಿಗಳ ಜೇಬಿಗೆ ಲಂಚ ಇಳಿಸುತ್ತಾರೆ. ಒಪ್ಪದಿದ್ದರೆ ಸರ್ಕಾರದ ಮಟ್ಟದಲ್ಲೇ ಲಾಬಿ ನಡೆಸಿ, ಎತ್ತಂಗಡಿಯನ್ನೂ ಮಾಡಿಸುತ್ತಿದ್ದಾರೆ. ಓಟಿನ ರಾಜಕಾರಣಕ್ಕೆ ಜೋತು ಬಿದ್ದಿರುವ ಬಹುತೇಕ ಚುನಾಯಿತ ಪ್ರತಿನಿಧಿಗಳು ದಂಧೆಕೋರರಿಗೆ ಶ್ರೀರಕ್ಷೆಯಾಗಿದ್ದಾರೆ. ರಾಜಕಾರಣಿಗಳೇ ದಂಧೆಗೆ ಇಳಿದಿರುವುದು, ಹಫ್ತಾ ವಸೂಲು ಮಾಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ನೂತನ ಜಿಲ್ಲಾಧಿಕಾರಿ ವಿಶ್ವನಾಥ್ ಎಲ್ಲವನ್ನು ಮೆಟ್ಟಿನಿಂತು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದ್ದೇ ಆದರೆ ಈ ಜಿಲ್ಲೆಗೆ ಮಹತ್ಕಾರ್ಯ ಮಾಡಿದಂತೆಯೇ ಸರಿ.
ಅಧಿಕಾರಿಗಳಿಗೆ ಡಿಸಿ ಕಿವಿಮಾತು
ಸರ್ಕಾರಿ ಅಧಿಕಾರಿಗಳು ಎಲ್ಲಾ ಸಂದರ್ಭದಲ್ಲೂ ಕಾನೂನಿಗೆ ಅಂಟಿಕೊಳ್ಳದೆ, ಮಾನವೀಯತೆ ದೃಷ್ಟಿಯಿಂದಲೂ ಕಾರ್ಯ ನಿರ್ವಹಿಸುವಂತೆ ನೂತನ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಕಟಿಬದ್ಧರಾಗಿರಬೇಕು. ತಮ್ಮ ಬುದ್ಧಿವಂತಿಕೆಯನ್ನು ಕೆಲಸ ನಿರ್ವಹಿಸುವ ಮೂಲಕ ಸಾಬೀತುಪಡಿಸಬೇಕು ಎಂದರು. ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ಪ್ರತಿಯೊಂದು ಸಭೆಗೆ ಪಾಲ್ಗೊಳ್ಳುವಾಗ ಇಲಾಖೆಯ ಸಮಗ್ರ ಮಾಹಿತಿ, ಅಂಕಿ-ಅಂಶವನ್ನು ಒಳಗೊಂಡ ಪಕ್ಷಿನೋಟವನ್ನು ಜತೆಗಿಟ್ಟುಕೊಳ್ಳಬೇಕು. ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ವಿವಿಧ ಸಮಸ್ಯೆ ಪರಿಹಾರಕ್ಕೆ ಡಿಸಿ ಆದ್ಯತೆ
ರಾಮನಗರ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವುದು, ಸಾಂಪ್ರದಾಯಿಕ ಕೃಷಿ ಜತೆಗೆ ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ. ಅರಣ್ಯ ಕೃಷಿ ಹೆಚ್ಚಿಸುವ ನಿಟ್ಟಿನಲ್ಲಿ ರೈತರ ಜಮೀನುಗಳಲ್ಲಿ ಶ್ರೀಗಂಧ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ವಿಶ್ವನಾಥ್ ಹೇಳಿದರು. ಮಳೆ ನೀರು ಪೋಲಾಗುವುದನ್ನು ತಡೆಗಟ್ಟುವುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಲಘು ಪೋಷಕಾಂಶಗಳ ಬಳಕೆ ಬಗ್ಗೆ ರೈತರಿಗೆ ಅರಿವಿನ ಕಾರ್ಯಕ್ರಮ ಜಾರಿ. ನಿರುದ್ಯೋಗ ಸಮಸ್ಯೆ ನಿವಾರಿಸಲು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದೊಂದಿಗೆ ಸ್ವ ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.